ಶಾಲೆಗೆ ರಜೆಯಂತೆ! ಈ ಸುದ್ದಿ ಕೇಳಿ, ಮೊದಲು ಖುಷಿಯಾಗಿದ್ದೇ ಮನೆಯಲ್ಲಿನ ಪುಟಾಣಿಗಳಿಗೆ. ದೊಡ್ಡವರಿಗೆ “ಛೇ ಇದೆಂಥ ಕೆಲ್ಸ’ ಎನ್ನುವ ಬೇಸರ ಇದ್ದರೂ, ಮಕ್ಕಳು ಅದನ್ನು ಗ್ರಹಿಸುವ ಹಂತ ತಲುಪಿಲ್ಲದೇ ಇರಬಹುದು. ಆ ಆತಂಕ ಅವರಿಗೆ ಬೇಗನೆ ತಟ್ಟದೆಯೂ ಇದ್ದಿರಬಹುದು. ಶಾಲೆ ಮಾತ್ರವೇ ಅಲ್ಲ, ಕೊರೊನಾ ಭೀತಿಯೂ ಮಕ್ಕಳನ್ನು ಹೊರಗೆ ಕರೆದೊಯ್ಯಲೂ ಅವಕಾಶ ನೀಡುತ್ತಿಲ್ಲ ಎನ್ನುವುದಂತೂ ಸತ್ಯ.
ಹೊರಗೆ ಸುತ್ತಾಡೋಕ್ಕೂ ಹೋಗೋ ಹಾಗಿಲ್ಲ ಅಂದ್ರೆ, ಮನೆಯಲ್ಲಿ ಕೂತು ಕೂತು ಮಕ್ಕಳಿಗೆ ಬೋರ್ ಆಗಲ್ವಾ? ಎಂಬ ಪ್ರಶ್ನೆ ಬೆಂಗಳೂರಿನ ಪ್ರತಿ ಪೋಷಕರಿಗೂ ಸಹಜವಾಗಿ ಕಾಡುತ್ತದೆ. ಹಾಗಂತ, ಮಕ್ಕಳು ಹೇಗೋ ಟೈಮ್‌ಪಾಸ್ ಮಾಡ್ಕೊಂಡು ಇರಲಿ ಎನ್ನುವ ಕಾಲ ಇದಲ್ಲ. ಒಂದು ಸಂಗತಿ ಗೊತ್ತೇ? ಮಕ್ಕಳಿಗೆ ಕೆಲವು ಶಿಕ್ಷಣ ಹೇಳಿಕೊಳ್ಳಲು, ಇದು ಒಳ್ಳೆಯ ಸಮಯ.
1. ಯಾವ ವಿಚಾರದಲ್ಲಿ ಮಗು ವೀಕ್ ಇದೆ..? ಈ ಪ್ರಶ್ನೆಗೆ ಉತ್ತರ ನಿಮಗೆ ಗೊತ್ತೇ ಇರುತ್ತೆ. ಮಕ್ಕಳಿಗೆ ಮ್ಯಾಥು ತಲೆ ತಿನ್ನೋ ವಿಚಾರ ಆಗಿರಬಹುದು. ಇಂಗ್ಲಿಷ್ ಕಗ್ಗಂಟಾಗಿರಬಹುದು. ಕನ್ನಡದಲ್ಲಿ ಬರೆಯಲು ತಿಳಿದಿಲ್ಲದೆ ಇರಬಹುದು. ಯೂಟ್ಯೂಬ್‌ನಲ್ಲಿ ಈ ಬಗ್ಗೆ ಕಲಿಕಾ ವಿಡಿಯೊಗಳು ಇದ್ದೇ ಇವೆ. ಅವುಗಳನ್ನು ನೋಡಿ, ಜ್ಞಾನ ಹೆಚ್ಚಿಸಿಕೊಳ್ಳಬಹುದು.
2. ಅಡುಗೆಮನೆ ಅನ್ನೋದೇ ಒಂದು ಪುಟ್ಟ ಜಗತ್ತು. ಪ್ರತಿ ಮನುಷ್ಯನಿಗೆ ಅಗತ್ಯವಾದ ಜ್ಞಾನ ಅಡುಗೆಯ ಲೋಕದಲ್ಲಿದೆ. ಪುಟಾಣಿಗಳಿಗೆ ಜ್ಯೂನಿಯರ್ ಶೆಫ್ ಆಗಿಯೂ ಪಾತ್ರ ವಹಿಸುವಂತೆ ಟಾಸ್ಕ್ ನೀಡಬಹುದು.
3. ಇಂಡೋರ್ ಗೇಮ್‌ಗಳಲ್ಲಿಯೇ ತಲೆಗೆ ಕೆಲಸ ಕೊಡುವಂಥ ಆಟಗಳಿವೆ. ಚೆಸ್, ಪಝಲ್, ಸುಡೋಕು… ಇತ್ಯಾದಿ. ಈ ಆಟಗಳನ್ನು ಮಕ್ಕಳಿಗೆ ಕಲಿಸಬಹುದು.
4. ಚೆಂದದ ಕಥೆಗಳನ್ನು ಹೇಳಿ, ಮಕ್ಕಳ ಬೌದ್ಧಿಕ ಪ್ರಪಂಚವನ್ನು ವಿಶಾಲಗೊಳಿಸಲು ಇದು ಸುಸಮಯ. ಹಾಡುಗಳು, ಶ್ಲೋಕಗಳು, ಭಾಷಣಕಲೆ ಹೇಳಿಕೊಡುವ ಮೂಲಕ, ಮಕ್ಕಳ ರಜೆಗೆ ವಿಶೇಷ ಅರ್ಥ ನೀಡಬಹುದು.
5. ತಾರಸಿತೋಟ ಪೋಷಣೆ, ಪೇಂಟಿಂಗ್ ಕಲೆ, ಕಂಪ್ಯೂಟರ್ ಜ್ಞಾನ, ಪುಸ್ತಕಗಳ ಓದು, ಸಿನಿಮಾ ವೀಕ್ಷಣೆ- ಈ ಚಟುವಟಿಕೆಗಳಲ್ಲೂ ಮಕ್ಕಳನ್ನು ತಲ್ಲೀನಗೊಳಿಸಬಹುದು.