Advertisement

ಗೃಹ ಮತ್ತು ವಾಹನ ಸಾಲ ಮಂಜೂರಾತಿಗೆ ಇನ್ನು 59 ನಿಮಿಷ ಸಾಕು!

09:20 AM Aug 22, 2019 | Hari Prasad |

ನವದೆಹಲಿ: ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಗ್ರಾಹಕರಿಗೆ ಅಗತ್ಯವಿರುವ ಸಂದರ್ಭಕ್ಕೆ ತುರ್ತು ಸಾಲ ಸೌಲಭ್ಯವನ್ನು ಬ್ಯಾಂಕುಗಳಲ್ಲಿ ಪಡೆಯುವುದು ಕಷ್ಟಸಾಧ್ಯ ಎನ್ನುವುದು ಹಲವಾರು ಗ್ರಾಹಕರ ಸಾಮಾನ್ಯ ನಂಬಿಕೆ.

Advertisement

ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳೂ ಸಹ ತಮ್ಮ ಸೇವಾನೀತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿವೆ. ಇದಕ್ಕಾಗಿ psbloansin59minutes ಎಂಬ ವೆಬ್ ಸೈಟೊಂದನ್ನು ಪ್ರಾರಂಭಿಸಲಾಗಿತ್ತು. ಇಲ್ಲಿಯತನಕ ಈ ವೆಬ್ ಸೈಟ್ ನಲ್ಲಿ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಒಂದು ಕೋಟಿ ರೂಪಾಯಿಗಳವರೆಗೆ ಕೇವಲ 59 ನಿಮಿಷಗಳಲ್ಲಿ ಸಾಲ ಮಂಜೂರಾತಿ ನೀಡುವ ಸೌಲಭ್ಯವಿತ್ತು.

ಈ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಿರುವ ಸರಕಾರಿ ಸ್ವಾಮ್ಯದ ಬ್ಯಾಂಕುಗಳು, ಇನ್ನು ಮುಂದೆ ಈ ವೆಬ್ ಸೈಟ್ ಮೂಲಕ ಗೃಹ ಮತ್ತು ವಾಹನ ಸಾಲಗಳನ್ನೂ ಸಹ ಅರ್ಹ ಗ್ರಾಹಕರಿಗೆ 59 ನಿಮಿಷಗಳಲ್ಲಿ ಮಂಜೂರು ಮಾಡಲು ಕೆಲವು ಬ್ಯಾಂಕುಗಳು ನಿರ್ಧರಿಸಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳು ಐದು ಕೋಟಿ ರೂಪಾಯಿಗಳವರೆಗಿನ ಸಾಲ ಮೊತ್ತಕ್ಕೆ ಈ ವೆಬ್ ಸೈಟ್ ಮೂಲಕ ಮಂಜೂರಾತಿ ನೀಡಲು ನಿರ್ಧರಿಸಿವೆ.

ಇನ್ನು ಸಾಲ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕೆಲವೊಂದು ಸಗಟು ಉತ್ಪನ್ನಗಳನ್ನು ಈ ವೆಬ್ ಸೈಟ್ ನಲ್ಲಿ ಪರಿಚಯಿಸಲು ನಿರ್ಧರಿಸಿದೆ. ಸದ್ಯದಲ್ಲೇ ಈ ವೆಬ್ ಸೈಟ್ ಮೂಲಕ ಗೃಹ ಮತ್ತು ವಾಹನ ಸಾಲ ಸೌಲಭ್ಯವನ್ನು ಬ್ಯಾಂಕ್ ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ ರಾಜ್ಯ ಸರಕಾರದ ಸ್ವಾಮ್ಯದ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಹ ಕೆಲವೊಂದು ಸಾಲ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲು ನಿರ್ಧರಿಸಿದೆ.

Advertisement

ಈ ವೆಬ್ ಸೈಟ್ ಮೂಲಕ ಇದುವರೆಗೆ 35 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಸಾಲ ಸೌಲಭ್ಯವನ್ನು ವಿವಿಧ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸಿವೆ. 2019ರ ಮಾರ್ಚ್ 31ರವರೆಗೆ ಈ ವೆಬ್ ಸೈಟ್ ಮೂಲಕ 50,706 ಅರ್ಜಿಗಳು ಪ್ರಾಥಮಿಕ ಒಪ್ಪಿಗೆಗೆ ಒಳಗಾಗಿದ್ದು ಇವುಗಳಲ್ಲಿ 27,893 ಅರ್ಜಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next