ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತೆ ಆರಗ ಜ್ಞಾನೇಂದ್ರ ಅವರಿಗೂ ಅದೃಷ್ಟ ಒಲಿದು ಬಂದಿದೆ. ಇಬ್ಬರಿಗೂ ಕ್ಯಾಬಿನೆಟ್ ಸೇರ್ಪಡೆಯಾದ ಮೊದಲ ಅವಕಾಶದಲ್ಲೇ ಗೃಹ ಖಾತೆಯ ಜವಾಬ್ದಾರಿ ಲಭಿಸಿದೆ.
ಹಲವು ಬಾರಿ ಸಚಿವ ಸ್ಥಾನ ವಂಚಿತವಾದರೂ ತಾಳ್ಮೆಯಿಂದಿದ್ದ ಆರಗ ಜ್ಞಾನೇಂದ್ರರಿಗೆ ಗೃಹ ಖಾತೆ ಲಭಿಸಿದೆ. ಸರಕಾರದಲ್ಲಿ ಮುಖ್ಯಮಂತ್ರಿ ಬಳಿಕದ ಅತ್ಯಂತ ಪ್ರಭಾವಿ ಖಾತೆ ಇದು. ಹಾಗಾಗಿ ಅನುಭವಿಗಳಿಗೆ ಮಾತ್ರ ಈ ಖಾತೆಯನ್ನು ನೀಡಲಾಗುತ್ತದೆ.
ಜ್ಞಾನೇಂದ್ರ ಅವರು ಹಿರಿಯ ಶಾಸಕರು, ವಿಧಾನಸಭೆಯ ವಿವಿಧ ಸಮಿತಿಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದವರು. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಸರಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾತಿನಿಧ್ಯ ಮಾಸಿ ಹೋಗಲಿದೆ ಎಂಬ ಲೆಕ್ಕಾಚಾರಗಳು ತಲೆ ಕೆಳಗಾಗಿದೆ.
1977ರಲ್ಲಿ ದೇವರಾಜ ಅರಸು ಸಂಪುಟದಲ್ಲಿ ಬಂಗಾರಪ್ಪ ಅವರು ಮೊದಲ ಬಾರಿಗೆ ಸಚಿವರಾಗಿ ಗೃಹ ಖಾತೆಯನ್ನು ಮುನ್ನಡೆಸಿದ್ದರು. ಅವರು ಮತ್ತು ಆರಗ ಇಬ್ಬರೂ ಶಿವಮೊಗ್ಗ ಜಿಲ್ಲೆಯವರೇ ಎಂಬುದು ವಿಶೇಷ. ಎಸ್. ಬಂಗಾರಪ್ಪರಿಗೆ ಗೃಹ ಖಾತೆ ಹೊಣೆ ಒಂದು ವರ್ಷವಿತ್ತು. ಕಾಕತಾಳೀಯ ಎಂಬಂತೆ ಆರಗ ಜ್ಞಾನೇಂದ್ರ ಅವರಿಗೂ ಕಡಿಮೆ ಅಧಿಕಾರಾವಧಿ ಲಭಿಸಿದೆ.
ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡುವ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗೃಹ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡುತ್ತೇನೆ.
– ಆರಗ ಜ್ಞಾನೇಂದ್ರ ಗೃಹಖಾತೆ ನೂತನ ಸಚಿವರು