Advertisement

ಮನೆಯಿಂದ ಮನೆಗೆ

07:00 AM Apr 08, 2018 | |

ಎಲ್ಲಿಯೂ ನೀ ನಿಲ್ಲದಿರು
ಮನೆಯನೆಂದೂ ಕಟ್ಟದಿರು 

ಎಂದ ಕುವೆಂಪುರವರ “ಅನಿಕೇತನ’ ತತ್ವವನ್ನು ಚಾಚೂತಪ್ಪದೆ ಪಾಲಿಸಿದವರು ನನ್ನಪ್ಪ! ಅವರ ತತ್ವನಿಷ್ಠೆ ಮತ್ತು ನೇರವಂತಿಕೆಗೆ ಸಿಕ್ಕ ಬಹುಮಾನ- ಪದೇ ಪದೇ ವರ್ಗಾವಣೆ. ಊರಿಂದ ಊರಿಗೆ ವರ್ಗವಾದಂತೆ, ಮನೆಯಿಂದ ಮನೆಗೆ ಎಡತಾಕಿದ್ದು – ಅವರ ನೇರ ನಿಷ್ಠುರ ಮಾತು. ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದ್ದ ಅವರಿಗೆ ದಾರಿದ್ರ್ಯ ಬೆನ್ನಿಗಂಟಿಕೊಂಡೇ ಇತ್ತು! ಮೊದಲ ದಿನ ಶಾಲೆಗೆ ಕಾರಿನಲ್ಲಿ ಹೋದವರು, ಮಾಧ್ಯಮಿಕ ಶಿಕ್ಷಣವನ್ನು ವಾರಾನ್ನ ಮಾಡಿಕೊಂಡು, ಪ್ರೌಢ ಶಿಕ್ಷಣವನ್ನು ಯಾರೋ ದಯಪಾಲಿಸಿದ ಉಚಿತ ವಾಸ್ತವ್ಯ ಮತ್ತು ಖಾರಪುಡಿ ಅನ್ನದೊಂದಿಗೆ ಮುಗಿಸಿದವರು. ತಮ್ಮ ಹಿರಿಯರ ಅಸಂಗತ ವ್ಯಾವಹಾರಿಕತೆ, ವಿಶ್ವಾಸದ್ರೋಹ, ಟೆನೆನ್ಸಿ ಕಾಯ್ದೆಯಿಂದ ಕರಗಿಹೋದ ಪಿತ್ರಾರ್ಜಿತ ಜಮೀನುಗಳಿಂದಾಗಿ ಅಕ್ಷರಶಃ ಬೀದಿಗೆ ಬಂದವರು- ಮತ್ತೆ ಮನೆಗೆ ಹೋಗಲಿಲ್ಲ. ಹೆಸರಿಗೆ ಖ್ಯಾತ ಮನೆತನ, ಬೇಡವೆಂದರೂ ಬಿಡದ ಮೇಲ್ಜಾತಿಯ ಭೂತ ಅವರ ವರ್ತಮಾನವನ್ನೇನೂ ಬದಲಿಸಿರಲಿಲ್ಲ. ಆದರೆ, ಬದಲಾಗಿದ್ದು ಅವರ ನೋಟ. ಅಗ್ರಹಾರದ ಮಡಿವಂತಿಕೆ, ಪೂಜೆ ಪುನಸ್ಕಾರ ಮೊದಲಾದ ವೈದಿಕತೆಯಿಂದ ಮಾರುದೂರ ಬಂದವರನ್ನು – ಅವರ ಮೇಲೆ ಸಿಟ್ಟು ತುಂಬಿದ್ದ ದೂರ್ವಾಸಪುರದ- ಜಾತ್ಯಸ್ಥರು ಒಳಗೊಳ್ಳಲಿಲ್ಲ! ಬಯಲಲ್ಲಿ ಬಂಧುಗಳಾದ ಜೋಪಡಿಯವರು ಹೊರಗೆ ಬಿಡಲಿಲ್ಲ! ಇಂತಹ ಮುಕ್ತತೆ ಮತ್ತು ಬಂಧನದ ಅನುಭವಿಯಾದ ಅವರಿಗೆ ನಡೆದಷ್ಟೂ ದಾರಿ ಸವೆಯುತ್ತಲೇ ಇರಲಿಲ್ಲ. ಎಲ್ಲಿಗೆ ಹೋದರೂ ಹಿಂಬಾಲಿಸುತ್ತಿದ್ದ ಅವರ ಸಂಸಾರ ಪರಿವಾರಿಗರಾದ ನಮಗೆ ಗತ್ಯಂತರವೂ ಇರಲಿಲ್ಲ!

Advertisement

ನಿರಂತರ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದ ಆ ಚಕ್ರಧಾರಿಯ ಮಗನಾಗಿ ನಾನು ಹುಟ್ಟಿ ಕಣ್ತೆರೆದಾಗ ಇದ್ದದ್ದು ಕಂಪ್ಲಿಯಲ್ಲಿ. ಎರಡು ಕೋಣೆಯಷ್ಟೇ ಇದ್ದ ಆ ಪುಟ್ಟ ಮನೆಯಲ್ಲೇ ನಾನು ಬೋರಲಾದುದು, ಅಂಬೆಗಾಲಿರಿಸಿ ಹೊಸ್ತಿಲು ದಾಟಿದ್ದು. ಆ “ದಾಟು’ವಿಕೆ ಮತ್ತು ಅಪ್ಪನ ಸೈಕಲ…ನ ಮಧ್ಯ ಬಾರ್‌ ಮೇಲಿದ್ದ ಪುಟ್ಟ ಸೀಟು ನನಗೆ ಅಲೆದಾಟವನ್ನು ಪರಿಚಯಿಸಿತು. ಅಲೆದಾಟವೆಂದರೆ ಅದು ಅಲೆಯ ಆಟವೇ. ಸುಶಿಕ್ಷಿತರ ಬೀದಿಯಿಂದ ಬಿದಿರು ಹೆಣಿಯುವವರ ಕೇರಿಗೆ, ಬೀಡಿ ಕಟ್ಟುವವರ ಹಾಡಿಗೆ… ಅಲೆಯಲೆಯಲೆ !

ಕಂಪ್ಲಿ ಅಪ್ಪನ ಹುಟ್ಟೂರೂ ಹೌದು. ಅವರ ಬದುಕಿನ ಮೇರು ಮತ್ತು ಇಳಿತ ದಾಖಲಿಸಿಕೊಂಡ ಊರು ಅದು. ಬಾಲ್ಯ ಕಂಡ ಮಹಡಿ ಮನೆ, ಆದರಿಸಿದ ರಾಮನ ಗುಡಿಯ ಪ್ರಾಂಗಣದ ಜನಪದ ಎಲ್ಲವೂ ತಮ್ಮ ತಂದೆಯ ಕಂಗಾಲು ದಿನಮಾನಗಳಲ್ಲಿ ಕಾಣೆಯಾಗಿದ್ದು ಅವರಲ್ಲಿ ಕಾಠಿಣ್ಯ ಮೂಡಿಸಿರಬೇಕು. ಹಾಗೆಂದೇ ಸಕಲೆಂಟು ಜಾತಿಗಳಲ್ಲಿ ಹೊಕ್ಕಾಡುವ ಆ ಅನಿರ್ಬಂಧಿತ ಅವಕಾಶಕ್ಕೆ ಅಡ್ಡಿ ಎಂದು ಅವರು ಆ ಪ್ರಾಂಗಣದ ಸಮೀಪ ಮನೆ ಮಾಡಲಿಲ್ಲ! ನಾನು ಮೊದಲ ತೊದಲ ನುಡಿ ನುಡಿದದ್ದು ಭಾರತ್‌ ಟಾಕೀಸ್‌ ಹತ್ತಿರದ ಪುಟ್ಟ ಮನೆಯಲ್ಲಿ.

ಸಂಜೆಯಾಗುತ್ತಿದ್ದಂತೆ ಪಿಬಿಎಸ್‌ ಕಂಠದಲ್ಲಿ ಶರಣು ಶರಣಯ್ಯ ಶರಣು ಬೆನಕ  ಹಾಡು ಮೊಳಗಿ, ಸಿನೆಮಾದ ಸಂಭಾಷಣೆ ಮತ್ತು ಸದ್ದುಗಳು ಮನೆ ತುಂಬುತ್ತಿದ್ದ ಆ ಓಣಿಯಂತಹ ಮನೆ ರೂಪಿಸಿದ್ದು ನನ್ನ ಮನೋಲೋಕ. ಆ ಲೋಕದಲ್ಲಿ – ದೇವದಾಸನಾಗಿದ್ದ ಅಕ್ಕಿನೇನಿಯವರ ಜೊತೆ ಪ್ರೇಮಾಭಿಷೇಕ ನನಗೆ. ಎನ್‌ಟಿಆರ್‌ ಕೃಷ್ಣನಾದರೆ ನಾನು ಸುಧಾಮ. ಮಾಯಾ ಬಜಾರಿನ ಘಟೋತ್ಕಚ ನನಗೆ ವಿಸ್ಮಯ. 

ಆಗೆಲ್ಲಾ ನಾನು ಮಾಯಾವಿಯಾಗಬೇಕೆಂಬುದು ಕನಸಷ್ಟೇ ಅಲ್ಲ, ಆದರ್ಶ! ನಮ್ಮ ಬೆಕ್ಕಿನ ಬಿಡಾರ ಮತ್ತೆ ಬದಲಾದುದು- ಕಾಯಿಪಲ್ಲೆ ಮಾರ್ಕೆಟ್ಟಿನ ಬದಿಗೆ. ಆಗ ನನ್ನ ಪದಕೋಶ ಹಿಗ್ಗಿದ್ದು – ಸಿವುಡು, ಕವಳಿಗೆ,  ಪದಗಳೊಂದಿಗೆ! ಕಂಪ್ಲಿಯಿಂದ ಮೆಟ್ರಿಗೆ, ಮೆಟ್ರಿಯಿಂದ ಮರಿಯಮ್ಮನ ಹಳ್ಳಿಗೆ ಬದಲಾಗುತ್ತಲೇ ಹೋದ ಬಿಡಾರದಿಂದಾಗಿ ನನ್ನ ಬಾಲ್ಯದ ಬದುಕಿಗೆ ಗ್ರಾಮೀಣತೆಯ ಸೊಗಡು ಸೇರಿಕೊಂಡಿತು. ತುಂಗಭದ್ರಾ ಡ್ಯಾಮ್‌ ಹತ್ತಿರದಲ್ಲೇ ಇದ್ದರೂ ಕುಡಿಯುವ ನೀರಿಗೆ ತತ್ವಾರವಿದ್ದ ಆ ಬಯಲು ಸೀಮೆಯ ಬಿಸಿಲಪುರಗಳಲ್ಲಿ ನಾನು ಆಡಿ ಬೆಳೆದದ್ದು ಜಾಲಿಯ ನೆರಳಲ್ಲಿ, ಬತ್ತಿದ ಕಾಲುವೆಗಳ ಮರಳಲ್ಲಿ.

Advertisement

ಕರಡಿ ಕುಣಿತ ಬಯಲಾಟದ ಹೆಜ್ಜೆ ಮಟ್ಟು ಮಣಿತಗಳು ನನ್ನ ಸಂಜೆಗಳನ್ನು , ರಾತ್ರಿಗಳನ್ನು ಬಣ್ಣಬಣ್ಣವಾಗಿಸುತ್ತಿದ್ದವು. ಗ್ರಾಮೀಣ ಭಾಗದ ವಾರ್ಷಿಕ ಸಂಭ್ರಮ – ದೊಡ್ಡಾಟ ಇಲ್ಲವೇ ನಾಟಕ. ನಾಟಕವೊಂದನ್ನು ಅಭಿನಯದ ಪರಿಚಯವೇ ಇಲ್ಲದ ಸಹಜ ಕೃಷಿಕ ಗ್ರಾಮೀಣರಿಗೆ ಕಲಿಸುವುದು ಒಂದು ಹಾಸ್ಯಮಯ ದುಸ್ಸಾಹಸ! ಅಂತಹ ನಗೆಭರಿತ ರಿಹರ್ಸಲ…, ನಾಟಕದ ಟೆಂಟ… ಕಟ್ಟಲು ನಡೆಯುವ ಕಾಮಗಾರಿ ಎಲ್ಲದರ ಪ್ರಥಮ ಸಾಲಿನ ಪ್ರೇಕ್ಷಕ ನಾನು. ನಾಟಕದ ಸಂಭಾಷಣೆ, ರಂಗ ಗೀತೆಗಳ ಮಟ್ಟು ಕಂಠಪಾಠವಾಗಿದ್ದ ನನಗೆ ಬೆರಗು – ಆ ಬಣ್ಣದ ವೇಷಗಳು ಮತ್ತು ಸುಭದ್ರಮ್ಮ ಮನ್ಸೂರರಂತಹ ಗಣ್ಯ ಗಾಯಕಿಯರ ಕಂಠ. ನಾಟಕದ ಸ್ತ್ರೀ ಪಾತ್ರಕ್ಕೆ ಮರಿಯಮ್ಮನ ಹಳ್ಳಿ ಅಥವಾ ಕೂಡ್ಲಿಗಿಯಿಂದ ವೃತ್ತಿ ರಂಗಭೂಮಿಯ ನಟಿಯರನ್ನು ಕರೆಸುವುದು ಆ ದಿನಗಳ ವಾಡಿಕೆಯಾಗಿತ್ತು. ಹಾಗೆ ಬಂದು ಗೌಡರ/ಚೇರ್ಮನ್ನರ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದ ಆ ಬೆಡಗಿಯರ ಹಾವಭಾವ ನನ್ನಂತಹವರಿಗೆ ಬೆರಗು, ಗಂಡಸರಿಗೆ ಮೀಸೆ ಅಡಿಯ ನಗು, ಊರ ಗರತಿಯರಿಗೆ ಮಾತ್ರ ಕಸಿವಿಸಿ!

ಕಸಿವಿಸಿಯ ಕಾರಣವನ್ನು ಮತ್ತು ಮೀಸೆ ಅಡಿಯ ನಗೆಯನ್ನು ನಾನು ಅರಿಯುವಂತೆ ಮಾಡಿದ್ದು ಮರಿಯಮ್ಮನಹಳ್ಳಿಯಲ್ಲಿ ಸಿಕ್ಕ ಆ ಒಡನಾಟದ ಅವಕಾಶ. ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನರಿಗೆ ಪರಿಚಯಿಸಲು ಪ್ರಚಾರದ ಜವಾಬ್ದಾರಿ ಹೊತ್ತಿದ್ದ ನನ್ನ ಅಪ್ಪನಿಗೆ ಆ ಕಲಾವಿದರ ಪರಿಚಯವಿತ್ತು. ನಾಗರತ್ನಮ್ಮರಂತಹ ಧೀಮಂತ ಅಭಿನೇತ್ರಿಯರಿಂದ ಹಾಡಬಲ್ಲ ಸುಶ್ರಾವ್ಯ ಕಂಠದ ಕಲಾವಿದರವರೆಗೆ ನಾನು ಕಂಡವರ ಬದುಕು ಬಣ್ಣ ಮತ್ತು ಬವಣೆಗಳು ನನಗೆ ಎಲ್ಲಾ ಅರ್ಥಮಾಡಿಸಿದ್ದವು. 

ಪಕ್ಕಾ ಗ್ರಾಮೀಣನಾಗಿದ್ದ ನನಗೆ ನಗರದಂತೆ ಬೆರಗುಗೊಳಿಸಿದ್ದು- ಹರಪನಹಳ್ಳಿ! ಆ ಮೊದಲು ನಾನು ನೋಡಿದ್ದ ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆಯಂತಲ್ಲದ ಅರೆಗ್ರಾಮ ಅರೆನಗರ ಈ ಹರಪನಹಳ್ಳಿ. ಆ ವಯಸ್ಸಿನ ಕಣ್ಣಿಗೆ – ವಿಶಾಲ ಎನ್ನಿಸುವ ಆಟದ ಬಯಲು, ದೊಡ್ಡ ಪೇಟೆಯ ಬೀದಿ, ಇಂಗ್ಲಿಶ್‌ ಸಿನೆಮಾ ತೋರಿಸುವ ವೀಡಿಯೋ ಥಿಯೇಟರ್‌. ವಿಸ್ಮಯಗಳು ನನಗೆ. ಆವರೆಗೆ ಮರಕೋತಿ, ಚಿನ್ನಿದಾಂಡು, ಗೋಲಿ, ಬುಗುರಿ, ಬಳೆಚುಕ್ಕ ಆಟದಲ್ಲಿ ಪಳಗಿದ್ದ ನನಗೆ ಈ ಕ್ರಿಕೆಟ…, ಟೆನ್ನಿಸ್‌ ಮತ್ತು ಬ್ಯಾಡ್ಮಿಂಟನ್‌ಗಳು ವಿದೇಶೀ ಆಟಗಳು. ಅವೆಲ್ಲಕ್ಕಿಂತ ಅಚ್ಚರಿಯೆಂದರೆ, ನಾನು ಬ್ರಾಹ್ಮಣ್ಯವನ್ನು ಹತ್ತಿರದಿಂದ ನೋಡಿದ್ದು. ಕಚ್ಚೆ ಮುಗುಟ ಜನಿವಾರ ಪನಿವಾರ ಶಂಖ-ಜಾಗಟೆಗಳೆಲ್ಲಾ ನನಗಾಗ ಅನ್ಯ ದೇಶೀಯವೇ. ಶಾಸ್ತ್ರೋಕ್ತ ಜಾಗಟೆ ಬಾರಿಸುವುದ ಕಲಿತ ನಾನು ಚರ್ಮದ ಹಲಗೆಯ ಗಿಣ್ಣು ಗೀಟುಗಳನ್ನೂ ಅದರ ಮಟ್ಟುಗಳನ್ನು ಮರೆಯದಂತೆ ನುಡಿಸುತ್ತಿದ್ದೆ. ಆಚಾರ್ಯರಿಗೆ, ಜೋಯಿಸರಿಗೆ, ಭಟ್ಟರಿಗೆ ಬೇರೆಯದೇ ಕೇರಿ ಬೀದಿಗಳಿದ್ದ ಆ ಊರ ಮನೆಯಿಂದ ಮತ್ತೆ ನಮ್ಮ ಬಿಡಾರ ಬದಲಾದ್ದು ಎಮ್ಮೆ-ದನ ಕಟ್ಟಿದ ಸಜೀವ ಗೋದಲಿಯ ಹಳ್ಳಿ ಮನೆಗೆ.

ಸಂಡೂರು ಎಂಬುದು ನನ್ನ ಬಾಲ್ಯದ ಕಾಶ್ಮೀರ. ಸುತ್ತ ಹಸಿರು ಅಚ್ಛಾದಿತ ಪರಿಸರ, ಎತ್ತರದ ಬೆಟ್ಟಗಳು, ಮ್ಯಾಂಗನೀಸ್‌ ಅದಿರು ಹೊತ್ತ ಕೆಂಪು ಹುಡಿ ಮಣ್ಣ ದಾರಿಗಳು, ಜುಳುಜುಳು ಹರಿವ ನಾರಿಹಳ್ಳ. ನವಿರು ನೆನಪು ಸಾವಿರ. ಬದುಕನ್ನು ಹೊಲಗಳಲ್ಲಿ ಹೊಕ್ಕಿ ಬಿಸಿಲ ಬಯಲಲ್ಲಿ ಹರಗಿಯೇ ಅನುಭವಿಸಬೇಕೆಂಬ ಅಪ್ಪನ ತಿಳಿವು ನನಗೆ ಅನುಭವವನ್ನು ತಿಳುವಳಿಕೆಯನ್ನು ಕಟ್ಟಿಕೊಟ್ಟ ದಿನಗಳವು. ನವಮಾಸ ತುಂಬುವುದರೊಳಗೆ ಬದಲಾಗುವ ಬಾಡಿಗೆ ಬಿಡಾರಗಳಿಂದಾಗಿ ಹೊಕ್ಕಾಡಿ ಬೆಳೆದದ್ದು- ನಾಲ್ಕು ವರ್ಷಗಳಲ್ಲಿ ಐದಾರು ಮನೆಗಳಲ್ಲಿ!

ಮನೆಯಿಂದ ಮನೆಗೆ ಹೋಗುವುದೆಂದರೆ- ಕೆಎಸ್‌ನ ಹೇಳಿದ ಹಾಗೆ- ಮನೆಯ ಸಾಮಾನುಗಳ, ತಳವಿರದ ಗೋಡೆಗಳ ಹೊತ್ತು ಸಾಗಿಸುವುದು. ಅದಕ್ಕೆ ಕತ್ತಲೆ ಬೇಕು. ಆದರೆ, ನನಗೋ ಮನೆಯಿಂದ ಮನೆಗೆ ಹೋಗುವುದೆಂದರೆ; ಹೊಸ ವಾಸ್ತು ಹೊಸ ವಾಸ್ತವ. ಹೊಸ ಜಾಗ ಹೊಸ ಜನಪದ. ನಿತ್ಯ ಹೊಸತೆನ್ನಿಸುವ ಪರಿಸರ, ಪರಿಚಯವಾಗುವವರೆಗೆ ಪರಕೀಯತೆ ಅನುಭವಿಸುವ ಅನನ್ಯ ಸಾಧ್ಯತೆ. ಊರೂರು ತಿರುಗಿ ಈಗ ಒಂದೆಡೆ ನೆಲೆ ನಿಂತರೂ ನಾನು ಸದಾ ಅರಿಕೆ ಸಲ್ಲಿಸುವುದು- 
 ನನ್ನ ಹೆಳವನ ಮಾಡದಿರಯ್ಯ ತಂದೆ, ಹೊಸ ಊರ ಹೊಸ ಮನೆಯ ಹೋಗದಿರುವಂತೆ!

ಆನಂದ ಋಗ್ವೇದಿ

Advertisement

Udayavani is now on Telegram. Click here to join our channel and stay updated with the latest news.

Next