Advertisement

ಹೋಮ್‌ ಮೇಕರ್ಸ್‌ ರೆಸೆಲೂಷನ್ಸ್

10:22 AM Jan 11, 2020 | mahesh |

ಹೋಮ್‌ಮೇಕರ್‌ ಅಥವಾ ಮನೆಯೊಡತಿಯ ನಿರ್ಧಾರಗಳು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ. ಅಡುಗೆಯಲ್ಲಿ ಬದಲಾವಣೆ, ಶಾಪಿಂಗ್‌ನಲ್ಲಿ ಹಿಡಿತ, ಉಳಿತಾಯ ಬಜೆಟ್‌- ಹೀಗೆ ಅನೇಕ ವಿಚಾರಗಳು ಮನೆಯವರ ಭವಿಷ್ಯವನ್ನೇ ನಿರ್ಧರಿಸುತ್ತವೆ. ಆಕೆಯ ನಿರ್ಧಾರಗಳೇ ಕುಟುಂಬದ ಬಜೆಟ್‌ನ ಅಡಿಪಾಯ ಅಲ್ಲವೆ?

Advertisement

ಡಿಸೆಂಬರ್‌ 31ರ ರಾತ್ರಿ ಎಲ್ಲರೂ ಹೊಸವರ್ಷವನ್ನು ಸ್ವಾಗತಿಸಲು ಸಿದ್ಧತೆಗಳನ್ನು ಆರಂಭಿಸುತ್ತಾರೆ. ಅದರಲ್ಲಿ ಮುಖ್ಯವಾದದ್ದು ಹೊಸವರ್ಷದ ರೆಸೆಲೂಷನ್ಸ್‌ ಅಥವಾ ನಿರ್ಣಯಗಳು. ಪ್ರತಿವರ್ಷವೂ ಹಲವು ಗುರಿಗಳನ್ನು ಹಾಕಿಕೊಳ್ಳುವುದೂ, ಕೆಲವೇ ದಿನಗಳಲ್ಲಿ ಅವುಗಳನ್ನೆಲ್ಲ ಮರೆತು ಬಿಡುವುದೂ ಇದ್ದದ್ದೇ. ಆದರೂ ವರ್ಷಂಪ್ರತಿ ಹೊಸ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ಅಥವಾ ಹಳೆ ನಿರ್ಧಾರಗಳನ್ನು ನವೀಕರಿಸುವಲ್ಲಿ ನಾವು ಹಿಂದೆ ಬೀಳುವುದಿಲ್ಲ. ನಿರ್ಧಾರಗಳು ಬಹಳ ದೊಡ್ಡದು ಹಾಗೂ ಕಠಿಣವಾಗಿದ್ದರೆ ಅವುಗಳ ಪಾಲನೆ ಕಷ್ಟವಾಗುತ್ತದೆ. ಹೊಸವರ್ಷದ ಮೊದಲ ವಾರದ ಬಳಿಕ ಅಂತಹ ನಿರ್ಧಾರಗಳನ್ನು ನಾವು ಮಾಡಿದ್ದೇವೆ ಎಂಬುದನ್ನೇ ಮರೆತು, ನಮ್ಮ ಮಾಮೂಲಿ ಬದುಕನ್ನು ಮುಂದುವರಿಸುತ್ತೇವೆ. ಮತ್ತೂಂದು ಡಿಸೆಂಬರ್‌ 31ರ ರಾತ್ರಿ, “”ಛೆ, ನಾನು ಈ ಒಂದು ವರ್ಷ ಹಾಕಿಕೊಂಡಿದ್ದ ನಿರ್ಧಾರಗಳನ್ನೆಲ್ಲ ಮರೆತೇಬಿಟ್ಟೆನಲ್ಲ. ಈ ಬಾರಿ ಹಾಗಾಗಬಾರದು” ಎಂದು ಯೋಚಿಸುತ್ತೇವೆ. ಆದರೆ, ಮತ್ತೆ ಅದೇ ರಾಗ, ಅದೇ ತಾಳ. ಪಾಲಿಸಲು ಸುಲಭವಾಗುವ, ಅತ್ಯುಪಯುಕ್ತವಾದ ಸಣ್ಣ ಸಣ್ಣ ನಿರ್ಧಾರಗಳನ್ನು ಕೈಗೊಂಡರೆ, ಅವು ಖಂಡಿತಾ ಯಶಸ್ವಿ ಯಾಗುತ್ತವೆ. ಹೋಮ್‌ ಮೇಕರ್ಸ್‌ ಎಂದು ಕರೆಯಲ್ಪಡುವ ಮಹಿಳೆಯರ ನಿರ್ಧಾರಗಳು ಮನೆಯ ಇತರ ಸದಸ್ಯರ ಮೇಲೂ ಪ್ರಭಾವ ಬೀರುವ ಕಾರಣ ಅವು ಅತ್ಯಂತ ಮಹತ್ವದ್ದು. ಎಲ್ಲ ನಿರ್ಧಾರಗಳ ಹಿಂದೆ ಮನೆಯನ್ನು ಸಂಭಾಳಿಸುವ ಉದ್ದೇಶವೇ ಆಗಿರುತ್ತದೆ.

ಅಡುಗೆ ಮನೆಯನ್ನು ಮ್ಯೂಸಿಯಂ ಮಾಡುವುದಿಲ್ಲ
ವಿವಿಧ ಬ್ರಾಂಡಿನ, ವಿವಿಧ ಗಾತ್ರದ ಪಾತ್ರೆ ಹಾಗೂ ಇನ್ನಿತರ ಅಡುಗೆ ಉಪಕರಣಗಳನ್ನು ಅಗತ್ಯವಿಲ್ಲದಿದ್ದರೂ ಖರೀದಿಸುವ ಖಯಾಲಿ ಕೆಲವರಿಗಿರುತ್ತದೆ. ಅಡುಗೆ ಮನೆಯಲ್ಲಿ ಜಾಗವೇ ಇಲ್ಲದಂತೆ ತುಂಬಿದಾಗ ಅವು ಅಟ್ಟ ಸೇರುತ್ತವೆ. ಒಮ್ಮೆಯೂ ಉಪಯೋಗಿಸದೇ ಇರುವ ಅಡುಗೆ ಉಪಕರಣಗಳು ನಮ್ಮಲ್ಲಿದ್ದರೆ ನಮ್ಮ ಖರೀದಿಗೆ ಬ್ರೇಕ್‌ ಹಾಕಲೇಬೇಕಾದ ಅನಿವಾರ್ಯತೆಯಿದೆ. ಹಾಗಾಗಿ, ಅಡುಗೆಮನೆಯನ್ನು ವಿವಿಧ ವಸ್ತುಗಳ ಮ್ಯೂಸಿಯಂ ಮಾಡಲಾರೆ ಎಂಬ ನಿರ್ಧಾರ ತಗೊಳ್ಳಿ.

ವಾರ್ಡ್‌ರೋಬ್‌ಗಳ ಉಸಿರುಗಟ್ಟಿಸುವುದಿಲ್ಲ
ಕೆಲವರ ವಾರ್ಡ್‌ರೋಬ್‌ಗಳು ಬಟ್ಟೆಬರೆಗಳಿಂದ ತುಂಬಿ ತುಳುಕಿ ಅದರ ಉಸಿರುಗಟ್ಟಿಸುತ್ತವೆ. ಪ್ರತಿಯೊಂದು ಹಬ್ಬಕ್ಕೂ, ಹುಟ್ಟುಹಬ್ಬಕ್ಕೂ ಖರೀದಿಸುವುದರ ಹೊರತಾಗಿ ಅಂಗಡಿಗಳಲ್ಲಿ ಡಿಸ್‌ಪ್ಲೇಗೆ ಹಾಕಿರುವ ಬಟ್ಟೆಬರೆಗಳನ್ನು ಕಂಡು ಮೋಹಗೊಂಡು ಖರೀದಿಸುವವರಿ¨ªಾರೆ. ಜೊತೆಗೆ ವಿವಿಧ ಸೇಲ್‌ಗ‌ಳಿಗೆ ಹೋಗಿ ಸುಮ್ಮನೆ ಖುಷಿಗಾಗಿ ಖರೀದಿ ಮಾಡುವುದು, ಯಾವುದೇ ಹೊಸ ಫ್ಯಾಷನ್‌ ಬಂದರೂ ಅದನ್ನು ಖರೀದಿಸುವುದೂ ಇದೆ. ಇವುಗಳಿಂದ ವಾರ್ಡ್‌ರೋಬ್‌ಗಳು ಬಟ್ಟೆಗಳ ಉಗ್ರಾಣ ಆಗುತ್ತದೆ. ಇಂತಹ ವ್ಯಾಮೋಹಕ್ಕೆ ಕಡಿವಾಣ ಹಾಕುವ ನಿರ್ಧಾರ ತೆಗೆದುಕೊಳ್ಳಿ. ಅಗತ್ಯಕ್ಕಷ್ಟೇ ಬಟ್ಟೆ ಖರೀದಿಸಲು ನಿರ್ಧರಿಸಿ. ಖರೀದಿಸುವಾಗ ಉತ್ತಮ ಬಟ್ಟೆಗಳನ್ನೇ ಖರೀದಿಸಿ.

ಫ್ರಿಜ್ಜನ್ನು ಫ್ರೆಶಾಗಿಡುತ್ತೇನೆ
ತರಕಾರಿ, ಹಣ್ಣುಹಂಪಲು, ಹಾಲು, ಉಳಿದ ಆಹಾರವಸ್ತುಗಳು ಹೀಗೆ ತರಹೇವಾರಿ ವಸ್ತುಗಳಿಂದ ಕೆಲವರ ಫ್ರಿಜ್‌ಗಳು ಯಾವಾಗಲೂ ಭರ್ತಿಯಾಗಿರುತ್ತವೆ. ಹಲವು ಸಲ ಫ್ರಿಜ್‌ನಲ್ಲಿರುವ ವಸ್ತುಗಳು ಸಕಾಲಕ್ಕೆ ಬಳಕೆಯಾಗದೇ ಅಲ್ಲೇ ಹಾಳಾಗಿ ಹೋಗುವ ಸಂಭವವಿರುತ್ತದೆ. ತರಕಾರಿ ಇತ್ಯಾದಿಗಳನ್ನು ಕೂಡಾ ಅಗತ್ಯಕ್ಕೆ ತಕ್ಕಷ್ಟು ಖರೀದಿಸಿ, ಫ್ರಿಜ್‌ನಲ್ಲಿಡದೇ ತಾಜಾ ಆಗಿ ಬಳಸುವ ನಿರ್ಧಾರ ತಗೊಳ್ಳಬೇಕು. ಅದು ಹಳಸಿದ ವಸ್ತುಗಳ ತಾಣವಾಗದೆ ಫ್ರಿಜ್‌ನಲ್ಲಿ ಗಿಜಿಗುಟ್ಟುವಂತೆ ವಸ್ತುಗಳನ್ನು ತುಂಬಿಸುವುದಿಲ್ಲವೆಂದು ನಿರ್ಧರಿಸಿ. ಈ ನಿರ್ಧಾರ ಮನೆಯವರ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದು.

Advertisement

ಮನೆ ಅಡುಗೆಗೆ ಆದ್ಯತೆ
ಈಗಿನ ಮಕ್ಕಳು ಬಯಸುವುದು ಜಂಕ್‌ಫ‌ುಡ್‌. ಆಧುನಿಕ ಅಮ್ಮಂದಿರಿಗೆ ಕೆಲಸದ ಒತ್ತಡದಿಂದ ಸಮಯದ ಅಭಾವ ಬೇರೆ. ಮಕ್ಕಳಿಗೆ ಜಂಕ್‌ಫ‌ುಡ್‌ ಕೊಡುವುದು ತಮಗೂ ಸುಲಭವೆಂದು ಪಿಜ್ಜಾ, ಬರ್ಗರ್‌, ಬೇಕರಿ ತಿನಿಸುಗಳು, ಬೇಲ್‌ಪುರಿ, ಪಾನೀಪುರಿ, ನೂಡಲ್ಸ… ಇತ್ಯಾದಿ ಆಹಾರಗಳನ್ನು ನೀಡುತ್ತಾರೆ. ಆದರೆ, ದೀರ್ಘ‌ಕಾಲ ಇಂತಹ ವಸ್ತುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಸಾಧ್ಯವಾದಷ್ಟು ಇಂತಹ ಆಹಾರವಸ್ತುಗಳನ್ನು ದೂರವಿಟ್ಟು ಮನೆಯಲ್ಲೇ ಆರೋಗ್ಯಕರ ತಿನಿಸುಗಳನ್ನು ತಯಾರಿಸಿ ಮಕ್ಕಳಿಗೆ ನೀಡುವ ನಿರ್ಧಾರ ಕೈಗೊಳ್ಳಿ.

ಸೀರಿಯಲ್‌ ವೀಕ್ಷಣೆಗೆ ಲಗಾಮು
ಅಮ್ಮನ ಸೀರಿಯಲ್‌ ವೀಕ್ಷಣೆ ಮಕ್ಕಳ ಕಲಿಕೆಗೆ ಬಾಧಕವಾಗುವ ಸಂಭವವಿದೆ. ಮಕ್ಕಳು ಟಿ.ವಿ ವೀಕ್ಷಣೆಯಲ್ಲಿ ಸಮಯ ಹಾಳುಮಾಡುತ್ತಾರೆ. ಟಿ.ವಿ ವೀಕ್ಷಣೆಗೆ ಒಂದು ನಿರ್ದಿಷ್ಟ ಸಮಯವನ್ನಷ್ಟೇ ಮೀಸಲಿಡಿ. ಸ್ಮಾರ್ಟ್‌ ಫೋನ್‌ ಬಳಕೆಗೂ ಸಮಯದ ಮಿತಿ ಹೇರಲು ಹಾಗೂ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ ಕೊಡದಿರಲು ನಿರ್ಧರಿಸಿ.

ವಸ್ತುಗಳು ಕೈಗೆ ಸಿಗುವಂತೆ ಜೋಡಿಸುವುದು
ಕೆಲವು ಹೆಂಗಸರು ದಿನದ ಕೆಲವು ಗಂಟೆಗಳನ್ನು ವಸ್ತುಗಳ ಹುಡುಕಾಟದಲ್ಲಿ ಕಳೆಯುತ್ತಾರೆ. ವಸ್ತುಗಳನ್ನು ಒಪ್ಪಓರಣವಾಗಿ ಜೋಡಿಸಿಡದೇ ಇರುವುದು, ಪ್ರತಿವಸ್ತುವನ್ನೂ ನಿರ್ದಿಷ್ಟ ಸ್ಥಾನದಲ್ಲಿ ಇಡದೇ ಇರುವುದು ಇದಕ್ಕೆ ಕಾರಣ. ಹಾಗಾಗಿ, ಅಡುಗೆಮನೆ ಹಾಗೂ ಇನ್ನಿತರ ಕೊಠಡಿಗಳಲ್ಲಿ ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಸ್ಥಾನ ನಿಗದಿಪಡಿಸಲು ನಿರ್ಧರಿಸಿ.

ಹವ್ಯಾಸಕ್ಕೆ ಮರುಜೀವ ಕೊಡುವುದು
ಹವ್ಯಾಸಗಳು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ. ಚಿಕ್ಕಂದಿನಲ್ಲಿರುವಾಗ ಯಾವುದಾದರೊಂದು ಹವ್ಯಾಸವನ್ನು ಹಚ್ಚಿಕೊಂಡಿದ್ದರೆ, ಅದನ್ನು ಮತ್ತೆ ನೆನಪಿಸಿಕೊಂಡು ಅದಕ್ಕೆ ಮರುಜೀವ ನೀಡಿ. ಪುಸ್ತಕ ಹಾಗೂ ಪತ್ರಿಕೆಗಳನ್ನು ಓದಲೂ ಒಂದಷ್ಟು ಸಮಯ ಕಂಡುಕೊಂಡರೆ ಜ್ಞಾನವೃದ್ಧಿಯೂ ಆಗುತ್ತದೆ. ಹವ್ಯಾಸಗಳಲ್ಲಿ ತೊಡಗಿಕೊಂಡರೆ ಸದಾ ಚುರುಕಾಗಿರುವುದು ಸಾಧ್ಯ. ಮನಸ್ಸಿಗೆ ಜಾಡ್ಯ ಅಂಟುವುದಿಲ್ಲ. ಮುಖವೂ ಲವಲವಿಕೆ, ಉಲ್ಲಾಸದಿಂದ ಕಳೆಗಟ್ಟಿದಂತೆ ಇರುತ್ತದೆ.

ಆದರೆ, ಈ ಯಾವ ರೆಸೆಲೂಷನ್ಸ್‌ಗಳೂ ಮನಸ್ಸಲ್ಲಿ ಉಳಿದುಬಿಡದೇ ಕಾರ್ಯಗತವಾಗಲು ಮನಃಪೂರ್ವಕವಾಗಿ ಪ್ರಯತ್ನಿಸುವುದು ಅತೀ ಅಗತ್ಯ.

ಜೆಸ್ಸಿ ಪಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next