ಮಂಗಳೂರು: ನಗರದ ಸುರತ್ಕಲ್ ನಲ್ಲಿ ಗುರುವಾರ ರಾತ್ರಿ ನಡೆದ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸುರತ್ಕಲ್, ಮೂಲ್ಕಿ, ಬಜಪೆ, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಶಾಲೆ, ಕಾಲೇಜುಗಳಿಗೆ ಶುಕ್ರವಾರ (ಜು.29) ರಜೆ ಘೋಷಿಸಲಾಗಿದೆ.
ಶಾಂರತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಮಿಷನರ್ ಅವರ ಮನವಿಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ತಡರಾತ್ರಿ ಆದೇಶ ನೀಡಿದ್ದಾರೆ.
ಸುರತ್ಕಲ್ ಸಮೀಪದ ತಾತ್ಕಾಲಿಕ ಮಾರುಕಟ್ಟೆ ಬಳಿ ವ್ಯಕ್ತಿಯೋರ್ವನ ಮೇಲೆ ನಾಲ್ವರ ತಂಡ ತಲವಾರು ದಾಳಿ ಮಾಡಿ ಹತ್ಯೆಗೈದ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳಪೇಟೆ ನಿವಾಸಿ ಫಾಝಿಲ್ ಎಂದು ಗುರುತಿಸಲಾಗಿದೆ.
ನಗರ ಪ್ರದೇಶದಲ್ಲಿ ನಿಷೇಧಾಜ್ಞೆ: ಪರಿಸ್ಥಿತಿ ಉದ್ವಿಗ್ನ ಸ್ಥಿತಿಯಲ್ಲಿರುವ ಕಾರಣ ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 19 ಕಡೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ರಾತ್ರಿ 10ರ ಬಳಿಕ ಅನವಶ್ಯಕ ಓಡಾಟ ನಡೆಸಿದರೆ ವಾಹನ ಜಪ್ತಿ, ವಿಚಾರಣೆ ನಡೆಸಲಾಗುವುದು. ಶುಕ್ರವಾರದಿಂದ ಈ ಭಾಗದಲ್ಲಿ ಮದ್ಯದಂಗಡಿಗಳ ಬಂದ್‌ಗೆ ಆದೇಶಿಸಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಜೆಹಾದಿ ಶಕ್ತಿಗಳ ವಿರುದ್ಧ ತಾರ್ಕಿಕ ಕ್ರಮ: ಸುನಿಲ್
ಮದ್ಯ ಮಾರಾಟ ನಿಷೇಧಾಜ್ಞೆ ವಿಸ್ತರಣೆ: ಬೆಳ್ಳಾರೆ ಪ್ರವೀಣ್ ನೆಟ್ಟಾರು ಅವರ ಹತ್ಯೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಎಲ್ಲ ರೀತಿಯ ಮದ್ಯ ಮಾರಾಟ, ದಾಸ್ತಾನು, ಸಾಗಾಣಿಕೆ ನಿರ್ಬಂಧಿಸಿ ಹೊರಡಿಸಲಾದ ಆದೇಶವನ್ನು ಜು.29ರ ಮಧ್ಯರಾತ್ರಿ 12ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.