ನೋಯ್ಡಾ: “ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪಟ್ಟುಎಂಬ ಮಾತಿದೆ. ಇದನ್ನು ಉತ್ತರಪ್ರದೇಶ ಪೊಲೀಸರು ಚೆನ್ನಾಗೇ ಅರ್ಥ ಮಾಡಿಕೊಂಡಂತಿದೆ. ಹೋಳಿ ಆಚರಣೆ ಹಿನ್ನೆಲೆಯಲ್ಲಿ, ಪುಂಡರನ್ನು ಎಚ್ಚರಿಸಲು ಯುಪಿ ಪೊಲೀಸರು ಟ್ವಿಟರ್ ಮಾಧ್ಯಮವನ್ನು ಬಳಸಿಕೊಂಡ ಬಗೆಗೆ ಈಗ ರಾಜ್ಯದೆಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪುಂಡರನ್ನು ಎಚ್ಚರಿಸಲು ಹೋಳಿ ಸಂದರ್ಭವನ್ನು ಜಾಣ್ಮೆಯಿಂದ ಬಳಸಿಕೊಂಡ ಉತ್ತರಪ್ರದೇಶ ಪೊಲೀಸರು, ಟ್ವಿಟರ್‌ನಲ್ಲಿ ಕಲರ್‌ಫುಲ್ ಫೋಟೋಗಳ ಜತೆಗೆ ತಮಾಷೆ ತಮಾಷೆಯಾಗೇ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ.
“”ಹೋಳಿ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಪಿಜ್ಜಾದವರಿಗಿಂತ ವೇಗವಾಗಿ ಪೊಲೀಸರನ್ನು ಆಹ್ವಾನಿಸಿದಂತೆ. ಹಾಗೇ ನಿಮಗೆ ಜೈಲಿನಲ್ಲಿ ಭರ್ಜರಿ ಟ್ರೀಟ್ ಖಚಿತ” ಎಂಬ ಟ್ವೀಟ್‌ಗೆ ಅತಿ ಹೆಚ್ಚು ಲೈಕ್‌ಗಳು ಬಂದಿದ್ದು, ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಮತ್ತೂಂದು ಟ್ವೀಟ್‌ನಲ್ಲಿ, “”ಒಬ್ಬ ಕುಡುಕ, ಸ್ತ್ರೀಪೀಡಕ ಮತ್ತು ನಿಂದಕ ಒಂದೇ ಕಾರಿನಲ್ಲಿ ಹೋಗುತ್ತಿದ್ದರೆ, ಆ ಕಾರಿನ ಚಾಲಕ ಯಾರಾಗಿರುತ್ತಾರೆ? ಖಂಡಿತ ಪೊಲೀಸ್ ಅಧಿಕಾರಿ” ಎಂದಿದೆ, ಈ ಟ್ವೀಟ್ ಕೂಡ ಮೆಚ್ಚುಗೆ ಗಳಿಸಿದೆ.
ಹೀಗೆ ತಮಾಷೆ ಮಾಡುತ್ತಲೇ ಪುಂಡರಿಗೆ ಎಚ್ಚರಿಕೆ ನೀಡಿರುವ ಉತ್ತರಪ್ರದೇಶ ಪೊಲೀಸರು, ಮತ್ತೂಂದು ಟ್ವೀಟ್‌ನಲ್ಲಿ, “”ಈ ಹೋಳಿಯಂದು ದುಷ್ಟ ಗುಣಗಳಿಗೆ ಕಿಚ್ಚು ಹಚ್ಚಿ, ಪ್ರೀತಿ ಪಸರಿಸಿ” ಎನ್ನುವ ಮೂಲಕ ಹೋಳಿ ಶುಭಾಶಯ ಕೋರಿದ್ದಾರೆ.