ವಾಷಿಂಗ್ಟನ್: ಹಾಲಿವುಡ್ ನಟ
ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ, ಈ ಮೂಲಕ ವಿಶ್ವವನ್ನೇ ವ್ಯಾಪಿಸಿರುವ ಕೋವಿಡ್ 19 ಇದೀಗ ಹಾಲಿವುಡ್ ಗೂ ಕಂಟಕವಾಗಿ ಪರಿಣಮಿಸಿದೆ.
ಈ ಇಬ್ಬರಿಗೂ 63 ವರ್ಷ ವಯಸ್ಸಾಗಿದ್ದು, ಲೈಫ್ ಆಫ್ ಎಲ್ವೀಸ್ ಪ್ರೆಸ್ಲೆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿದ್ದಾಗ ಅತಿಯಾದ ಜ್ವರ ಬಂದಿತ್ತು. ಬಳಿಕ ಕೊರೋನಾ ವೈರಸ್ ಕುರಿತು ಪರೀಕ್ಷೆ ಮಾಡಿಸಿದಾಗ, ವರದಿಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ ಎಂದು ಹ್ಯಾಂಕ್ಸ್ ತಿಳಿಸಿದ್ದಾರೆ.
1990ರ ಅಸುಪಾಸಿನಲ್ಲಿ ಫಿಲಡೆಲ್ಫಿಯಾ ಮತ್ತು ಫಾರೆಸ್ಟ್ ಗಂಪ್ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಹ್ಯಾಂಕ್ಸ್ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು.
ಕೊರೊನಾ ಸೋಂಕಿಗೆ ಈಗಾಗಲೇ 118 ದೇಶಗಳಲ್ಲಿ 121,000 ಜನರು ತುತ್ತಾಗಿದ್ದು, 4,300ಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ವಿಶ್ವ ಅರೋಗ್ಯ ಸಂಸ್ಥೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಿತ್ತು.