ಬೆಂಗಳೂರು: ಯಾವುದೇ ಊರಿಗೆ ಪೊಲೀಸ್ ಠಾಣೆ ಬೇಕು ಎಂದರೆ, ಆ ಊರಿನಲ್ಲಿ ವರ್ಷಕ್ಕೆ ಕನಿಷ್ಠ 300 ಕ್ರೈಂಗಳು ನಡೆದಿರಬೇಕು. ಅಲ್ಲಿನ ಜನಸಂಖ್ಯೆ 50ರಿಂದ 60 ಸಾವಿರ ಇರಬೇಕು.
– ಇದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೌರಿಬಿದನೂರು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಬಗೆ.
ನಿಮ್ಮ ಊರಿನಲ್ಲಿ ಅಷ್ಟೊಂದು ಕ್ರೈಂ ನಡೆದಿಲ್ಲ. ನಿಮಗಿದು ಸಮಾಧಾನದ ಸಂಗತಿ. ಕ್ರೈಂ ಜಾಸ್ತಿ ನಡೆದಿಲ್ಲ ಅಂದರೆ ನಿಮ್ಮ ಊರಲ್ಲಿ ಸಜ್ಜನರು ಇದ್ದಾರೆ ಅಂತ ಅರ್ಥ. ಆಸ್ಪತ್ರೆ ಕೇಳಬಹುದು. ಪೊಲೀಸ್ ಠಾಣೆ ಕೇಳುವುದು ಒಳ್ಳೆಯ ಲಕ್ಷಣ ಅಲ್ಲ ಎಂದವರು ಹೇಳಿದರು. ಇದಕ್ಕೆ ಆಸ್ಪತ್ರೆ ಕೇಳಿದರೆ ಒಳ್ಳೆಯ ಲಕ್ಷಣ ಹೇಗಾಗುತ್ತದೆ ಎಂದು ಸ್ಪೀಕರ್ ಕಾಗೇರಿ ಪ್ರಶ್ನಿಸಿದರು. ಪೊಲೀಸ್ ಠಾಣೆ ಬೇಕಾದರೆ ಊರಿನ ಜನ ದುರ್ಜನರು ಆಗಬೇಕೇ ಎಂದು ಸಿ.ಟಿ. ರವಿ ಛೇಡಿಸಿದರು.
10 ಸಾವಿರ ವಸತಿಗೃಹ ನಿರ್ಮಾಣ :
ರಾಜ್ಯದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 5,519 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೇವಲ 2,302 ವಸತಿಗೃಹಗಳು ಲಭ್ಯ ಇದ್ದಾವೆ. 2,740 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಗೃಹ-2025 ಯೋಜನೆ ಪ್ರಾರಂಭಿಸಲಾಗಿದ್ದು, ಅಗ್ನಿಶಾಮಕ ಮತ್ತು ಕಾರಾಗೃಹ ಇಲಾಖೆಗಳನ್ನೊಳಗೊಂಡಂತೆ ಒಟ್ಟು 10,032 ವಸತಿಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ವಸತಿಗೃಹಗಳನ್ನು ಆಧರಿಸಿ ವಸತಿಗೃಹ ಲಭ್ಯವಿರದ ಸ್ಥಳಗಳಲ್ಲಿ ಅಗ್ನಿಶಾಮಕ ಇಲಾಖೆಯ ಸಿಬಂದಿಗೆ ನಿರ್ಮಿಸಿ ಒದಗಿಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಶಾಸಕ ಐಹೊಳೆ ಡಿ. ಮಹಾಲಿಂಗಪ್ಪ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದರು.