Advertisement

ಅಶಾಂತಿ ಸೃಷ್ಟಿಗೆ ವಿದ್ಯಾರ್ಥಿಗಳ ಬಳಕೆ : ಗೃಹ ಸಚಿವ ಬೊಮ್ಮಾಯಿ ಆತಂಕ

10:23 AM Feb 24, 2020 | sudhir |

ಬೆಂಗಳೂರು/ದಾವಣಗೆರೆ/ಹಾವೇರಿ: ದೇಶದ್ರೋಹಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಸಮಾಜದಲ್ಲಿ ಶಾಂತಿ ಕದಡುವ, ಗಲಭೆ ಸೃಷ್ಟಿಸುವ ಮತ್ತು ವೈಷಮ್ಯ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಅಮೂಲ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಹೆಚ್ಚುವರಿ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

Advertisement

ದಾವಣಗೆರೆ, ಹಾವೇರಿಯಲ್ಲಿ ಮಾತನಾಡಿದ ಬೊಮ್ಮಾಯಿ, ದೇಶದ್ರೋಹಿ ಹೇಳಿಕೆ ನೀಡಿರುವ ಅಮೂಲ್ಯಾ ಹಿಂದೆ ಕೆಲವು ವ್ಯಕ್ತಿ ಗಳು ಮತ್ತು ಸಂಘಟನೆಗಳಿವೆ. ಆಕೆಗೆ ಕುಮ್ಮಕ್ಕು ನೀಡುವುದು, ಕಾನೂನು ನೆರವು ನೀಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ ಈಚೆಗೆ ಇಂಥ ಘಟನೆಗಳು, ಬೆಳವಣಿಗೆಗಳು ನಡೆಯುತ್ತಿದ್ದು, ದೇಶದ್ರೋಹಿ ಕೃತ್ಯಗಳು ಹೆಚ್ಚುತ್ತಿವೆ. ಇದು ವ್ಯವಸ್ಥಿತ ಸಂಚು ಮತ್ತು ಷಡ್ಯಂತ್ರದ ಭಾಗ ಎಂದರು.

ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ
ವಿದ್ಯಾಸಂಸ್ಥೆಗಳು, ಹಾಸ್ಟೆಲ್‌ ಮ್ಯಾನೇಜ್‌ ಮೆಂಟ್‌ಗಳು ದೇಶದ್ರೋಹಿ ಘಟನೆಗಳ ಬಗ್ಗೆ ನಿಗಾ ವಹಿಸಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಕಠಿನ ಕ್ರಮ ಅನಿವಾರ್ಯ ವಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಇಂದು ಸಭೆ
ದೇಶ ವಿರೋಧಿ ಹೇಳಿಕೆ ಹಿಂದೆ ದೊಡ್ಡ ಷಡ್ಯಂತ್ರ ವಿದ್ದು, ರಾಜ್ಯದಲ್ಲೂ ಕಾರ್ಯಾಚರಿಸುತ್ತಿದೆ. ಧರ್ಮಗಳ ಮಧ್ಯೆ ಗಲಭೆ ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ಷಡ್ಯಂತ್ರದ ಹಿಂದಿರುವ ಸಂಘಟನೆ- ಶಕ್ತಿಗಳನ್ನು ಬೇರು ಸಹಿತ ಕಿತ್ತೂಗೆಯಲಾಗುತ್ತದೆ. ಈ ಬಗ್ಗೆ ರವಿವಾರ ಬೆಂಗಳೂರಿನಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.

ಸಿಎಎ ವಿರೋಧಕ್ಕೆ ವಿದೇಶೀ ಹಣ
ಸಿಎಎ ವಿರೋಧಿ ಪ್ರತಿಭಟನೆಗಳಿಗೆ ವಿಪಕ್ಷಗಳ ಕುಮ್ಮಕ್ಕಿದೆ. ಪ್ರತಿಭಟನೆಗೆ ಅಂತಾರಾಷ್ಟ್ರೀಯ ಹಣ ವಿನಿಯೋಗ ಕುರಿತು ಇಡಿ ತನಿಖೆ ನಡೆಯುತ್ತಿದೆ. ಕೆಲವು ಬ್ಯಾಂಕ್‌ ಖಾತೆಗಳಿಗೆ ನೂರಾರು ಕೋಟಿ ರೂ. ಹಣ ವರ್ಗಾವಣೆಯಾಗಿದೆ. ವಿದೇಶ ಗಳಿಂದಲೂ ಹಣ ಬಂದಿದೆ. ಇವೆಲ್ಲದರ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದರು.

Advertisement

ಬೊಮ್ಮಾಯಿ ಹೇಳಿದ್ದೇನು?
1 ದೇಶದ್ರೋಹಿ ಕೃತ್ಯಗಳಿಗಾಗಿಯೇ ವಿದೇಶಗಳಿಂದ ಕೆಲವು ಸಂಘಟನೆಗಳಿಗೆ ಹಣ ಸಂದಾಯವಾಗುತ್ತಿರುವ ಸಂಶಯವಿದೆ.
2 ದೇಶದ್ರೋಹಿ ಹೇಳಿಕೆ ನೀಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಹೆಚ್ಚಾಗುತ್ತಿದೆ.
3 ಅಮೆರಿಕ ಮೂಲದ ಇಂಟರ್‌ನೆಟ್‌ ಕಂಪೆನಿಯಿಂದ ಭಾರತದ ವಿರುದ್ಧ ನಿರಂತರ ಪೋಸ್ಟ್‌ ಆಗುತ್ತಿದೆ.
4 ಪೋಸ್ಟ್‌ಗಳಿಗಾಗಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳ ಬಳಕೆ.
5 ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಪೋಸ್ಟಿಂಗ್‌ಗಳನ್ನು ಪರಿಶೀಲಿಸುವ ಕೆಲಸ ಆಗಬೇಕಿದೆ.
6 ದೇಶದ್ರೋಹದ ಪೋಸ್ಟ್‌ಗಳಿದ್ದಲ್ಲಿ ಮೂಲದಲ್ಲಿಯೇ ನಿರ್ಬಂಧಿಸುವ ಕೆಲಸವಾಗಬೇಕು
7 ದೇಶದ್ರೋಹದ ಪೋಸ್ಟ್‌ಗೆ ಅವಕಾಶ ಕೊಡದೆ ನಿರ್ಬಂಧ ಹೇರಬೇಕು.
8 ಇಂಥವುಗಳನ್ನು ಸೈಬರ್‌ ಕ್ರೈಂನಡಿ ತಂದು ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿ¨ªೇವೆ.
9 ದೇಶದ್ರೋಹದ ಪೋಸ್ಟ್‌ಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುತ್ತದೆ.

ಎಸ್‌ಐಟಿ ತಂಡ
ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಹೆಚ್ಚುವರಿ ತನಿಖೆ ನಡೆಸಲು ಚಿಕ್ಕಪೇಟೆ ಎಸಿಪಿ ಮಹಂತ ರೆಡ್ಡಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಇದರ ಒಂದು ಭಾಗ ತನಿಖೆಗಾಗಿ ಚಿಕ್ಕಮಗಳೂರಿಗೆ ತೆರಳಿದೆ.

ದೇಶದ್ರೋಹಿ ಘೋಷಣೆ ಕೂಗಿದ ಯುವತಿ ಮತ್ತು ಫ್ರೀ ಕಾಶ್ಮೀರ ಫ‌ಲಕ ಪ್ರದರ್ಶಿಸಿದ ಯುವತಿಯರ ಹೆತ್ತವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಲಿದೆ. ಜತೆಗೆ ಇವರಿಬ್ಬರ ಹಿಂದೆ ದೊಡ್ಡ ತಂಡವಿರುವುದು ಬಹಿರಂಗವಾಗಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next