Advertisement

ಯುಗಾದಿಯೂ, ಹೋಳಿಗೆಯೂ

09:59 AM Mar 28, 2020 | mahesh |

ಯುಗಾದಿ ಅಂದರೆ ಹೋಳಿಗೆ, ಹೋಳಿಗೆ ಅಂದರೆ ಯುಗಾದಿ. ವರ್ಷಗಳೆಷ್ಟೇ ಉರುಳಿದರೂ, ಜನರ ಆಹಾರ ಪದ್ಧತಿ, ಹಬ್ಬದ ಆಚರಣೆಯಲ್ಲಿ ಎಷ್ಟೇ ಬದಲಾವಣೆಗಳಾದರೂ, ಯುಗಾದಿ ಹಬ್ಬದೂಟದಲ್ಲಿ ಹೋಳಿಗೆಯ ಸ್ಥಾನ ತಪ್ಪುವುದಿಲ್ಲ. ಆದರೆ, ಕಾಲ ಬದಲಾದಂತೆಲ್ಲಾ ಹೋಳಿಗೆಯ ರೆಸಿಪಿಯೂ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದೆ. ಈಗ ಬೇಳೆ, ಕಾಯಿಯಷ್ಟೇ ಅಲ್ಲದೆ, ಮತ್ತಷ್ಟು ಬಗೆಯ ಹೋಳಿಗೆ ತಯಾರಿಸಬಹುದು.

Advertisement

1. ಅನಾನಸ್‌
ಬೇಕಾಗುವ ಸಾಮಗ್ರಿ: ಅನಾನಸ್‌ ಹಣ್ಣಿನ ರಸ- 2 ಕಪ್‌, ಸಕ್ಕರೆ - 1 ಕಪ್‌, ಚಿರೋಟಿ ರವೆ- 1ಕಪ್‌, ಮೈದಾ ಹಿಟ್ಟು -1ಕಪ್‌, ಹೂರಣಕ್ಕೆ- ಎಣ್ಣೆ, ಏಲಕ್ಕಿ ಪುಡಿ, ಚಿಟಿಕೆ ಉಪ್ಪು, ತುಪ್ಪ ಬೇಯಿಸಲು.

ಮಾಡುವ ವಿಧಾನ: ಮೈದಾ ಹಿಟ್ಟಿಗೆ ಉಪ್ಪು,ತುಪ್ಪ ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ, ಪೂರಿ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಚಿರೋಟಿ ರವೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ನಂತರ, ಅನಾನಸ್‌ ಹಣ್ಣಿನ ರಸ ಹಾಕಿ ಮಗುಚಿ. ಗಟ್ಟಿಯಾಗುತ್ತಾ ಬರುವಾಗ ಸಕ್ಕರೆ, ಚಿಟಿಕೆ ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. ಹೂರಣವು ಗಟ್ಟಿಯಾಗಿ ಉಂಡೆ ಮಾಡುವ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. ನಂತರ ಹಿಟ್ಟನ್ನು ತೆಗೆದುಕೊಂಡು ಕೈಯಲ್ಲಿ ಚಪ್ಪಟೆ ಮಾಡಿ, ಅದರಲ್ಲಿ ಹೂರಣ ತುಂಬಿಸಿ, ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿ. ಕಾವಲಿಗೆ ತುಪ್ಪ ಸವರಿ, ಬೇಯಿಸಿ.

2. ಶೇಂಗಾ
ಬೇಕಾಗುವ ಸಾಮಗ್ರಿ: ಶೇಂಗಾ- 1 ಕಪ್‌, ಬೆಲ್ಲ – 1 ಕಪ್‌, ಗೋಧಿ ಹಿಟ್ಟು – 1 ಕಪ್‌, ಎಣ್ಣೆ, ಏಲಕ್ಕಿ ಪುಡಿ.

ಮಾಡುವ ವಿಧಾನ: ಶೇಂಗಾ ಹುರಿದು ಸಿಪ್ಪೆ ತೆಗೆದು, ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಉಂಡೆ ಬೆಲ್ಲವನ್ನು ಹೆರೆದು, ಅದಕ್ಕೆ ಶೇಂಗಾ ಪುಡಿ ಸೇರಿಸಿ (ಬೇಕಿದ್ದರೆ ಮಿಕ್ಸಿಯಲ್ಲಿ ಮತ್ತೂಮ್ಮೆ ರುಬ್ಬಿಕೊಳ್ಳಿ) ಸ್ವಲ್ಪ ನೀರು ಬೆರೆಸಿ, ಹೂರಣ ತಯಾರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ನೀರು ಬೆರೆಸಿ, ಚಪಾತಿ ಹಿಟ್ಟಿನ ಹದದಲ್ಲಿ ಕಲಸಿ, ಅರ್ಧ ಗಂಟೆ ಹಾಗೇ ಇಡಿ. ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿ, ಅದನ್ನು ಗೋಧಿಹಿಟ್ಟಿನ ಕಣಕದೊಳಗೆ ಮುಚ್ಚಿ ಲಟ್ಟಿಸಿ. ನಂತರ, ಲಟ್ಟಿಸಿದ ಹೋಳಿಗೆಯ ಎರಡೂ ಬದಿಗೆ ಎಣ್ಣೆ ಸವರಿ ಕಾವಲಿ ಮೇಲೆ ಬೇಯಿಸಿದರೆ ಶೇಂಗಾ ಹೋಳಿಗೆ ರೆಡಿ.

Advertisement

3. ಎಳ್ಳು-ಶೇಂಗಾ
ಬೇಕಾಗುವ ಸಾಮಗ್ರಿ: ಶೇಂಗಾ- 1 ಕಪ್‌, ಬೆಲ್ಲ- 1 ಕಪ್‌, ಎಳ್ಳು- ಕಾಲು ಕಪ್‌, ರುಚಿಗೆ ಉಪ್ಪು, ಮೈದಾಹಿಟ್ಟು- ಅರ್ಧ ಕಪ್‌, ಎಣ್ಣೆ.

ಮಾಡುವ ವಿಧಾನ: ಶೇಂಗಾ ಹಾಗೂ ಎಳ್ಳನ್ನು ಪ್ರತ್ಯೇಕವಾಗಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಅವೆರಡನ್ನೂ ತುರಿದ ಬೆಲ್ಲದ ಜೊತೆ ಸೇರಿಸಿ, ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಗೆ ಸ್ವಲ್ಪ ಬಿಸಿನೀರು ಹಾಕಿ ಕಲಸಿ, ಉಂಡೆ ಮಾಡಿ ಇಡಿ. ಮೈದಾಹಿಟ್ಟಿಗೆ ಒಂದು ಚಮಚ ಎಣ್ಣೆ, ರುಚಿಗೆ ಉಪ್ಪು ಹಾಕಿ ಚಪಾತಿಯ ಹದಕ್ಕೆ ಕಲಸಿ, ಸ್ವಲ್ಪ ಹೊತ್ತು ಬಿಡಿ. ನಂತರ, ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ಹೂರಣದ ಉಂಡೆಯನ್ನಿಟ್ಟು ಲಟ್ಟಿಸಿ, ಕಾದ ಕಾವಲಿಯ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಇದನ್ನು ತುಪ್ಪದೊಂದಿಗೆ ಸವಿಯಲು ಬಲು ರುಚಿಯಷ್ಟೇ ಅಲ್ಲದೆ, ಆರೋಗ್ಯಕ್ಕೂ ಒಳ್ಳೆಯದು.

4. ರವೆ
ಬೇಕಾಗುವ ಸಾಮಗ್ರಿ: ಉಪ್ಪಿಟ್ಟು ರವೆ-1 ಕಪ್‌, ಬೆಲ್ಲ-ಒಂದು ಕಪ್‌, ಮೈದಾ ಹಿಟ್ಟು-ಅರ್ಧ ಕಪ್‌, ಉಪ್ಪು, ಎಣ್ಣೆ.

ಮಾಡುವ ವಿಧಾನ: ಎಣ್ಣೆ ಬಿಸಿ ಮಾಡಿ ಅದರಲ್ಲಿ ರವೆಯನ್ನು ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಮತ್ತು ಏಲಕ್ಕಿ ಪುಡಿ ಹಾಕಿ ಒಂದು ಕುದಿ ಕುದಿಸಿ. ಅದಕ್ಕೆ ರವೆ ಹಾಕಿ ಕುದಿಸಿ ಆರಲು ಬಿಡಿ. ಮೈದಾ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ನಂತರ ಈ ಕಣಕವನ್ನು ಲಟ್ಟಿಸಿ, ಹೂರಣ ಹಾಕಿ ಲಟ್ಟಿಸಿ, ಬೇಯಿಸಿ.

5. ಖಾರ ಹೋಳಿಗೆ
ಬೇಕಾಗುವ ಸಾಮಗ್ರಿ: ತೊಗರಿಬೇಳೆ-2 ಕಪ್‌, ಕಡಲೆಬೇಳೆ-1 ಕಪ್‌, ಹಸಿ ಮೆಣಸಿನಕಾಯಿ-5, ಜೀರಿಗೆ-1 ಚಮಚ, ತೆಂಗಿನ ತುರಿ-1 ಕಪ್‌, ಅರಿಶಿನ, ಶುಂಠಿ-ಅರ್ಧ ಇಂಚು, ಕೊತ್ತಂಬರಿ ಸೊಪ್ಪು, ಉಪ್ಪು, ಕಣಕಕ್ಕೆ ಮೈದಾ ಹಿಟ್ಟು-3 ಕಪ್‌, ಎಣ್ಣೆ.

ಮಾಡುವ ವಿಧಾನ: ಮೈದಾ ಹಿಟ್ಟನ್ನು ನೀರು, ಸ್ವಲ್ಪ ಎಣ್ಣೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಸ್ವಲ್ಪ ಹೊತ್ತು ನೆನೆಯಲು ಬಿಡಿ. ತೊಗರಿಬೇಳೆ ಮತ್ತು ಕಡಲೆಬೇಳೆಯನ್ನು ಕುದಿಸಿ ನೀರು ಬಸಿದು, ಹಸಿ ಮೆಣಸು, ಜೀರಿಗೆ, ತೆಂಗಿನ ತುರಿ, ಅರಿಶಿನ, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಕಣಕವನ್ನು ಸಣ್ಣ ಉಂಡೆ ಮಾಡಿ ಅದರೊಳಗೆ ಖಾರದ ಹೂರಣವಿಟ್ಟು ಲಟ್ಟಿಸಿ ಬೇಯಿಸಿ.

6. ಅವರೆಕಾಳು
ಬೇಕಾಗುವ ಸಾಮಗ್ರಿ: ಅವರೆಕಾಳು- 1 ಕಪ್‌, ತುರಿದ ಬೆಲ್ಲ- ಅರ್ಧ ಕಪ್‌, ಮೈದಾ ಹಿಟ್ಟು- ಅರ್ಧ ಕಪ್‌, ಚಿಟಿಕೆ ಉಪ್ಪು, ತುಪ್ಪ- 2 ಚಮಚ, ಏಲಕ್ಕಿ ಪುಡಿ.

ಮಾಡುವ ವಿಧಾನ: ಅವರೆಕಾಳನ್ನು ಕುಕ್ಕರ್‌ನಲ್ಲಿ ನೀರು ಹಾಕಿ ಬೇಯಿಸಿಕೊಳ್ಳಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಮೈದಾಹಿಟ್ಟಿಗೆ ಚಿಟಿಕೆ ಉಪ್ಪು, ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಸ್ವಲ್ಪ ಹೊತ್ತು ಹಾಗೇ ಬಿಡಿ. ತುಪ್ಪವನ್ನು ಬಿಸಿ ಮಾಡಿ, ತುರಿದ ಬೆಲ್ಲವನ್ನು ಅದರಲ್ಲಿ ಕರಗಿಸಿಕೊಳ್ಳಿ. ಅದಕ್ಕೆ ರುಬ್ಬಿದ ಅವರೆಕಾಳು ಹಾಕಿ, ಹೂರಣ ಮಾಡಿ ಸ್ಟೌವ್‌ನಿಂದ ಇಳಿಸಿ. ಮೈದಾ ಹಿಟ್ಟನ್ನು ಉಂಡೆ ಮಾಡಿ, ಅದರೊಳಗೆ ಅವರೆಕಾಳಿನ ಹೂರಣವಿಟ್ಟು, ಚಪಾತಿಯಂತೆ ಲಟ್ಟಿಸಿ, ಕಾವಲಿ ಮೇಲೆ ಬೇಯಿಸಿ.

ಅಮೃತಾ ರಾಜ್

Advertisement

Udayavani is now on Telegram. Click here to join our channel and stay updated with the latest news.

Next