ಬೆಂಗಳೂರು: ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಹಾಗೂ ಬೇರೆ ನಗರಗಳಲ್ಲಿ ಡ್ರಗ್ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಇದನ್ನು ಕೇವಲ ಸಿಸಿಬಿಯಲ್ಲಿ ಮಾಡುವುದು ಅಲ್ಲ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಮಾದಕ ವಸ್ತು ಸರಬರಾಜನ್ನು ಮಟ್ಟ ಹಾಕಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಗೆ ಸೂಚನೆ ಕೊಟ್ಟಿದ್ದೇನೆ. ಎಷ್ಟು ಜಾಲ ಇದೆ ಅಷ್ಟೇ ಜಾಲದಲ್ಲಿ ಅದನ್ನು ಕಡಿವಾಣ ಹಾಕುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಯಾವ ಸಾಕ್ಷಿ ಆಧಾರ ಇದೆ ಅದನ್ನು ಮಾತ್ರ ನಾವು ವಿಚಾರಣೆ ಮಾಡ್ತಿದ್ದೇವೆ. ಮುಂದೆ ಹೊಸ ಹೊಸ ಸಾಕ್ಷಿಗಳು ಸಿಗುತ್ತಿದೆ. ಯಾವುದೇ ರಂಗದಲ್ಲಿ ಆಗಲಿ, ಎಷ್ಟೇ ದೊಡ್ಡವರ ಮಕ್ಕಳಾಗಲಿ, ಎಷ್ಟೇ ದೊಡ್ಡವರಾಗಲಿ, ಎಷ್ಟೇ ಪ್ರಭಾವಿಗಳಾಗಲಿ, ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದರೆ ವಿಚಾರಣೆ ಮಾಡಿ, ಶಿಕ್ಷೆ ಗೆ ಒಳಪಡಿಸುತ್ತೇವೆ ಎಂದರು.
ಡ್ರಗ್ಸ್ ವಿರುದ್ಧ ಕಳೆದ ಆರು ತಿಂಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಎನ್ ಸಿಬಿ ಡ್ರಗ್ಸ್ ಬಗ್ಗೆ ಟ್ಟಿಟ್ ಮಾಡಿತ್ತು. ಆದಾದ ನಂತರ ಕೆಲ ಹೆಸರುಗಳು ಬಂದಿವೆ. ಅಂತಹವರನ್ನು ಕರೆಸಿ ಇವಾಗ ಮಾತನಾಡಿಸಿದ್ದೇವೆ. ಅವರಿಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ಮಾಡ್ತಿದ್ದೇವೆ. ಇದರಲ್ಲಿ ಯಾರು ಯಾರು ತೊಡಗಿದ್ದಾರೆ ಎಂಬುದು ತನಿಖೆ ನಡೆಯುತ್ತಿದೆ. ಸಾಕ್ಷಿ ಆಧಾರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ: ಮಿಜೋರಾಂನಲ್ಲಿಯೂ ಬೇರುಬಿಟ್ಟಿದೆ ಹೆರಾಯಿನ್ ಜಾಲ! ಈವರೆಗೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ?
ಸಿಸಿಬಿ ವಿಚಾರಣೆಗೆ ನಟಿ ರಾಗಿಣಿ ದ್ವಿವೇದಿ ಹಾಜರಾಗದ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ನಮ್ಮ ಅಧಿಕಾರಿಗಳು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ. ನಮ್ಮದೇ ಆದ ಹಲವಾರು ಮಾಹಿತಿಗಳ ಮೂಲಕ ಜಾಲ ಪತ್ತೆ ಹಚ್ಚಲು ಕ್ರಮಕೈಗೊಂಡಿದ್ದೇವೆ. ಒಂದು ವ್ಯವಸ್ಥಿತವಾದ ತನಿಖೆ ನಡೆಯುತ್ತಿದೆ ಎಂದರು.
ಕೆಲವರ ಹೆಸರನ್ನು ಬಹಿರಂಗ ಪಡಿಸಲು ಸರ್ಕಾರ ಹಿಂದೇಟು ಹಾಕಿದ ವಿಚಾರದಲ್ಲಿ ಮಾತನಾಡಿದ ಅವರು, ತನಿಖೆ ನಡೆಯುವಾಗ ನಾವು ಯಾರು ಮಧ್ಯ ಪ್ರವೇಶ ಮಾಡಬಾರದು. ಪೊಲೀಸರು ಯಾವುದನ್ನು ಯಾವಾಗ ಹೇಳ್ಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಸುಮ್ಮನೆ ಹೆಸರುಗಳನ್ನು ಹೇಳೋದು ತಪ್ಪಾಗುತ್ತದೆ. ಸಾಕ್ಷಿ ಆಧಾರಗಳು, ಹೆಸರು ಬಳಸುವುದು ತಪ್ಪಾಗುತ್ತದೆ ಎಂದರು.