ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಲು ಜಮೀನು ಮಂಜೂರು ಮಾಡುವ ಅಭಿಯಾನ ಜಿಲ್ಲೆಯಾದ್ಯಂತಕೈಗೊಳ್ಳಲಾಗಿದ್ದು, ತ್ವರಿತಗತಿಯಲ್ಲಿ ಜಮೀನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಆರ್. ಲತಾ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಪ್ರತಿಯೊಬ್ಬ ನಿವೇಶನ ರಹಿತನಾಗರಿಕರಿಗೆ ಸೂರು ಕಲ್ಪಿಸಿಕೊಡುವುದೇ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ. ಸುಧಾಕರ್ ಅವರ ಮಹತ್ವಾಕಾಂಕ್ಷೆಯಾಗಿದೆ.
ಒಂದೂವರೆ ತಿಂಗಳಿಂದ ಅಭಿಯಾನ: ಕಳೆದ ಬಾರಿ ನಡೆದ ಕೆಡಿಪಿ ಸಭೆಯಲ್ಲೂ ಸಚಿವರು ಆದ್ಯತೆ ಮೇರೆಗೆ ಜಿಲ್ಲೆಯ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿರುತ್ತಾರೆ. ಇದಕ್ಕೆ ಹೆಚ್ಚಿನ ಒತ್ತು ನೀಡಿರುವಜಿಲ್ಲಾಡಳಿತ ನಿವೇಶನ ರಹಿತರಿಗೆ ನಿವೇಶನನೀಡಲು ಜಮೀನು ಮಂಜೂರು ಮಾಡುವ ಅಭಿಯಾನ ಕಳೆದ ಒಂದೂವರೆ ತಿಂಗಳಿಂದ ಹಮ್ಮಿಕೊಂಡಿದೆ ಎಂದರು.
21,000 ನಿವೇಶನ ರಹಿತರು: ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಈಗಾಗಲೇ ಪ್ರತಿ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ಗುರುತಿಸಿದ್ದು, ನಿವೇಶನ ರಹಿತರ ಪಟ್ಟಿಯನ್ನು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಡೆದಿರುತ್ತಾರೆ. ಗ್ರಾಮೀಣಭಾಗದಲ್ಲಿ ಒಟ್ಟಾರೆ ಸುಮಾರು 21,000 ನಿವೇಶನ ರಹಿತರಿರುವುದು ಕಂಡುಬಂದಿದೆ. ಈ ಎಲ್ಲಾ ಅರ್ಹ ನಿವೇಶನ ರಹಿತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಲು ಜಮೀನು ಮಂಜೂರು ಮಾಡುವ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದರು.
11,766 ಅರ್ಹರಿಗೆ ನಿವೇಶನ ಹಂಚಿಕೆ: ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ನಂದಿಹೋಬಳಿಯ ವಿವಿಧ ಗ್ರಾಮಗಳಲ್ಲಿ 41.25 ಎಕರೆ, ಕಸಬಾ ಹೋಬಳಿ 63.12 ಎಕರೆ, ಮಂಡಿಕಲ್ಲು ಹೋಬಳಿ 46.39 ಎಕರೆ, ಗೌರಿಬಿದನೂರುತಾಲೂಕಿನ ಮಂಚೇನಹಳ್ಳಿ ಹೋಬಳಿ 82.13ಎಕರೆ ಸೇರಿ ಒಟ್ಟಾರೆ234.09 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಒಟ್ಟಾರೆ11,766 ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಉಪವಿಭಾಗಾಧಿಕಾರಿ ರಘುನಂದನ್, ಜಿಪಂಉಪಕಾರ್ಯದರ್ಶಿ ನೋಮೇಶ್ ಸೇರಿದಂತೆ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ನಿವೇಶನ ನೀಡಲು ಆದ್ಯತೆ ಮೇರೆಗೆ ಕ್ರಮ : ಜಮೀನು ಮಂಜೂರು ಅಭಿಯಾನವನ್ನು ಇನ್ನುಳಿದ ಎಲ್ಲಾ ತಾಲೂಕುಗಳಲ್ಲೂ ಹಮ್ಮಿಕೊಂಡಿದ್ದು, ಶಿಡ್ಲಘಟ್ಟದಲ್ಲಿ 37 ಎಕರೆ, ಬಾಗೇಪಲ್ಲಿಯಲ್ಲಿ12 ಎಕರೆ, ಗುಡಿಬಂಡೆಯಲ್ಲಿ 9.20 ಎಕರೆ, ಗೌರಿಬಿದನೂರಿನಲ್ಲಿ 21.30 ಎಕರೆ, ಚಿಂತಾಮಣಿಯಲ್ಲಿ 10 ಎಕರೆ ಜಮೀನು ಗುರುತಿಸಿ ಒಟ್ಟಾರೆ 4525 ನಿವೇಶನಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಗ್ರಾಮೀಣಪ್ರದೇಶದಲ್ಲಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಡಾವಣೆಯ ನಕ್ಷೆ ತಯಾರಿಸಲು ಸೂಚನೆ : ಈಗಾಗಲೇ ಮಂಜೂರಾಗಿರುವ ಎಲ್ಲಾ ಜಮೀನಿನಲ್ಲಿ ಮುಂದಿನ ಒಂದು ವಾರದಲ್ಲಿ ಬಡಾವಣೆಯ ನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಸೂಚಿಸಿದರು. ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿಭಾಯಿಸ ಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.