ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ನೀಡುವ ತೀರ್ಪಿನ ನಿರೀಕ್ಷೆಯಲ್ಲಿದ್ದೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಈಗಾಗಲೇ ವಿಭಿನ್ನ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣದ ವಿಚಾರಣೆ ವರ್ಗಾವಣೆ ಆಗಿದೆ. ನ್ಯಾಯಮೂರ್ತಿಗಳು ನೀಡುವ ತೀರ್ಪಿನ ಆಧಾರದ ಮೇಲೆ ಮುಂದಿನ ಎಲ್ಲ ನಿರ್ಧಾರಕೈಗೊಳ್ಳಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಆದೇಶ ಪ್ರತಿಯನ್ನು ಶಿಕ್ಷಣ ಇಲಾಖೆ ತರಿಸಿಕೊಳ್ಳಲಿದೆ. ಬಳಿಕ ಪ್ರತಿಕ್ರಿಯೆ ನೀಡುತ್ತೇವೆ. ಮತ್ತೂಂದೆಡೆ ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಹೇಳಿದರು.
ಹಿಜಾಬ್ ಯಥಾಸ್ಥಿತಿ ಮುಂದುವರಿಕೆ: ಹೊರಟ್ಟಿ
ಹುಬ್ಬಳ್ಳಿ: ಹಿಜಾಬ್ ಕುರಿತು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿಲ್ಲ ಎಂದಾದರೆ ಸರಕಾರ ಯಾವುದೇ ಕ್ರಮ ಕೈಗೊಳ್ಳಲು ಬರಲ್ಲ. ಪ್ರಕರಣ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ವರ್ಗವಾಗಿದೆ ಎಂದಾದರೆ ಯಥಾಸ್ಥಿತಿ ಕಾಪಾಡಬೇಕು ಎಂಬುದಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಯಾವುದೇ ಆದೇಶ ಹೊರಡಿಸಿದ್ದರೆ ಸರಕಾರ ಆ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳಬಹುದಾಗಿತ್ತು. ಒಂದು ಆದೇಶ ನೀಡಿ ನಂತರ ಮುಖ್ಯ ನ್ಯಾಯಮೂರ್ತಿಗಳ ಬಳಿ ಪ್ರಕರಣ ಹೋಗಿದ್ದರೆ ಆ ಆದೇಶವನ್ನು ಸರಕಾರ ಸೇರಿದಂತೆ ಪ್ರತಿಯೊಬ್ಬರೂ ಪಾಲನೆ ಮಾಡಬೇಕಿತ್ತು. ಆದರೆ ಹಾಗಾಗಿಲ್ಲ. ಹೀಗಾಗಿ ಏನೂ ಮಾಡಲು ಬರಲ್ಲ. ನ್ಯಾಯಾಲಯ ಹೇಳಿದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದನ್ನು ಕೇಂದ್ರ-ರಾಜ್ಯ ಸರಕಾರಗಳು ಒಪ್ಪಬೇಕು ಎಂದರು.
ಹಿಜಾಬ್ ಕುರಿತು ಸ್ಪಷ್ಟ ತೀರ್ಪು ಹೊರಬರುವುದು ಅಗತ್ಯವಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ಗಮನ ಹರಿಸುತ್ತಾರೆ ಎನ್ನುವ ಭರವಸೆಯಿದೆ.
-ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ