“ಸರ್ವರಿಗೂ ವಸತಿ ಸೌಕರ್ಯ’ ಎಂಬ ಘೋಷವಾಕ್ಯವನ್ನು ನಿರ್ಮಲಾ ಸೀತಾರಾಮನ್ ಕಳೆದ ಬಾರಿಯ ಬಜೆಟ್‌ನಲ್ಲಿ ಉಚ್ಚರಿಸಿದ್ದರು. ಅದಕ್ಕೆ ಸರಿಯಾಗಿ 2020 ಮಾ.31ರೊಳಗೆ ಗೃಹಸಾಲ ತೆಗೆದುಕೊಳ್ಳುವ ವ್ಯಕ್ತಿಗಳಿಗೆ, 1.50 ಲಕ್ಷ ರೂ.ಗಳಿಗೆ ಬಡ್ಡಿ ವಿನಾಯ್ತಿ ನೀಡಲಾಗಿತ್ತು. ಇದರ ಲಾಭವನ್ನು ಇನ್ನೂ ಹಲವರು ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಈ ಅವಕಾಶವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.
ಮನೆ ನಿರ್ಮಿಸುವವರಿಗೂ ವಿನಾಯ್ತಿ: ಮನೆ ಕಟ್ಟಿಸುವವರಿಗೆ ಮಾತ್ರವಲ್ಲ, ಕಟ್ಟಿಕೊಡುವ ಸಂಸ್ಥೆಗಳಿಗೂ ತೆರಿಗೆ ವಿನಾಯ್ತಿ ಘೋಷಿಸಲಾಗಿತ್ತು. ಮಾರ್ಚ್ 31, 2020ಕ್ಕೂ ಮುನ್ನ, ಅಗ್ಗದ ಮನೆ ನಿರ್ಮಿಸುವ ಅವಕಾಶ ಪಡೆದ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಈ ಬಾರಿ ಇನ್ನೂ ಒಂದು ವರ್ಷ ಈ ವಿನಾಯ್ತಿಯನ್ನು ವಿಸ್ತರಿಸಲಾಗಿದೆ.
ಲೋಕಪಾಲಕ್ಕೆ 74 ಕೋಟಿ ರೂ., ಸಿವಿಸಿಗೆ 39 ಕೋಟಿ ರೂ.: ಭ್ರಷ್ಟಾಚಾರ ನಿರ್ಮೂಲನಾ ತನಿಖಾ ಸಂಸ್ಥೆಯಾಗಿರುವ ಲೋಕಪಾಲ್‌ಗೆ ಈ ಬಾರಿಯ ಬಜೆಟ್‌ನಲ್ಲಿ 74 ಕೋಟಿ ಮೀಸಲಿರಿಸಲಾಗಿದೆ. ಇದೇ ವೇಳೆ ಕೇಂದ್ರ ವಿಚಕ್ಷಣ ಆಯೋಗಕ್ಕೆ (ಸಿವಿಸಿ) ಕಳೆದ ಬಾರಿ ನೀಡಿದ್ದ ಅನುದಾನಕ್ಕಿಂತ ಅಲ್ಪಪ್ರಮಾಣದ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಲೋಕಪಾಲಕ್ಕೆ 101.29 ಕೋಟಿ ರೂ.ನಷ್ಟು ಅನು ದಾನ ನೀಡಲಾಗಿತ್ತು. ಮುಂದಿನ ಹಣಕಾಸು ವರ್ಷ ದಲ್ಲಿ ಒಟ್ಟು 74.7 ಕೋಟಿ ರೂ.ಗಳನ್ನು ಮೀಸಲಿರಿಸಿರು ವುದನ್ನು ಸಚಿವೆ ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.
ಈ ಅನುದಾನವನ್ನು ಇಲಾಖೆಯ ಕಟ್ಟಡ ನಿರ್ಮಾಣ ಕೆಲಸಗಳಿಗೆ ಮತ್ತು ಕಾಮಗಾರಿಗಳಿಗೆ ಬಳಸಲಾ ಗುವುದು. ಭ್ರಷ್ಟಾಚಾರ ನಿರ್ಮೂಲನಾ ತನಿಖಾ ಸಂಸ್ಥೆ ಲೋಕಾಯುಕ್ತ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭಗೊಂಡಿತ್ತು. 2013ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ, ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೊಳ್ಳಲು ಕಾರಣವಾಗಿತ್ತು. ಕಾರ್ಯಾಂಗದಲ್ಲಿನ ಭ್ರಷ್ಟಾಚಾರ ಅರೋಪಗಳ ವಿರುದ್ಧ ತನಿಖೆಯಾಗಬೇಕೆನ್ನುವುದು ಅದರ ಹಿಂದಿನ ಉದ್ದೇಶವಾಗಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ಸಿವಿಸಿ ಅನುದಾನವನ್ನು 39 ಕೋಟಿ ರೂ.ಗೆ ಏರಿಸಲಾಗಿದೆ.
ರಿಯಲ್ ಎಸ್ಟೇಟ್‌ಗೆ ನಿಟ್ಟುಸಿರು: ರಿಯಲ್ ಎಸ್ಟೇಟ್‌ಗೆ ಸಂಬಂಧಪಟ್ಟ ಯಾವುದೇ ವ್ಯವಹಾರದಿಂದ ಬಂದ ಆದಾಯಕ್ಕೆ ತೆರಿಗೆ ವಿಧಿಸು ವಾಗ ಆಸ್ತಿಯ ಮಾರಾಟ ಬೆಲೆ, ಸರ್ಕಲ್ ರೇಟ್(ಸರ್ಕಾರ ನಿಗದಿ ಪಡಿಸಿದ ಅಂದಾಜು ಬೆಲೆ) ಅನ್ನು ಪರಿಗಣಿಸಲಾಗುತ್ತದೆ. ಮಾರಾಟ ಬೆಲೆ, ಸರ್ಕಾರಿ ಬೆಲೆಗಿಂತ ಶೇ.5ರಷ್ಟು ಕಡಿಮೆಯಿದ್ದ ಪಕ್ಷದಲ್ಲಿ, ಅವೆರಡರ ನಡುವಿನ ವ್ಯತ್ಯಾಸವನ್ನು ಆದಾಯ ಎಂದು ಪರಿಗಣಿಸಲಾಗತ್ತದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮಿತಿಯನ್ನು ಶೇ.5ರಿಂದ ಶೇ.10ಕ್ಕೆ ಏರಿಸಲಾಗಿದೆ. ಅಂದರೆ ಶೇ.10ರಷ್ಟು ವ್ಯತ್ಯಾಸವಿದ್ದರೂ ಅದನ್ನೀಗ ಅಂಗೀಕರಿಸಲಾಗುತ್ತದೆ.