Advertisement

ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ

07:20 PM May 18, 2022 | Team Udayavani |

ಬೆಂಗಳೂರು : ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು, ಅಪರಾಧಗಳಲ್ಲಿ ಭಾಗಿಯಾಗುವುದನ್ನು, ಸಹಿಸುವುದಿಲ್ಲ ಎಂದು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಎಚ್ಚರಿಕೆ ನೀಡಿದ್ದಾರೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಚಿವರು, ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ಜೀವ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರು, ಆ ನಿಟ್ಟಿನಲ್ಲಿ ಹೊಣೆಗಾರಿಕೆ ಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.

ಪಿಎಸೈ ಅಕ್ರಮ ನೇಮಕಾತಿ ಯಲ್ಲಿ ತನಿಖೆ ನಡೆಸುತ್ತಿರುವ ವಿಷಯದಲ್ಲಿ ಹೆಚ್ಚು ಮಂದಿ ಪೊಲೀಸ್ ಅಧಿಕಾರಿಗಳ ಪಾತ್ರವಿರುವ ಬಗ್ಗೆ ಪ್ರಸ್ತಾಪಿಸಿ, ವಿಷಾದಿಸಿದ ಸಚಿವರು, ಅಪರಾಧ ಪತ್ತೆ ಹಚ್ಚುವವರೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದಾದರೆ ಸಾರ್ವಜನಿಕರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

” ಸಾರ್ವಜನಿಕರು ಇಲಾಖೆಯ ಮೇಲೆ ಹೊಂದಿರುವ ಗೌರವ ಹಾಗೂ ನಂಬಿಕೆಯನ್ನು ಕಾಪಾಡಬೇಕು” ಎಂದು ಸಚಿವರು ತಿಳಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ರಕ್ತ ಚಂದನ ಮರಗಳ ಕಳ್ಳ ಸಾಗಾಣಿಕೆ, ಅಕ್ರಮ ಮರಳು ಗಾರಿಕೆ ಹಾಗೂ ಮಾದಕ ವಸ್ತುಗಳ ಜಾಲಗಳ ಬಗ್ಗೆ ದೂರುಗಳಿದ್ದು ಅಂಥಹ ಚಟುವಟಿಕೆಗಳ ನಿವಾರಣೆಗೆ ತೀವ್ರ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು.

Advertisement

ಇದನ್ನೂ ಓದಿ : ಜಿಯೋ ಫೋನ್ ನೆಕ್ಸ್ಟ್‌ನ ಸೀಮಿತ ಅವಧಿಯ ‘ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್’ ಕೊಡುಗೆ

ಸರಗಳ್ಳತನ, ಮನೆ ದರೋಡೆ, ಕಳ್ಳತನ ಪ್ರಕರಣ ಗಳನ್ನು ತಡೆಗಟ್ಟಲು ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಡಾನ್ಸ್ ಬಾರ್ ಗಳು, ಮಟ್ಕಾ, ಮಾನವ ಕಳ್ಳ ಸಾಗಾಣಿಕೆ ಮತ್ತು ವೈಶ್ಯಾವಟಿಕೆ ಯಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವರು ನಿರ್ದೇಶಿಸಿದರು.

ಅಕ್ರಮವಾಗಿ ಬಂದು ನೆಲೆಸಿರುವ ಬಾಂಗ್ಲಾದೇಶ ನಾಗರಿಕರು ಹಾಗೂ ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸಲು, ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಸರ್ವೇ ನಡೆಸಿ ವರದಿ ನೀಡಬೇಕು, ಎಂದೂ ಸಚಿವರು ಸೂಚಿಸಿದರು.

ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ದೇಶಪಾರು ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ತಕ್ಷಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಅತ್ಯುತ್ತಮ ಕರ್ತವ್ಯ ನಿರ್ವಹಣೆಗೆ ಇರಬಹುದಾದ ಅಡ್ಡಿ ಆತಂಕಗಳ ಬಗ್ಗೆ ಪ್ರಶ್ನಿಸಿದ ಸಚಿವರು, ಸರಕಾರದಿಂದ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.

ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗಗಳಲ್ಲಿ ರಕ್ತಚಂದನ ಮರಗಳ ಅಕ್ರಮ ಸಾಗಣೆ, ಗಾಂಜಾ ಹಾಗೂ ಮಾದಕ ವಸ್ತುಗಳ ಜಾಲ ಚಟುವಟಿಕೆಗಳನ್ನು ನಿಯಂತ್ರಿಸಲು ಆದ್ಯ ಗಮನ ನೀಡುವಂತೆಯೂ, ಸಚಿವರು ಸೂಚಿಸಿದರು.

ಇದನ್ನೂ ಓದಿ :ಖಾಲಿಯಿರುವ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ : ಸಚಿವ ಬಿ.ಸಿ.ಪಾಟೀಲ್

ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಮತಾಂತರ ಪ್ರಕರಣಗಳು ನಡೆಯುತ್ತಿರುವ ಬಗ್ಗೆಯೂ ದೂರುಗಳಿದ್ದು, ಆಮಿಷದ ಹಾಗೂ ಬಲವಂತದ ಮತಾಂತರ ಪ್ರಕರಣಗಳ ವಿರುದ್ಧ, ಹೊಸ ಕಾಯ್ದೆಯಂತೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು

ಅಕ್ರಮ ಗೋವುಗಳ ಹತ್ಯೆ ಹಾಗೂ ಸಾಗಣಿಕೆ ವಿರುದ್ಧವೂ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ, ಸಚಿವರು ನಿರ್ದೇಶಿಸಿದರು.

ಪೊಲೀಸ್ ಮಹಾ ನಿರ್ದೇಶಕ ( ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಐಜಿ. ಚಂದ್ರಶೇಖರ್, ಜಿಲ್ಲಾ ಪೊಲೀಸ್ ಮುಖ್ಯಸ್ಥ  ಡಾ. ವಂಶಿ ಕೃಷ್ಣ ಮತ್ತು ಇತರ ಹಿರಿಯ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next