ಬೆಂಗಳೂರು: ನಿಧಿಗಾಗಿ ಮಗುವನ್ನು ಬಲಿ ಕೊಡಲು ಮುಂದಾದ ಪತಿಯ ವಿರುದ್ಧ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಇದೇ ವೇಳೆ ದೂರು ನೀಡಲು ಹೋದಾಗ ಕೆ.ಆರ್.ಪುರ ಪೊಲೀಸರು ದೂರು ಸ್ವೀಕರಿಸದೆ ಹಿಂದೇಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸದ್ದಾಂ ಹುಸೇನ್ ಅಲಿಯಾಸ್ ಆದಿ ಈಶ್ವರ್ ತನ್ನ ಪುತ್ರನ ಬಲಿಕೊಡಲು ಸಂಚು ರೂಪಿಸಿದವ. ಈ ಸಂಬಂಧ ಆತನ ಪತ್ನಿ ವನಜಾಕ್ಷಿ ಎಂಬಾಕೆ ನಗರ ಪೊಲೀಸ್ ಆಯುಕ್ತರಿಗೆ, ಪತಿ ಸದ್ದಾಂ ಹುಸೇನ್ ಮತ್ತು ಆತನ ಸಹಚರ ಕುಂಟ ನಯಾಜ್ ವಿರುದ್ಧ ದೂರು ನೀಡಿದ್ದಾರೆ.
2020ರಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದೆವು. ಕೆಲ ತಿಂಗಳ ಬಳಿಕ ನಾನು ಗರ್ಭಿಣಿಯಾಗಿದ್ದು, ಆಗ ಸದ್ದಾಂ ಹುಸೇನ್ ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಅದನ್ನ ಪ್ರಶ್ನಿಸಿದ ನನ್ನ ತಾಯಿಗೂ ಜೀವ ಬೆದರಿಕ ಹಾಕಿದ್ದಾನೆ. 2021ರ ಜುಲೈ 15 ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಮಗನಿಗೆ ಕರಣ್ ರಾಜ್ ಎಂದು ನಾಮಕರಣ ಮಾಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಪುತ್ರನ ಬಲಿಗಾಗಿ ಒತ್ತಾಯಿಸಿದ ಪತಿ: ಈ ಮಧ್ಯೆ ಪತಿ ಸದ್ದಾಂ ಹುಸೇನ್, ಕೇರಳದ ಕೆಲ ವ್ಯಕ್ತಿಗಳ ಜತೆ ಸೇರಿ ವಾಮಾಚಾರ ಮಾಡುವುದನ್ನು ಕಲಿತುಕೊಂಡಿದ್ದಾನೆ. ನಂತರ ನಿಧಿಗಾಗಿ ಕುಟ್ಟಿಪೂಜೆ ಎಂಬ ಮಾಟಮಂತ್ರ ಮಾಡಲು ತಯಾರಿ ನಡೆಸಿದ. ಈ ವೇಳೆ ತನ್ನ ಮಗನನ್ನು ಬಲಿಕೊಡಬೇಕು. ಅದರಿಂದ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ ಎಂದು ಒತ್ತಾಯಿಸಿದ್ದಾನೆ.
ಅಲ್ಲದೇ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನನ್ನ ತಾಯಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಬಳಿಕ, ಇದೇ ವರ್ಷ ಅ.13 ರಂದು ಆರೋಪಿ, ತನ್ನ ಸಹಚರ ನಯಾಜ್ ತುಮಕೂರಿನ ನನ್ನ ನಿವಾಸದ ಬಳಿ ಬಂದು, ನನ್ನ ಮಗನನ್ನು ಅಪಹರಿಸಲು ಯತ್ನಿಸಿದ್ದ. ಆದರೆ, ಸ್ಥಳೀಯರ ನೆರವಿನಿಂದ ನಾನು ಮತ್ತು ನನ್ನ ಮಗ ತಪ್ಪಿಸಿಕೊಂಡಿದ್ದೇವೆ. ಈ ಘಟನೆಯ ನಂತರ ನಾನು ಭಯಗೊಂಡು, ತಲೆಮರಿಸಿಕೊಂಡಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಕೆ.ಆರ್.ಪುರ ಪೊಲೀಸರ ವಿರುದ್ಧ ಆರೋಪ: ತನಗೆ ಆದ ಅನ್ಯಾಯದ ಬಗ್ಗೆ ಕೆ.ಆರ್. ಪುರ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ದೂರನ್ನು ಸ್ವೀಕರಿಸಲಿಲ್ಲ. ಆದ್ದರಿಂದ, ಕೂಡಲೇ ಪ್ರಕರಣ ದಾಖಲಿಸಿಕೊಂಡು ಪತಿ ಸದ್ದಾಂ ಹುಸೇನ್ ಅಲಿಯಾಸ್ ಆದಿ ಈಶ್ವರ್ ಮತ್ತು ಆತನ ಸಹಚರ ನಯಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಒಂದು ವೇಳೆ ನಮ್ಮ ಕುಟುಂಬಕ್ಕೆ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ಸದ್ದಾಂ ಹುಸೇನ್ ಅಲಿಯಾಸ್ ಆದಿ ಈಶ್ವರ್ ಕಾರಣ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ದೂರು ಸ್ವೀಕರಿಸಿರುವ ನಗರ ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ, ಕೆ.ಆರ್.ಪುರ ಪೊಲೀಸರಿಗೆ ಕ್ರಮಕ್ಕೆ ಸೂಚಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಧರ್ಮಕ್ಕೆ ಮತಾಂತರಕ್ಕೆ ಯತ್ಕ: ಪತ್ನಿ 2020ರಲ್ಲಿ ಬ್ಲೂಡಾರ್ಟ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸದ್ದಾಂ ಹುಸೇನ್ ಪರಿಚಯ ವಾ ಗಿದ್ದು, ಈ ವೇಳೆ ಆರೋಪಿ ಪ್ರೇಮ ನಿವೇದನೆ ಮಾಡಿ ಕೊಂಡು, ಮದುವೆಯಾಗುವುದಾಗಿ ಒತ್ತಾಯಿಸಿದ್ದ. ನಂತರ ಇಬ್ಬರು ಹಿಂದೂ ಸಂಪ್ರ ದಾಯದಂತೆ ಮದುವೆ ಮಾಡಿಕೊಂಡೆವು. 2020ರ ನವೆಂಬರ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ಪತಿ ಪೀಡಿಸಿ ದ್ದಾನೆ. ಅದಕ್ಕೆ ನಿರಾಕರಿಸಿದಾಗ, ಸುಳ್ಳು ಹೇಳಿ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದುದಿದ್ದನು. ಅಲ್ಲಿ ಪತಿಯ ಸಹಚರ ಕುಂಟ ನಯಾಜ್, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನನಗೆ ಒತ್ತಾಯಿಸಿದಲ್ಲದೆ, ಸಾದಿಯಾ ಕೌಸರ್ ಎಂದು ಮರುನಾಮಕರಣ ಮಾಡಿದರು. ಮುಸ್ಲಿಂ ವಿವಾಹ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.