ನವದೆಹಲಿ: ದೇಶದಲ್ಲಿ ಹೆಚ್ಚಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದಷ್ಟೇ ಕೋವಿಡ್ ವೈರಸ್ ಸೋಂಕು ಹರಡುವುದನ್ನು ತಡೆಯಲು ಇರುವ ಮಾರ್ಗೋಪಾಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗಾಗ ನೆನಪಿಸುತ್ತಲೇ ಇರುತ್ತದೆ.
ಆದರೆ, ಪರೀಕ್ಷೆ ವಿಷಯದಲ್ಲಿ ಭಾರತ ಹಿಂದಿದೆ. ಜತೆಗೆ ಚೀನದಿಂದ ತರಿಸಿಕೊಂಡಿದ್ದ ಟೆಸ್ಟಿಂಗ್ ಕಿಟ್‌ಗಳ ಕಳಪೆ ಗುಣಮಟ್ಟದಿಂದಾಗಿ ಭಾರತ ಈ ವಿಚಾರದಲ್ಲಿ ಮತ್ತಷ್ಟು ಹಿನ್ನಡೆ ಅನುಭವಿಸಿದೆ.
ಆದರೆ, ಮುಂದೆ ಹಾಗಾಗುವುದಿಲ್ಲ. ಏಕೆಂದರೆ, ಟೆಸ್ಟಿಂಗ್ ಕಿಟ್‌ಗಳ ವಿಷಯದಲ್ಲಿ ಭಾರತ ಸಂಪೂರ್ಣ ಸ್ವಾವಲಂಬನೆ ಸಾಧಿಸಿದೆ. ದೇಶದ ವಿವಿಧ ಭಾಗಗಳಲ್ಲಿರುವ ಸ್ಟಾರ್ಟ್-ಅಪ್‌ಗಳು ಸಂಪೂರ್ಣ ಸ್ವದೇಶಿ ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸಿವೆ.
ಸಾಮರ್ಥ್ಯ ಮೌಲ್ಯಮಾಪನದಲ್ಲೂ ಇವು ಪಾಸಾಗಿವೆ. ಜತೆಗೆ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಕಿಟ್‌ಗಳ ಬೆಲೆಗೆ ಹೋಲಿಸಿದರೆ ಇವುಗಳ ಬೆಲೆ ತೀರಾ ಕಡಿಮೆ. ಮೂಲಗಳ ಪ್ರಕಾರ ಪ್ರಸ್ತುತ ಬಳಸುತ್ತಿರುವ ಕಿಟ್ ಒಂದರ ಬೆಲೆ 4,500 ಇದ್ದು, ಸ್ವದೇಶಿ ಕಿಟ್‌ಗಳು ಕೇವಲ 900 ರಿಂದ 1,200 ರೂ.ಗಳಲ್ಲಿ ದೊರೆಯುತ್ತವೆ.
ನಾವೀಗ ದಿನವೊಂದಕ್ಕೆ 20 ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದು, ಅದನ್ನು 50 ಸಾವಿರಕ್ಕೆ ಹೆಚ್ಚಿಸಿಕೊಳ್ಳಲಿದ್ದೇವೆ. ಈಗಾಗಲೇ ಗೋವಾ, ಆಂಧ್ರಪ್ರದೇಶ ರಾಜ್ಯಗಳಿಗೆ ಕಿಟ್‌ಗಳನ್ನು ಪೂರೈಸಿದ್ದು, ಶೀಘ್ರವೇ ಛತ್ತೀಸ್‌ಗಢಕ್ಕೂ ಕಳಿಸಿಕೊಡಲಾಗುವುದು ಎಂದು ಬೆಂಗಳೂರು ಮೂಲದ ಮೊಲ್ಬಿಯೋ ಡಯಾಗ್ನಾಸ್ಟಿಕ್ಸ್‌ನ ಚಂದ್ರಶೇಖರ್ ನಾಯರ್ ಮಾಹಿತಿ ನೀಡಿದ್ದಾರೆ.