Advertisement
ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಪೊಲೀಸರು ಮುಂಚೂಣಿಯಲ್ಲಿ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಇತ್ತೀಚೆಗೆ ಕೆಲ ಪೊಲೀಸರೆ ಕೋವಿಡ್ ಸೋಂಕುವಿಗೆ ಒಳಗಾಗಿದ್ದಾರೆ. ಕೆಲ ಮಂದಿ ಪೊಲೀಸರು ಕ್ವಾರಂಟೈನ್‌ನಲ್ಲಿದ್ದಾರೆ. ಇತ್ತ ಸೋಂಕು ನಿಯಂತ್ರಣ ಹಾಗೂ ಚೆಕ್‌ಪೋಸ್ಟ್ ಕಾವಲಿಗೆ ಸಿಬಂದಿ ಕೊರತೆ ಎದುರಾಗಿರುವುದು ಗೋಚರಿಸುತ್ತಿದೆ. ಇರುವ ಸುಮಾರು 900 ಮಂದಿ ಸಿಬಂದಿಗಳ ಬಲ ಬಳಸಿಕೊಂಡು ಇದುವರೆಗೆ ಎಲ್ಲವನ್ನು ನಿಭಾಯಿಸಲಾಗುತ್ತಿತ್ತು. ಈಗ ಡಿಎಆರ್ ಸಿಬಂದಿ ಹಾಗೂ ಗೃಹರಕ್ಷದಳದ ಸಿಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ಅವರ ಸೇವೆಯನ್ನು ಹೆಚ್ಚು ಬಳಸಿಕೊಳ್ಳುವಂತಹ ಸ್ಥಿತಿ ಬಂದಿದೆ. ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿಯೇ ಇಂತಹದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ.
ಪ್ರಸ್ತುತ ಜಿಲ್ಲೆಯ ಗಡಿ ಭಾಗದಲ್ಲಿರುವ ಶಿರೂರು, ಹೆಜಮಾಡಿ, ಸೋಮೇಶ್ವರ, ಡಾಲಿ, ಹೊಸಂಗಡಿ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಈ ಹಿಂದೆ ಜಿಲ್ಲೆಯೊಳಗೆ ಇದ್ದ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಅಗತ್ಯವಿರುವ ಕೆಲವೆಡೆ ಮಾತ್ರ ರಾತ್ರಿ ಸಂದರ್ಭ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿ ಕೊರತೆಯಿಲ್ಲ. ಪ್ರಸ್ತುತ ಸಶಸ್ತ್ರ ಮೀಸಲು ಪಡೆ ಹಾಗೂ ಗೃಹರಕ್ಷಕದಳ ಸಿಬಂದಿಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
– ಕುಮಾರಚಂದ್ರ, ಎಡಿಶನಲ್ ಎಸ್ಪಿ, ಉಡುಪಿ ಜಿಲ್ಲೆ.