Advertisement

ವಿದ್ಯಾನಗರದಲ್ಲಿ ಮನೆಗಳ್ಳತನ-ಪರಿಶೀಲನೆ

02:27 PM Apr 09, 2022 | Shwetha M |

ಮುದ್ದೇಬಿಹಾಳ: ಬೇಸಿಗೆಯ ಧಗೆಯ ಹಿನ್ನೆಲೆ ತಾಯಿ ಮತ್ತು ಮಗ ಇಬ್ಬರೂ ಮನೆಯ ಮಾಳಿಗೆ ಮೇಲೆ ಮಲಗಿದ ಸಮಯ ಸಾಧಿಸಿದ ಕಳ್ಳರು ಮನೆ ಮುಂಬಾಗಿಲ ಬೀಗ ಮತ್ತು ಮನೆಯೊಳಗಿನ ಮೂರು ಟ್ರೇಜರಿ ಮುರಿದು ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳುವು ಮಾಡಿ ಪರಾರಿಯಾದ ಘಟನೆ ಶುಕ್ರವಾರ ಬೆಳಗ್ಗೆ ಪಟ್ಟಣದ ವಿದ್ಯಾನಗರದಲ್ಲಿ ಬೆಳಕಿಗೆ ಬಂದಿದೆ.

Advertisement

ಪಟ್ಟಣದ ಎಂಜಿಎಂಕೆ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಜಗದೀಶ ಗಂಗಣ್ಣ ಮೇಟಿ ಅವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಈ ವೇಳೆ ರಾತ್ರಿ ಮನೆಯ ಪಕ್ಕದಿಂದ ಶೂ, ಚಪ್ಪಲಿ ಬಿಚ್ಚಿಟ್ಟು ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಟ್ರೇಜರಿಯಲ್ಲಿದ್ದ 25,000 ರೂ. ನಗದು, ತಾಳಿ ಚೈನು, ಉಂಗುರ, ಕಿವಿಯೋಲೆ, ಬೆಂಡೋಲೆ ಸೇರಿ ಅಂದಾಜು 3 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ಮಧ್ಯರಾತ್ರಿ ನಿಶ್ಯಬ್ಧವಾಗಿ ನಡೆದ ಈ ಘಟನೆಯಿಂದ ಅಕ್ಕಪಕ್ಕದವರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ರೇಣುಕಾ ಜಕನೂರ, ಎಎಸೈ ಎ.ಬಿ. ಟಕ್ಕಳಕಿ ಹಾಗೂ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ವಿಜಯಪುರದಿಂದ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ತಪಾಸಣೆ ನಡೆಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಸಿಗೆ ಆರಂಭವಾಗಿದ್ದು ಕಳ್ಳರ ಹಾವಳಿ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ವಿದ್ಯಾನಗರದಲ್ಲಿ ಪೊಲೀಸರು ಗಸ್ತು ಹೆಚ್ಚಿಸಬೇಕು ಎಂದು ನಿವಾಸಿಗಳಾದ ಎಂ.ಎಸ್‌.ಗೌಡರ, ವಿಜಯಕುಮಾರ ಬಡಿಗೇರ, ಎಸ್‌.ಎಸ್‌.ಮೇಟಿ, ಶಶಿಧರ ನೆರಬೆಂಚಿ ಮೊದಲಾದವರು ಆಗ್ರಹಿಸಿದ್ದಾರೆ.

ಪೊಲೀಸರಿಂದ ಜಾಗೃತಿ

Advertisement

ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆಟೋವೊಂದರಲ್ಲಿ ಮೈಕ್‌ ಮೂಲಕ ಸಾರ್ವಜನಿಕರು ಜಾಗೃತರಾಗಿರುವಂತೆ ಎಚ್ಚರಿಸುವ ಕೆಲಸವನ್ನು ದಿನ ಪೂರ್ತಿ ಮಾಡಿದರು. ಬೇಸಿಗೆಯಲ್ಲಿ ಮನೆಯ ಮಾಲೀಕರು ಮನೆಯ ಮಾಳಿಗೆ ಮೇಲೆ ಮಲಗುವಾಗ ತುಂಬಾ ಜಾಗ್ರತೆ ವಹಿಸಬೇಕು. ಮನೆಯೊಳಗೆ ಬೆಲೆ ಬಾಳುವ ವಸ್ತುಗಳು ಇದ್ದರೆ ಆದಷ್ಟು ಮನೆಯೊಳಗೆ ಮಲಗಬೇಕು. ಮನೆಗೆ ಬೀಗ ಹಾಕಿ ಪರ ಊರಿಗೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿ ಹೋಗಬೇಕು. ಆದಷ್ಟು ಬಡಾವಣೆಗಳ ಜನರು ಗಸ್ತು ತಿರುಗುವುದನ್ನು ಪಾಲಿಸಿ ಪೊಲೀಸರಿಗೆ ಸಹಕರಿಸಬೇಕು. ಸಂಶಯಾಸ್ಪದ ಅಪರಿಚಿತ ವ್ಯಕ್ತಿಗಳು ತಿರುಗಾಡುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ರಾತ್ರಿ ವೇಳೆ ಆದಷ್ಟು ಹೆಚ್ಚು ಜಾಗೃತೆಯಿಂದ ಇದ್ದು ಕಳ್ಳತನವಾಗುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next