ಶಿರಸಿ: ನಾಲ್ಕು ವರ್ಷಗಳಿಂದ ಹಂತ ಹಂತವಾಗಿ ನಿರ್ಮಿಸಲಾಗುತ್ತಿದ್ದ ಮನೆಯ ಅಡಿಪಾಯವನ್ನು ಮಾಲಿಕರಿಗೆ ಸೂಚನೆಯನ್ನೂ ನೀಡದೆ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ ಘಟನೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಇದರಿಂದ ಲಕ್ಷಾಂತರ ರೂ. ಹಾನಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಬನವಾಸಿ ಅರಣ್ಯ ವ್ಯಾಪ್ತಿಯ ಇಸಳೂರು ಗ್ರಾಪಂನ ಹೊಡಸಲಮನೆ ಗ್ರಾಮದ ನಿವಾಸಿಗಳಾದ ಹನುಮಂತ ಭೋವಿ ವಡ್ಡರ ಹಾಗೂ ಲತಾ ರಾಮಚಂದ್ರ ನಾಯ್ಕ ಇವರಿಗೆ ಸೇರಿದ ಮನೆ ಹಾಗೂ ಅಡಿಪಾಯ ತೆರವುಗೊಳಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡು ತಾಯಿ ಮತ್ತು ಮೂವರು ಮಕ್ಕಳೊಂದಿಗೆ ಗುಡಿಸಲಲ್ಲಿ ವಾಸವಾಗಿರುವ ಹನುಮಂತ ಭೋವಿ ವಡ್ಡರ್ ಕಳೆದ ನಾಲ್ಕು ವರ್ಷಗಳಿಂದ ಸತತ ಶ್ರಮವಹಿಸಿ ಸ.ನಂ. 42ರಲ್ಲಿ ಇಟ್ಟಿಗೆ ಮತ್ತು ಕಲ್ಲಿನಿಂದ ಮನೆಯ ರೂಪ ಕೊಟ್ಟಿದ್ದರು. ಇನ್ನೇನು ಹೆಂಚು ಹಾಕಿ ಗೃಹಪ್ರವೇಶ ಮಾಡಬೇಕೆಂಬ ವೇಳೆಯಲ್ಲಿ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ಅದೇ ಗ್ರಾಮದ ಲತಾ ರಾಮಚಂದ್ರ ನಾಯ್ಕ ಅವರಿಗೆ ಆಶ್ರಯಮನೆ ಯೋಜನೆಯಡಿ ಮಂಜೂರಾಗಿದ್ದ ಮನೆಯ ಅಡಿಪಾಯ ಕಾರ್ಯ ಮುಗಿದು ಗೋಡೆ ಕಟ್ಟುವ ಹಂತದಲ್ಲಿತ್ತು. ಅದನ್ನೂ ಸಹ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಮನೆ ಕಟ್ಟುವದನ್ನು ಅರಣ್ಯ ಅಧಿಕಾರಿಗಳು ನೋಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಇಲ್ಲಿ ಮನೆ ಕಟ್ಟಬಾರದೆಂಬ ಸೂಚನೆಯನ್ನೂ ನೀಡಿಲ್ಲ. ಕಾನೂನು ಕ್ರಮ ಜರುಗಿಸುತ್ತೇವೆಂದು ಮೊದಲೆ ಹೇಳಿದ್ದರೆ ಮನೆ ಕಟ್ಟುವ ಧೈರ್ಯ ಮಾಡುತ್ತಿರಲಿಲ್ಲ. ಇನ್ನೇನು ಮಕ್ಕಳಿಗೊಂದು ಸೂರು ನಿರ್ಮಿಸಿಯಾಯ್ತು ಎಂದು ಸಂತಸಪಡುವ ವೇಳೆಗೆ ಜೀವಮಾನದ ಕನಸಿಗೆ ತಣ್ಣೀರೆರಚಿದ್ದಾರೆ. ವರ್ಷದೀಚೆಗೆ ಹೆಂಡತಿ ತೀರಿಕೊಂಡಿದ್ದಾಳೆ. ತಾಯಿಗೆ ವಯಸ್ಸಾಗಿದೆ. ಮೂವರು ಮಕ್ಕಳನ್ನು ಸಾಕುತ್ತಾ, ಕೂಲಿ ಕೆಲಸ ಮಾಡಿ ಮೂರು ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿ ಮನೆ ಕಟ್ಟಲು ವಿನಿಯೋಗಿಸಿದ್ದೆ. ಈಗ ಸಂಪೂರ್ಣ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜೀವನದ ಆಸಯೆ ಬರಡಾಗಿ ಆತ್ಮಹತ್ಯೆ ಮಾಡಿಕೊಳ್ಳುವದೊಂದೆ ದಾರಿಯೆ ಎಬಂತಾಗಿದೆ. ತನಗಾದ ನಷ್ಟ ತುಂಬಿಕೊಡುವವರು ಯಾರು ಎಂದು ಹನುಮಂತಪ್ಪ ರೋದಿಸುತ್ತಾರೆ.
ಸ್ಟ್ರಿಪ್ ಭೂಮಿಯಲ್ಲಿ..!: ಇಸಳೂರು ಗ್ರಾಪಂ ವ್ಯಾಪ್ತಿಯ ಹೊಡಸಲಮನೆ ಗ್ರಾಮಕ್ಕೆ ಒಳಪಟ್ಟ ಸ್ಟ್ರಿಪ್ ಭೂಮಿಯಲ್ಲಿ ಕಟ್ಟಲಾದ ಮನೆ ಇದಾಗಿದೆ. ರೈತರು ಸಾಗುವಳಿ ಮಾಡುತ್ತಿರುವ ಕೃಷಿ ಕ್ಷೇತ್ರಕ್ಕೆ ಪ್ರಾಣಿಗಳು ನುಗ್ಗಬಾರದೆಂಬ ದೃಷ್ಟಿಯಲ್ಲಿ ಬ್ರಿಟಿಷ್ ಆಡಳಿತದಲ್ಲಿಯೆ ಈ ಸ್ಟ್ರಿಪ್ ಭೂಮಿ ಬಿಡಲಾಗಿದೆ. ಈ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಇಲ್ಲಿ ಕಟ್ಟಲಾಗುತ್ತಿದ್ದ ಮನೆ ಹಾಗೂ ಅಡಿಪಾಯವನ್ನು ಅಧಿಕಾರಿಗಳು ಧ್ವಂಸಗೊಳಿಸಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದ್ದಾರೆಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಅಧಿಕಾರ ದರ್ಪ ತೋರಿಸ್ತಾರೆ..!: ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ತಾಪಂ ಉಪಾಧ್ಯಕ್ಷ ಚಂದ್ರ ಎಸಳೆ ಅರಣ್ಯ ಇಲಾಖೆ ಅಧಿಕಾರಿಗಳ ತೆರವು ಕಾರ್ಯ ಸಂಬಂಧ ಪ್ರತಿಕ್ರಿಯಿಸಿ, ಬಡವರ ಜೀವನದಲ್ಲಿ ಚೆಲ್ಲಾಟ ಆಡುತ್ತಿರುವ ಅರಣ್ಯ ಅಧಿಕಾರಿಗಳು ನಿಶ್ಯಕ್ತರ ಮೇಲೆ ದರ್ಪ ತೋರಿಸುತ್ತಿದ್ದಾರೆ. ಇದು ಸರಿಯಲ್ಲ. ಮನೆ ಕಟ್ಟಬೇಡಿ ಎಂದು ಮೊದಲೆ ಹೇಳಬೇಕಿತ್ತು ಎಂದಿದ್ದಾರೆ.