Advertisement

ಬಾದಾಮಿಯಲ್ಲಿ ಸಿದ್ದುಗೆ ಮನೆ

10:41 AM May 18, 2018 | |

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾದಾಮಿಯ ಶಾಸಕರು. ಕ್ಷೇತ್ರದ ಸಾರ್ವಜನಿಕರ ಸಂಪರ್ಕಕ್ಕಾಗಿ ಬಾದಾಮಿಯಲ್ಲೇ ಹೊಸದಾಗಿ ಮನೆಯೊಂದನ್ನು ಹುಡುಕಲು ತಮ್ಮ ಆಪ್ತರಿಗೆ ಸೂಚನೆ ಕೊಟ್ಟಿದ್ದಾರೆ. ಸದ್ಯ ರಾಜ್ಯ ರಾಜಕೀಯ ವಿದ್ಯಮಾನ ಪೂರ್ಣಗೊಂಡ ಬಳಿಕ ಬಾದಾಮಿಗೆ ಆಗಮಿಸಿ ಮತದಾರರಿಗೆ ಕೃತಜ್ಞತೆ ಸಭೆಯೊಂದನ್ನು ಮಾಡುವ ಜತೆಗೆ ಸಾಧ್ಯವಾದರೆ ಅದೇ ವೇಳೆ ಹೊಸ ಮನೆಯಲ್ಲಿ ಪೂಜೆ ಕೂಡ ನಡೆಸಲಿದ್ದಾರೆ.

Advertisement

ಗುರುವಾರವಷ್ಟೇ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಹಾಗೂ ಗುಳೇದಗುಡ್ಡ ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರಗೆ ದೂರವಾಣಿ ಮೂಲಕ ಮಾತನಾಡಿ, ಬಾದಾಮಿಯಲ್ಲಿ ಮನೆ ನೋಡು. 

ರಾಜಕೀಯ ಬೆಳವಣಿಗೆ ಮುಗಿದ ತಕ್ಷಣ ಬಾದಾಮಿಗೆ ಬರುತ್ತೇನೆ. ಹೆಡ್‌ಕ್ವಾರ್ಟರ್‌ (ಬಾದಾಮಿ ಕೇಂದ್ರ ಸ್ಥಾನ)ದಲ್ಲಿ ಒಂದು ಸಭೆ ಏರ್ಪಡಿಸಿ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆ ನಡೆಸೋಣ. ಜನರ ಸಂಪರ್ಕಕ್ಕೆ ಅನುಕೂಲವಾಗಲು ಸುಸಜ್ಜಿತ ಮನೆಯೊಂದನ್ನು ಬಾಡಿಗೆಗೆ ನೋಡು ಎಂದು
ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ತಿಂಗಳಲ್ಲಿ ನಾಲ್ಕೈದು ದಿನ: ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದು, ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆದ್ದಿದ್ದಾರೆ. ಸದ್ಯ ಅವರು ಜಿಲ್ಲೆಯ ಬಾದಾಮಿ ಶಾಸಕರು. ಇನ್ಮುಂದೆ ಪ್ರತಿಯೊಂದು ದೊಡ್ಡ, ಸಣ್ಣ ಕಾರ್ಯಕ್ರಮಕ್ಕೂ ಶಿಷ್ಟಾಚಾರದ ಪ್ರಕಾರ ಅವರು ಹೆಸರು ನಿತ್ಯವೂ ಇರಲಿವೆ. ಬಾದಾಮಿ ಕ್ಷೇತ್ರ ಹಾಗೂ ಜಿಲ್ಲೆಯ ಮಹತ್ವದ ಸಭೆ, ಸಮಾರಂಭಗಳಿಗೆ ಅವರು ಆಗಮಿಸಲಿದ್ದಾರೆ ಎನ್ನಲಾಗಿದೆ.

ತಿಂಗಳಲ್ಲಿ ನಾಲ್ಕು ದಿನ ಬಾದಾಮಿಯಲ್ಲೇ ವಾಸ್ತವ್ಯ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಒಂದು ಮನೆ ನೋಡಲು ಹೇಳಿದ್ದಾರೆ. ಸರ್ಕಾರದ ವತಿಯಿಂದ ತಾಪಂ ಕಚೇರಿ ಕಟ್ಟಡದಲ್ಲಿ ಒಂದು ಕಟ್ಟಡ ನೀಡಲಿದ್ದು, ಅದರ ಹೊರತಾಗಿ ಮನೆ ಇದ್ದರೆ ಎಲ್ಲ ಮುಖಂಡರು, ಕಾರ್ಯಕರ್ತರು, ಜನರು ಭೇಟಿ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಪ್ರಮಾಣ ಪತ್ರವೂ ಪಡೆದಿಲ್ಲ: ವಿಧಾನಸಭೆ ಚುನಾವಣೆ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಚುನಾವಣಾಧಿಕಾರಿಯಿಂದ ಅಧಿಕೃತವಾಗಿ ನೀಡುವ ಪ್ರಮಾಣ ಪತ್ರ ಪಡೆದಿಲ್ಲ. ಗೆದ್ದ ಅಭ್ಯರ್ಥಿ ಇಲ್ಲವೇ ಅವರ ಮತ ಎಣಿಕೆ ಏಜೆಂಟರು ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ. ಹೀಗಾಗಿ ಬಾದಾಮಿ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಮತ್ತು ಹೊಳೆಬಸು ಶೆಟ್ಟರ ಈ ಪ್ರಮಾಣ ಪತ್ರ ಪಡೆದಿದ್ದಾರೆ.

ಬಾದಾಮಿಯಲ್ಲಿ ಮನೆ ಹಾಗೂ ಅದಕ್ಕೆ ಬೇಕಾಗುವ ಸಿಬ್ಬಂದಿ ನೋಡಲು ಸಿದ್ದರಾಮಯ್ಯ ಹೇಳಿದ್ದಾರೆ. ತಿಂಗಳಲ್ಲಿ 3ರಿಂದ 4 ದಿನ ಬಾದಾಮಿಯಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಅವರಿಗೆ ಸೂಕ್ತವಾಗಲಿರುವ ಮನೆ ಹುಡುಕುತ್ತಿದ್ದೇವೆ.
ಅಡುಗೆಯವರು, ಕಂಪ್ಯೂಟರ್‌ ಆಪರೇಟರ್‌ ಮುಂತಾದ ಸಿಬ್ಬಂದಿಯನ್ನೂ ನೋಡುತ್ತಿದ್ದೇವೆ.  ಹೊಳೆಬಸು ಶೆಟ್ಟರ, ಕಾಂಗ್ರೆಸ್‌ ಮುಖಂಡ 

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next