Advertisement

ಕಲಿತದ್ದು ಕಲಿಸಿದ್ದು ಕಲೆತ ಕಥನ

06:00 AM Aug 19, 2018 | Team Udayavani |

ಭಾಗ-2
ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ ಅದಕ್ಕೆ ಬೇಕಾದ ತಿಳುವಳಿಕೆ ಎಲ್ಲಿಂದ ಎಂದಿನಿಂದ ದೊರೆಯಲು ಸುರುವಾಯಿತು ಎಂದು ಯೋಚಿಸುವಾಗಲೆಲ್ಲ ಅದೊಂದು  ವಿಚಿತ್ರ ಮಹಾಯಾನ ಅನ್ನಿಸುತ್ತದೆ. ಮಗುವಿನ ಸ್ಥಿತಿಯಿಂದ ಬಾಲಕನ ಹಂತಕ್ಕೆ ಬರುವವರೆಗಿನ ಕಲಿಯುವಿಕೆಗೆ ಮನೆಯ ಪರಿಸರ ಅವಕಾಶದ ಬಾಗಿಲನ್ನು ತೆರೆಯುತ್ತದೆ . ಮುಂದೆ ಶಾಲೆ-ಕಾಲೇಜು- ವಿಶ್ವವಿದ್ಯಾನಿಲಯಗಳ ಹಳಿಯಲ್ಲಿ ಕಲಿಕೆಯ ಬಂಡಿ ಸಾಗುತ್ತದೆ. ಇದರ ಜೊತೆಗೆಯೇ ಕೆಲವೊಮ್ಮೆ ಸಮಾನಾಂತರವಾಗಿ , ಮತ್ತೆ ಕೆಲವೊಮ್ಮೆ ವಿರುದ್ಧವಾಗಿ ಮನೆ-ಕುಟುಂಬ -ಸಮಾಜ-ಪರಿಸರ-ಪುಸ್ತಕ-ಪ್ರವಾಸ… ಹೀಗೆ ಬಹುಸ್ತರಗಳಲ್ಲಿ ಕಲಿಯುವಿಕೆ ಸಂಭವಿಸುತ್ತದೆ. ಈ ಬಹುರೂಪಿ ಕಲಿಯುವಿಕೆಯ ಸಂಕೀರ್ಣ ಮೊತ್ತವೊಂದು ನೆನಪಿನ ಕೋಶಗಳಲ್ಲಿ ಹರಡಿಕೊಂಡಿರುತ್ತದೆ. ಈ ದೃಷ್ಟಿಯಿಂದಲೇ ಕಲಿಸುವಿಕೆ ಎನ್ನುವುದು ಕಲಿಯುವಿಕೆಯ ಪ್ರಾಯೋಗಿಕ ರೂಪ. ಆರೇಳು ದಶಕಗಳ ಹಿಂದಿನ ಕಾಲದಿಂದ ತೊಡಗಿ ನೆನಪುಗಳ ಪದರಗಳ ಆಳಕ್ಕೆ ಇಳಿದು ಸಿಕ್ಕಿದ್ದಷ್ಟನ್ನು ಹೊರತೆಗೆದು ನಾನು ಕಲಿತ ಸೋಜಿಗಗಳನ್ನು ಕಲಿಸಿದ ಸಾಹಸಗಳನ್ನು  ಬಿತ್ತರಿಸಲು ಬಯಸಿದ್ದೇನೆ…

Advertisement

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮ ಎಪ್ಪತ್ತೆರಡು ವರ್ಷಗಳ ಹಿಂದೆ ನಾನು ಹುಟ್ಟುವ ಕಾಲಕ್ಕೆ ವಿದ್ಯುತ್‌, ರಸ್ತೆ, ವಾಹನ, ಟೆಲಿಫೋನ್‌ ಇಂತಹ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದ ಹಳ್ಳಿ. ನನ್ನ ತಂದೆ ಅಗ್ರಾಳ ಪುರಂದರ ರೈ (1916-2001) ತಮ್ಮ ಹಿರಿಯರಿಂದ ಬಂದ ಪಾಲಿನ ಸಣ್ಣ ಕೃಷಿಭೂಮಿಯಲ್ಲಿ ಅಗ್ರಾಳದಲ್ಲಿ ಗುಡ್ಡದ ತಪ್ಪಲಿನಲ್ಲಿ ಮನೆ ಕಟ್ಟಿಕೊಂಡು ಭತ್ತ ಅಡಕೆಯ ಜೊತೆಗೆ ಹಣ್ಣುಗಳ ಕೃಷಿಯಲ್ಲಿ ಪ್ರಯೋಗ ಮಾಡುತ್ತಿದ್ದರು. ನಮ್ಮ ಮುಳಿಹುಲ್ಲಿನ ಮನೆಗೆ ದೊಡ್ಡಕ್ಕನ ಹೆಸರು ಇಟ್ಟಿದ್ದರು “ಜೀವನ ಕುಟಿ’ ಎಂದು. ಅದರ ಪಕ್ಕದಲ್ಲಿ ಇನ್ನೊಂದು ಸಣ್ಣ ಕಟ್ಟಡ “ಉದ್ಯೋಗ ಮಂದಿರ’. ಅದು ಅಪ್ಪನ ಓದುವ ಮತ್ತು ಬರೆಯುವ ಮನೆ. ಹಳೆಯ ಕಾಂಗ್ರೆಸ್ಸಿಗ ಸ್ವಾತಂತ್ರ್ಯ ಹೋರಾಟಗಾರ ಗಾಂಧೀವಾದಿ ಅಪ್ಪನ ಜೀವನ ಮತ್ತು ಉದ್ಯೋಗ ಕೃಷಿ ಮತ್ತು ಸಾಹಿತ್ಯ ಕೃಷಿಗಳಲ್ಲಿ ಹಂಚಿಹೋಗಿತ್ತು. ನನಗೆ ನೆನಪಿನ ಶಕ್ತಿ ಬರುವ ಹೊತ್ತಿಗೆ ನನ್ನ ಕಣ್ಣುಗಳ ಮೂಲಕ ಗ್ರಹಿಸಿದ್ದು ನಮ್ಮ ಮುಳಿಹುಲ್ಲಿನ ಮನೆ, ಮನೆಯ ಪಕ್ಕದ ನೀರಿನ ತೋಡು, ಮನೆಯ ಮುಂದಿನ ಬಾನಬೆಟ್ಟು ಗ¨ªೆಗಳು, ಮಾವು-ಹಲಸು-ಚಿಕ್ಕುವಿನ ಗಿಡಮರಗಳು, ತೆಂಗು-ಕಂಗು-ಬಾಳೆಗಳ ಕೂಡು ಕುಟುಂಬದ ತೋಟ, ತೋಟದ ಪಕ್ಕದ ಎರಡು ಕೆರೆಗಳು, ಮನೆಯ ಹಿಂದಿನ ಹಟ್ಟಿತುಂಬ ದನಕರು ಎತ್ತುಗಳ ಸಂಸಾರ- ಹೀಗೆ ಎಲ್ಲವನ್ನೂ ಬೆರಗಿನಿಂದ ನೋಡುತ್ತ ಅಂಗುಲ ಅಂಗುಲವಾಗಿ ಒಳಗೆ ಸೆಳೆದುಕೊಂಡು ಕಲಿತ, ಮನೆಯೆಂಬ ಪಾಠಶಾಲೆಯ ಅನುಭವ ಅಪಾರ.

ಪುತ್ತೂರು ಬಾಲವನದಲ್ಲಿದ್ದ ಶಿವರಾಮ ಕಾರಂತರ ಮಕ್ಕಳ ಕೂಟದ ಸದಸ್ಯನಾಗಿ ಆರಂಭವಾದ ಕಾರಂತರ ಜೊತೆಗಿನ ನನ್ನ ಅಪ್ಪನ ಸಂಬಂಧ ಬಾಲವನ ಕುಟುಂಬದ ಸದಸ್ಯನ ರೂಪಕ್ಕೆ ತಿರುಗಿತ್ತು. ಕಾರಂತರ ಮನೆಯಿಂದ ಅಪ್ಪ ತರುತ್ತಿದ್ದ ಪುಸ್ತಕಗಳು ನಿಧಾನವಾಗಿ ನನ್ನ ಓದಿಗೂ ಎಟುಕತೊಡಗಿದವು. ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಹಳ್ಳಿಯ ಹತ್ತು ಸಮಸ್ತರು, ಚೋಮನ ದುಡಿ, ಗೀತನಾಟಕಗಳು- ಇವುಗಳ ಓದು ಹೊಸಲೋಕಕ್ಕೆ ನನ್ನನ್ನು ಕೋಡೊಯ್ದಿತು. ಅಪ್ಪಮನೆಗೆ ತರಿಸುತ್ತಿದ್ದ ಪುಸ್ತಕ ಪ್ರಪಂಚ, ವಿದ್ಯಾದಾಯಿನಿ, ಕೊರವಂಜಿ, ಸಂಗಾತಿ ಪತ್ರಿಕೆಗಳನ್ನು ಓದಲು ಸುರುಮಾಡಿದೆ. 1952ರಲ್ಲಿ ಪ್ರಕಟವಾದ ಅಪ್ಪನ ರಸಾಯನ ಕಥಾಸಂಕಲನದ ಕತೆಗಳು ಅನುಭವದ ಕಥನಗಳಾಗಿ ಸತ್ಯದಮಾರ್ಗದ ಬದುಕಿನ ಪಾಠಗಳನ್ನು ಕಲಿಸಿದವು. ಇವತ್ತು ಸಮಾಜವಾದಿ ಎನ್ನುವ ಆದರ್ಶಗಳ ಪಾಠ ಅಪ್ಪನ ಬದುಕು-ಬರಹಗಳಿಂದ ಆಯಿತು. ಅಪ್ಪನಿಂದ ನಾನು ಕಲಿತದ್ದು ಹಣ-ಚಿನ್ನ-ಐಶ್ವರ್ಯಗಳನ್ನು ತಿರಸ್ಕರಿಸುವ ಧೈರ್ಯ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಕೊನೆ ಮುಟ್ಟಿಸುವ ಛಲ ಮತ್ತು ಯಾವುದೇ ಕೆಲಸವನ್ನು ಮಾಡುವಾಗಲೂ ಅದರ ಸಾಧುತ್ವವನ್ನು ಪ್ರಶ್ನಿಸುವ ವಿಮರ್ಶಕ ಮನೋಧರ್ಮ. 

ಅಮ್ಮ ಯಮುನಾ (1921-2010) ಮನೆಯ ಒಳಗೆ ಮತ್ತು ಹೊರಗೆ ಸದಾ ದುಡಿಯುವ ಸವ್ಯಸಾಚಿ. ಅಡುಗೆಮನೆ, ಭತ್ತದ ಗ¨ªೆ, ಅಡಿಕೆ ತೋಟ, ತರಕಾರಿ ಹಿತ್ತಿಲು, ಹಟ್ಟಿ ಕೊಟ್ಟಿಗೆ ಎಲ್ಲ ಕಡೆ ಅಮ್ಮ ಕೆಲಸಮಾಡುವ ಕ್ರಮ ನನ್ನ  ಪಾಲಿಗೆ ಅಚ್ಚರಿ. ದೇಹವನ್ನು ಮತ್ತು ಮನಸ್ಸನ್ನು ಬಹುರೂಪಿಯಾಗಿ ಬಳಸಬಹುದು ಎನ್ನುವ ಪಾಠವನ್ನು ನಾನು ಕಲಿತದ್ದು ಅಮ್ಮನಿಂದ. ಐದನೆಯ ತರಗತಿಯವರೆಗೆ ಓದಿದ ಅಮ್ಮ ಗ್ರಂಥಗಳ ನೆರವಿಲ್ಲದೆಯೇ ಕುಮಾರವ್ಯಾಸ ಭಾರತ ಮತ್ತು ಜೈಮಿನಿ ಭಾರತದ ಪದ್ಯಗಳನ್ನು ಸುಶ್ರಾವ್ಯವಾಗಿ ವಾಚನದ ಧಾಟಿಯಲ್ಲಿ ಹಾಡುತ್ತಿದ್ದರು. ಕಿಲ್ಲೆಯವರ ಕಾನಿಗೆ ಕವನಸಂಕಲನದ ತುಳು ಪದ್ಯಗಳನ್ನು, ಕಾರಂತರ ಗೀತನಾಟಕಗಳ ಸಾಲುಗಳನ್ನು ರಾಗ ಎಳೆದು ಹಾಡುವ ಅವರ ಕಂಠಮಾಧುರ್ಯ ಅಪೂರ್ವ. ಅಮ್ಮನಿಂದ ನಾನು ಕಲಿತದ್ದು ಸಹನೆ ಮತ್ತು ದುಡಿಮೆಯ ಸಾಧ್ಯತೆಯನ್ನು.

ಅಗ್ರಾಳದ ನಮ್ಮ ಮನೆಯ ಅಂಗಳದಲ್ಲಿ ಸ್ಟೇಜ್‌ ಕಟ್ಟಿ ಪರಿಸರದ ಎಲ್ಲ ಜಾತಿಯ ಮಕ್ಕಳನ್ನು ಒಟ್ಟು ಸೇರಿಸಿ ವರ್ಷಕ್ಕೊಮ್ಮೆ ಹಾಡು-ಕುಣಿತ-ನಾಟಕ ಹೀಗೆ ಬಹುಮುಖೀ ಚಟುವಟಿಕೆಗಳನ್ನು ಅಪ್ಪಮತ್ತು ಅಮ್ಮ ನಡೆಸುತ್ತಿದ್ದರು. ಮನೆಯ ಮಕ್ಕಳು ನಾವು-ಜೀವನಕ್ಕ, ಆಶಕ್ಕ, ನಾನು ಮತ್ತು ತಮ್ಮ ಉಲ್ಲಾಸ-ಅಮ್ಮ ಮತ್ತು ಲೀಲಾ ಕಾರಂತರ ನಿರ್ದೇಶನದಲ್ಲಿ ಪಾಲುಗೊಂಡ ಮಸುಕಾದ ನೆನಪುಗಳು ಇವೆ. ಅಮ್ಮನ ಆಪ್ತ ಗೆಳತಿ ಆಗಿದ್ದ ಲೀಲಾ ಕಾರಂತರು ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡುತ್ತಿದ್ದರು. ನರ್ಕಳ ಮಾರಪ್ಪಶೆಟ್ಟರು ಹವ್ಯಕ ಭಾಷೆಯಲ್ಲಿ ರಚಿಸಿದ ಕೂಸಕ್ಕನ ಮದುವೆ ಹಾಸ್ಯನಾಟಕ ನಮ್ಮ ಮನೆಯ ಅಂಗಳದಲ್ಲಿ ಪ್ರದರ್ಶನವಾದ ನೆನಪು ಇದೆ. 

Advertisement

ಮನೆಯಿಂದ ಕೆಳಕ್ಕೆ ಇಳಿದು ಎಡಕ್ಕೆ ತಿರುಗಿದರೆ ನೀರಿನ ಒಂದು ಚಿಕ್ಕ ತೋಡು. ಆ ತೋಡಿಗೆ ತಾಗಿಕೊಂಡು ಆಚೆ ಬದಿಯಲ್ಲಿ ಸೋಗೆ ಹೊದಿಸಿದ ನಮ್ಮ ಬಚ್ಚಲು ಕೊಟ್ಟಿಗೆ. ಅದರ ಹಿಂದುಗಡೆ ಒಂದು ತೆರೆದ ಬಾವಿ. ಆ ಬಾವಿಗೆ ರಾಟೆ ಸಿಕ್ಕಿಸಿ, ಅದರಲ್ಲಿ ಹಗ್ಗ ನೇತಾಡಿಸಿ, ಹಗ್ಗಕ್ಕೆ ಕೊಡಪಾನ ಸಿಕ್ಕಿಸಿ, ಹಗ್ಗವನ್ನು ನಿಧಾನವಾಗಿ ಬಾವಿಯೊಳಗೆ ಇಳಿಸಿ, ಕೊಡಪಾನದಲ್ಲಿ ನೀರು ಗುಳುಗುಳು ಎಂದು ತುಂಬುವವರೆಗೆ ಕಾದು, ಎಡದ ಕಾಲನ್ನು ಬಾವಿಯ ಘಟ್ಟನೆಗೆ ಆನಿಸಿ ಒತ್ತಿ, ಒಂದರ ಬಳಿಕ ಒಂದು ಕೈಯಿಂದ ಬಾವಿಯ ಹಗ್ಗವನ್ನು ಮೇಲಕ್ಕೆ ಎಳೆಯುತ್ತಾ, ನೀರು ತುಂಬಿದ ಕೊಡಪಾನ ಮೇಲಕ್ಕೆ ಬಂದಾಗ ಸಮತೋಲನ ತಪ್ಪದಂತೆ ಬಲದ ಕೈಯಿಂದ ನೀರು ತುಂಬಿದ ಕೊಡಪಾನವನ್ನು ಎಳೆದು, ಅದರ ಕುತ್ತಿಗೆಯ ಹಗ್ಗದ ಬಂಧನವನ್ನು ಬಿಡಿಸಿ, ಬಲದ ಕೈಯಿಂದ ಕೊಡಪಾನದ ಕುತ್ತಿಗೆಯನ್ನು ಹಿಡಿದುಕೊಂಡು ಎಡದ ಕೈಯನ್ನು ಅದರ ತಳಭಾಗಕ್ಕೆ ಒತ್ತಿ, ಕುಂಭಮೇಳದ ಯಾತ್ರೆಯ ಅನುಭವದಿಂದ ಕಲಿತದ್ದು ಬಾಗದೆ ವಾಲದೆ ನಡೆಯುವ ಸಮತೋಲನದ ಪಾಠವನ್ನು. 

ತೋಟದ ಬದಿಯ ಕೆರೆಗಳಲ್ಲಿ ಬಾಳೆದಿಂಡನ್ನು ಆನಿಸಿಕೊಂಡು ಎರಡು ಕಾಲುಗಳನ್ನು ನೀರಲ್ಲಿ ಬಡಿದುಕೊಂಡು ಈಜಲು ಕಲಿತಾಗ, ಬಾಳೆದಿಂಡು ಜಾರಿ, ನಾನು ನೀರಿನೊಳಗೆ ಮುಳುಗಿ, ಬಾಯಿ ಮೂಗಿಗೆ ನೀರು ತುಂಬಿ, ಉಸಿರುಕಟ್ಟಿ ಚೆಂಡಿನಂತೆ ಮೇಲಕ್ಕೆ ಜಿಗಿದು ಮತ್ತೆ ಧೈರ್ಯದಿಂದ ಯಾವುದೇ ನೆರವಿಲ್ಲದೆ ಮುಂದಕ್ಕೆ ಈಜುವುದನ್ನು ಕಲಿತೆ. ಆ ಕೆರೆಗಳಲ್ಲಿ ಅಗ್ರಾಳದ ಮನೆಯವರೆಲ್ಲ ಸಾಮೂಹಿಕವಾಗಿ ಮೀನು ಹಿಡಿಯುವ ಸಂಭ್ರಮದಲ್ಲಿ ನಾನು ಹಿಡಿದ ಮಕ್ಕೆರಿಗೆ ತರು ಮೊರಂಟೆ ಮೀನುಗಳ ಜೊತೆಗೆ ಒಳ್ಳೆಹಾವು ಸೇರಿಕೊಂಡು ನನ್ನ ಮೈಮೇಲೆ ಜಿಗಿಯಿತು. ಅಲ್ಲಿದ್ದ ಹುಡುಗಿಯರು, “ಒಳ್ಳೆಯವರಿಗೆ ಒಳ್ಳೆಹಾವು ಸಿಗುತ್ತದೆ’ ಎಂದು ತಮಾಷೆ ಮಾಡಿದಾಗ, “ನಿಮಗೆ ಒಳ್ಳೆ ಗಂಡ ಸಿಗಲಿ’ ಎಂದು ಕೀಟಲೆ ಮಾಡಿದೆ. ವಿಷವಿಲ್ಲದ ಒಳ್ಳೆಹಾವು ಮನುಷ್ಯರ ಮಾದರಿಯೊಂದರ ರೂಪಕ. 

ಅಗ್ರಾಳದ ನಮ್ಮ ಮನೆಯ ಹಿಂದುಗಡೆ ಗುಡ್ಡದ ಮೇಲೊಂದು ಗುಡ್ಡ. ಅದರ ಆಚೆಗೆ ಮತ್ತೂಂದು. ಹೀಗೆ ಏರುತ್ತಾ ಏರುತ್ತಾ ಹೋಗುವ ಗುಡ್ಡ ಸಾಲುಗಳಲ್ಲಿ ಅಲೆದಾಡಿದ ಸುತ್ತಾಟಗಳ ಅನುಭವಗಳು ರೋಮಾಂಚಕ. ಬೆಟ್ಟದ ತುದಿಯ ನೆಲ್ಲಿಕಾಯಿಗಳನ್ನು ಕೀಳುತ್ತ, ದಾರಿಯಲ್ಲಿ ಸಿಕ್ಕಿದ ಕೇಪುಳಹಣ್ಣು, ಕುಂಟಾಲು, ಮುಳ್ಳಂಕೊಳ್ಳೆ, ನೇರಳೆಹಣ್ಣುಗಳನ್ನು ತಿನ್ನುತ್ತ ನಾಲಗೆಯನ್ನು ಹಸುರು ಕೆಂಪು ನೇರಳೆ ಮಾಡುತ್ತಾ ದಟ್ಟ ಕಾಡಿನ ಒಳಹೊಕ್ಕು, ದೂರದಲ್ಲಿ ಎಲ್ಲೋ ಹುಲಿಯ ಗರ್ಜನೆ ಕೇಳಿ, ನಡೆದುಬಂದ ದಾರಿಯ ಕಡೆಗೆ ತಿರುಗಿ ನೋಡದೆ, ನವ್ಯಮಾರ್ಗವನ್ನು ತುಳಿದು ಪಲಾಯನ ಮಾಡಿದ ಅನುಭವಗಳು ಬದುಕಿನ ಹೊಸಮಾರ್ಗಗಳ ಶೋಧಗಳಿಗೆ ಪ್ರೇರಣೆ ಕೊಟ್ಟವು. ನಮ್ಮ ಮನೆಯ ಹಿಂಬದಿಯಲ್ಲಿ ಮಲಗಿದ್ದ ನಮ್ಮ ನಾಯಿಯನ್ನು ರಾತ್ರಿ ವೇಳೆ ಹುಲಿ ಬಂದು ಕಚ್ಚಿಕೊಂಡು ಹೋದದ್ದು, ಮುಂದೊಂದು ದಿನ ಅಗ್ರಾಳದ ಬೇಟೆಗಾರ ರಾಮಣ್ಣ ರೈ ಹುಲಿಯೊಂದನ್ನು ಬೇಟೆಯಾಡಿದ್ದು, ಸತ್ತ ಹುಲಿಯನ್ನು ಕಾಣಲು ಊರಿನ ಜನರೆಲ್ಲ ನೆರೆದದ್ದು, ನಾವು ಮಕ್ಕಳು ಹತ್ತಿರದಿಂದ ಸತ್ತ ಹುಲಿಯ ಭೀಮಕಾಯವನ್ನು ಕಂಡು ಬೆರಗಾದದ್ದು ನೆನಪಿನಲ್ಲಿ ಗಾಢವಾಗಿದೆ. ಹೀಗೆ ಮನೆಯಿಂದ ಹೊರಗೆ ಗ¨ªೆಯಲ್ಲಿ , ತೋಟದಲ್ಲಿ,  ಕೆರೆಯಲ್ಲಿ , ಗುಡ್ಡದಲ್ಲಿ, ಕಾಡಿನಲ್ಲಿ ಪಡೆದ ಅನುಭವಗಳಿಂದ ಕಲಿತ ವಿದ್ಯೆಗಳು ಮುಂದೆ ಬದುಕಿನ ಬೇರೆ ಬೇರೆ ರಂಗಗಳಲ್ಲಿ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸವನ್ನು ತಂದುಕೊಟ್ಟುವು.

ಶಾಲೆಗೆ ಹೋಗುವ ಮೊದಲಿನ ವರ್ಷಗಳಲ್ಲಿ ನನ್ನನ್ನು ಸದಾ ಎತ್ತಿಕೊಂಡು ಕತೆ, ಹಾಡು ಹೇಳುತ್ತಿದ್ದ ರಾಮು ನಾಯ್ಕೆದಿ, ಹೆಗಲ ಮೇಲೆ ನನ್ನನ್ನು ಕೂರಿಸಿಕೊಂಡು ಮೈಲುಗಟ್ಟಲೆ ದೂರದ ಕೇಪುವಿನ ಕಜಂಬುವಿಗೆ ಹೊತ್ತುಕೊಂಡು ಹೋದ ಚೋಮ ಗೌಡ, ನಮ್ಮ ಮನೆಯ ಎರಡು ತಾಳೆಮರಗಳನ್ನು ಗುತ್ತಿಗೆಗೆ ತೆಗೆದುಕೊಂಡು ಮೂರ್ತೆಮಾಡಿ, ಓಲೆಬೆಲ್ಲ ತಯಾರಿಸಿ, ಬೆಲ್ಲದ ಕಟ್ಟಗಳನ್ನು ಮನೆಗೆ ತಂದುಕೊಡುವಾಗ ನಮಗೆ ಮಕ್ಕಳಿಗೆ ತಿನ್ನಲು ಅಕ್ಕಿ ಬೆರೆಸಿದ ಚಿಕ್ಕ ಬೆಲ್ಲವನ್ನು ತರುತ್ತಿದ್ದ ರಾಮ ಪೂಜಾರಿ, ನಮ್ಮ ಮನೆಯಿಂದ “ಬಾಲವನ’ದ ಕಾರಂತರ ಮನೆಗೆ ಹಲಸಿನ ಹಣ್ಣು, ತೆಂಗಿನಕಾಯಿ ಕೊಂಡುಹೋಗಿ ಬರುವಾಗ ಅಲ್ಲಿಂದ ಚಿಕ್ಕು ಮತ್ತು ಕಸಿಮಾವಿನಹಣ್ಣು ತಂದು ನಮಗೆ ಕೊಡುತ್ತಿದ್ದ ಮುದ್ದ, ಮೇರ-ಇಂತಹ ಹಲವರು ಅಗ್ರಾಳ ಪರಿಸರದಲ್ಲಿ ನನಗೆ ಹೊಸಜಗತ್ತನ್ನು ತೋರಿಸಿದವರು. 

ಅಗ್ರಾಳದ ನಮ್ಮ ಮನೆಯಿಂದ ಪರಿಯಾಲ್ತಡ್ಕ ಶಾಲೆಗೆ ಹೋಗುವ ದಾರಿಯಲ್ಲಿ ಪರಿಯಾಲ್ತಡ್ಕದ ಕೇಂದ್ರದಲ್ಲಿ ಇದ್ದುದು ಒಂದೇ ಒಂದು “ಅಂಗಡಿ’. ನಮಗೆ “ಅಂಗಡಿ’ ಎನ್ನುವ ಪದಕ್ಕೆ ಗೊತ್ತಿದ್ದ ಅರ್ಥವೆಂದರೆ ಅದು ಯು.ಟಿ. ಅವರ ಅಂಗಡಿ. ಯು.ಟಿ. ಮೊಹಮ್ಮದ್‌ ಕುಂಞಿ ಎಂಬ ಹಿರಿಯರೊಬ್ಬರು ನಡೆಸುತ್ತಿದ್ದ ಅಂಗಡಿ ಅದು. ಆ ಅಂಗಡಿಯಲ್ಲಿ ಇರುತ್ತಿದ್ದ ಅವರ ಮೂವರು ಮಕ್ಕಳ ನೆನಪು ಚೆನ್ನಾಗಿದೆ. ಯು. ಟಿ. ಮೊಹಮ್ಮದ್‌ ಅವರ ಹಿರಿಯ ಮಗ ಯು. ಟಿ ಪೆರಿಯ ಕುಂಞಿ (ಪೆರಿಯ/ಪರಿಯ ಬ್ಯಾರಿ). ಅಂಗಡಿಯಲ್ಲಿ ಕ್ರಿಯಾಶೀಲರಾಗಿ ಇರುತ್ತಿದ್ದ ಅವರ ಇಬ್ಬರು ತಮ್ಮಂದಿರು- ಯು. ಟಿ. ಮೊಯಿದಿನಬ್ಬ (ಮೋನು ಬ್ಯಾರಿ). ಕಿರಿಯವರು ಮೂಸೆ ಬ್ಯಾರಿ. ಪರಿಯ ಬ್ಯಾರಿ ಅವರ ದೊಡ್ಡ ತಮ್ಮ ಯು. ಟಿ. ಫ‌ರೀದ್‌ ಲಾ ಕಲಿತು ಮಂಗಳೂರಲ್ಲಿ ವಕೀಲರು ಆಗಿದ್ದರು. ಮುಂದೆ ಅವರು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಉಳ್ಳಾಲ ಕ್ಷೇತ್ರದಿಂದ ಶಾಸಕರಾಗಿದ್ದರು. ಯು. ಟಿ. ಅವರ ಅಂಗಡಿ ನಮ್ಮ ಗ್ರಾಮದ ಕೃಷಿಕರಿಗೆ ಮತ್ತು ಎಲ್ಲ ವರ್ಗದ ಜನರಿಗೆ ಆಗಿನ ಕಾಲದ ಸೂಪರ್‌ಮಾರ್ಕೆಟ್‌ ಆಗಿತ್ತು. ನಮ್ಮ ಮನೆಯ ಅಡಿಕೆ, ಬಾಳೆಕಾಯಿ, ತೆಂಗಿನಕಾಯಿ ಎಲ್ಲವನ್ನೂ ಅವರಿಗೆ ಮಾರುತ್ತಿದ್ದದ್ದು, ನಮ್ಮ ಮನೆಗೆ ಬೇಕಾದ ಜೀನಸು, ಅಚ್ಚುಬೆಲ್ಲ, ಉಪ್ಪು$, ಚಿಮಿಣಿ ಎಣ್ಣೆ, ಸಾಬೂನು, ಬೆಂಕಿಪೆಟ್ಟಿಗೆ, ಕೊಡೆ, ಬಾವಿಹಗ್ಗ, ಹಿಂಡಿ, ಒಣಮೀನು-ಎಲ್ಲ ಅಲ್ಲಿಂದಲೇ. ಜೊತೆಗೆ ಅಲ್ಲಿ ನಮಗೆ ಬೇಕಾದ ಬಟ್ಟೆಗಳೂ ಸಿಗುತ್ತಿದ್ದುವು, ನಮ್ಮ ಚಡ್ಡಿ ಮತ್ತು ಅಂಗಿಯ ಬಟ್ಟೆಗಳನ್ನು ತೆಗೆದುಕೊಂಡು ಅಂಗಡಿಯಲ್ಲಿಯೇ ಇದ್ದ ಟೈಲರ್‌ನವರಲ್ಲಿ ಹೊಲಿಸುತ್ತಿ¨ªೆವು. ನನ್ನ ಅಪ್ಪ ಮತ್ತು ಪರಿಯ ಬ್ಯಾರಿ ಬಹಳ ಸ್ನೇಹಿತರಾಗಿದ್ದರು. ಇಬ್ಬರೂ ಕಾಂಗ್ರೆಸ್‌ ರಾಜಕೀಯ ಪಕ್ಷದವರೆಂಬುದಷ್ಟೇ ಅಲ್ಲದೆ, ಅಪ್ಪನ ತಿಳುವಳಿಕೆಯ ಬಗ್ಗೆ ಪರಿಯ ಬ್ಯಾರಿ ಅವರಿಗೆ ವಿಶೇಷ ಗೌರವ ಇತ್ತು. ಅನೇಕ ವಿಷಯಗಳಲ್ಲಿ ಪರಿಯ ಬ್ಯಾರಿಯವರು ಅಪ್ಪನ ಜೊತೆಗೆ ಅಂಗಡಿಯಲ್ಲಿ ಕುಳಿತು ಸಮಾಲೋಚಿಸುವುದನ್ನು ನೋಡಿದ್ದೇನೆ. ನಾನು ಅಂಗಡಿಗೆ ಸಾಮಾನು ತರಲು ಹೋದಾಗ ಅಪ್ಪನ ಮೇಲಿನ ಗೌರವದಿಂದ ನನಗೆ ಖರ್ಜೂರ ಕೊಡುತ್ತಿದ್ದ ಅವರ ಪ್ರೀತಿಯನ್ನು ಮರೆಯಲಾರೆ. ಯು. ಟಿ. ಫ‌ರೀದ್‌ರು ಶಾಸಕರಾಗಿದ್ದಾಗ, ಮಂಗಳೂರು ವಿವಿಯ ಸೆನೆಟ್‌ ಸದಸ್ಯರಾಗಿ¨ªಾಗ ಸಿಕ್ಕಿದಾಗಲೆಲ್ಲ ನನ್ನಲ್ಲಿ ಮೊದಲು ಕೇಳುತ್ತಿದ್ದದ್ದು “ಅಮ್ಮೆರ್‌ ಎಂಚ ಉಲ್ಲೆರ್‌?’ (ತಂದೆಯವರು ಹೇಗೆ ಇದ್ದಾರೆ) ಎಂದು. ರಸ್ತೆ ಮತ್ತು ವಾಹನ ಸೌಕರ್ಯ ಇಲ್ಲದ ಆ ಕಾಲದಲ್ಲಿ ಸಾಮಾನ್ಯ ಕೃಷಿಕರ ಕೃಷಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಮತ್ತು ಹಳ್ಳಿಗರಿಗೆ ದಿನನಿತ್ಯದ ವಸ್ತುಗಳನ್ನು ಒದಗಿಸುವ ಪುಣ್ಯದ ಕೆಲಸವನ್ನು ಮಾಡಿದ ಯು. ಟಿ. ಕುಟುಂಬದವರ ಸೇವೆ ಅಪೂರ್ವ. ಧರ್ಮ-ಜಾತಿಗಳ ಛಿದ್ರೀಕರಣದ ಈ ಕಾಲಘಟ್ಟದಲ್ಲಿ ತಿಳುವಳಿಕೆ, ಕೊಡುಕೊಳೆ ಮತ್ತು ಸೇವೆಯೇ ಗಟ್ಟಿಸಂಬಂಧವನ್ನು ಉಳಿಸಬಲ್ಲುದು ಎನ್ನುವ ದೊಡ್ಡ ಪಾಠವನ್ನು ನಾನು ಕಲಿತದ್ದು ಪರಿಯಾಲ್ತಡ್ಕ ಅಂಗಡಿಯವರಿಂದ.

ನಾನು ಮನೆಯಿಂದ ಹೊರಟು ಪರಿಯಾಲ್ತಡ್ಕ ಶಾಲೆಗೆ ಹೋಗುವ ದಾರಿಯಲ್ಲಿ ಗ¨ªೆಗಳ ಬದುಗಳನ್ನು  ತೋಟದ ಬದಿಗಳನ್ನು ಹಾದು ಮುಂದೆ ಹೋಗುವಾಗ ಎದುರಾಗುತ್ತಿದ್ದವು ಪಾಪುಗಳು (ಮರದ ಕಾಲುಸಂಕ) ಮತ್ತು ತಡಮ್ಮೆ (ತಡವೆ)ಗಳು. ಚಿಕ್ಕ ತೋಡುಗಳನ್ನು ದಾಟಲು ಸಪೂರವಾದ, ಕೆಲವೊಮ್ಮೆ ಒಂದೇ ಅಡಕೆಮರದ ಪಾಪು. ಅದರಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಕೆಳಗೆ ಬೀಳದಂತೆ ಸರ್ಕಸ್ಸಿನವರಂತೆ ನಡೆದುಕೊಂಡು ಆಚೆದಡ ಸೇರಬೇಕು. ಇನ್ನೊಂದು ಬಗೆಯ ದಾಟುವಿಕೆ ಎಂದರೆ ಅಡ್ಡಿಮಾಡಲು ಅಡ್ಡವಾಗಿ ಇಟ್ಟ ಕೋಲುಮರಗಳ ತಡೆಯನ್ನು ಸಾವಧಾನದಿಂದ ಒಂದೊಂದು ಹೆಜ್ಜೆಯನ್ನು ಇಟ್ಟು ಮೇಲಕ್ಕೆ ಏರಿ ವ್ಯವಧಾನದಿಂದ ಆಚೆಬದಿಗೆ ಕಾಲನ್ನು ಕೆಳಕ್ಕೆ ಚಾಚಿ ನೆಲವನ್ನು ಮುಟ್ಟಬೇಕು. ಇಂತಹ “ಪಾಪು’ ಮತ್ತು “ತಡಮ್ಮೆ’ ಇವು ಬದುಕಿನಲ್ಲಿ ದಾಟುವಿಕೆಯ ಅದ್ಭುತ ರೂಪಕಗಳು.

ಶಿಕ್ಷಣ ಸಂಸ್ಥೆಗಳಲ್ಲಿ ಸಿದ್ಧಾಂತ ಮತ್ತು ಪ್ರಯೋಗ ಎಂಬ ಎರಡು ಅವಯವಗಳು ಇರುತ್ತವೆ. ವಿಜ್ಞಾನ ತಂತ್ರಜ್ಞಾನದ ವಿಷಯಗಳಲ್ಲಿ ಪ್ರಯೋಗಶಾಲೆಗೆ ವಿಶೇಷ ಮಹತ್ವ ಇದೆ. ಅಗ್ರಾಳದ ಮನೆ ಮತ್ತು ಪರಿಸರದಲ್ಲಿ ನಾನು ಪಡೆದ ನೂರಾರು ಚಿಕ್ಕಪುಟ್ಟ ಅನುಭವಗಳು ನರಮಂಡಲದ ಎಡೆಎಡೆಗಳಲ್ಲಿ ಸೇರಿಕೊಂಡು ಬದುಕು ಎಂಬ ಪ್ರಯೋಗಶಾಲೆಯ ಕಠಿಣ ಪರೀಕ್ಷೆಗಳಲ್ಲಿ ಉದ್ದಕ್ಕೂ ನನ್ನ ನೆರವಿಗೆ ಬಂದಿವೆ. 

ಬಿ. ಎ. ವಿವೇಕ ರೈ

Advertisement

Udayavani is now on Telegram. Click here to join our channel and stay updated with the latest news.

Next