Advertisement

ಈ ಊರಲ್ಲಿ ಹೋಳಿ ಆಚರಿಸಲ್ಲ –ರಂಗಿನಾಟವೂ ಇಲ್ಲ

11:52 AM Mar 08, 2023 | Team Udayavani |

ಮುಂಡರಗಿ: ನಾಡಿನ ತುಂಬೆಲ್ಲಾ ಬಣ್ಣದ ಹೋಳಿ ಆಚರಣೆ ಮಾಡುತ್ತಾರೆ. ಆದರೆ, ಪಟ್ಟಣದ ಪಶ್ಚಿಮ ದಿಕ್ಕಿನ ಗುಡ್ಡದ ಮೇಲಿರುವ ಶ್ರೀ ಲಕ್ಷ್ಮೀ ಕನಕ ನರಸಿಂಹಸ್ವಾಮಿ ದೇವಸ್ಥಾನ ಇರುವ ಕಾರಣದ ಬಣ್ಣದ ಹಬ್ಬ ಓಕಳಿಯ ರಂಗಿನಾಟವನ್ನು ಜನರು ಆಡುವುದಿಲ್ಲ. ಜೊತೆಗೆ ರತಿ-ಮನ್ಮಥರನ್ನು ಕೂಡಾ ಕೂರಿಸುವುದಿಲ್ಲ. ಕಾಮ ದಹನ ಮಾಡುವುದಿಲ್ಲ. ಹೋಳಿ ಹುಣ್ಣಿಮೆ ಹಬ್ಬದ ಸಂಭ್ರಮ ಆಚರಣೆಯಂತೂ ನಡೆಯುವುದೇ ಇಲ್ಲ. ಪಟ್ಟಣದ ಶ್ರೀ ಲಕ್ಷ್ಮೀ ಕನಕನರಸಿಂಹಸ್ವಾಮಿ ಕಣ್ಣಿಗೆ ಕಾಣುವಷ್ಟು ದೂರದವರೆಗೂ ಬಣ್ಣ ಆಡುವುದಿಲ್ಲ ಎನ್ನುವುದು ಚಾಲ್ತಿಯಲ್ಲಿದೆ.

Advertisement

ಅಂದರೆ, ಪಟ್ಟಣ ಸೇರಿದಂತೆ ತಾಲೂಕಿನ 13 ಗ್ರಾಮಗಳಲ್ಲಿ ಓಕಳಿ ಆಡುವುದಿಲ್ಲ. ದೇಶದ ತುಂಬೆಲ್ಲಾ ರತಿ-ಮನ್ಮಥರನ್ನು ಕುಳ್ಳರಿಸಿ, ದಹಿಸುವ ಮೂಲಕ ಹೋಳಿ ಹುಣ್ಣಿಮೆ ಆಚರಣೆ ಮಾಡಲಾಗುತ್ತದೆ. ಆದರೆ, ನಮ್ಮೂರಲ್ಲಿ ಹಲಗೆ ಸದ್ದು, ಬಣ್ಣ ಎರಚಿ ಉತ್ಸಾಹ, ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬವನ್ನು ಶತಮಾನಗಳಿಂದಲೂ ಜನರು ಆಚರಿಸದೇ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಾ ಬರುತ್ತಿದ್ದಾರೆ. ಜೊತೆಗೆ ಶ್ರೀ ಲಕ್ಷ್ಮೀ ಕನಕನರಸಿಂಹಸ್ವಾಮಿ ಕಲ್ಯಾಣೋತ್ಸವ ಜರುಗುವುದರಿಂದ ಅಶುಭ ಸೂತಕದ ಕಾರ್ಯವಾದ ಹೋಳಿ ಸುಡುವುದು ಬೇಡ ಎನ್ನುವುದು ಕೂಡಾ ಹೋಳಿ ಹಬ್ಬಕ್ಕೆ ತಡೆಯಾಗಿದೆ.

ಹೋಳಿ ಹುಣ್ಣಿಮೆ ಆಚರಣೆ ಮಾಡದೇ ಇರುವುದಕ್ಕೆ ಸ್ಪಷ್ಟವಾದ ಇಂತಹದೇ ಕಾರಣವೆಂದು ಇರದೇ ಇದ್ದರೂ, ಪಟ್ಟಣದ ಗುಡ್ಡದ ಮೇಲೆ ಶ್ರೀ ಲಕ್ಷ್ಮೀ  ಕನಕನರಸಿಂಹಸ್ವಾಮಿ ಆವಾಸ ಸ್ಥಾನ ಇರುವುದರಿಂದ ಹೋಳಿ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿಲ್ಲ ಎನ್ನಲಾಗುತ್ತದೆ. ನಮ್ಮೂರಾಗ ಯಾವಾಗಲೂ ಹೋಳಿ ಹುಣ್ಣಿಮೆ ಆಚರಣೆ ಇಲ್ಲ. ಹಿರಿಯರು ಹೋಳಿ ಹುಣ್ಣಿಮೆ ಮಾಡಿಲ್ಲ. ಅದಕ್ಕೆ ನಾವೂ ಮಾಡೋಲ್ಲ ಎನ್ನುವುದು ಹಿರಿಯರ ಮಾತಾದರೆ, ಇಂದಿನ ಯುವ ಪೀಳಿಗೆ ಸಂಭ್ರಮದಿಂದ ಬಣ್ಣ ಎರಚಿ ಸಂಭ್ರಮಿಸುವ ಆಶಾಭಾವನೆ ವ್ಯಕ್ತಪಡಿಸುತ್ತಾರೆ. ಆದರೆ, ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯ ಪಾಲಿಸಬೇಕು ಎನ್ನುತ್ತಾರೆ.

ಹದಿಮೂರು ಗ್ರಾಮಗಳಲ್ಲಿಲ್ಲ ಓಕಳಿ. 

ತಾಲೂಕಿನ ಶಿರೋಳ, ಬ್ಯಾಲವಾಡಗಿ, ರಾಮೇನಹಳ್ಳಿ, ಕಕ್ಕೂರು, ನಾಗರಹಳ್ಳಿ, ಹೆಸರೂರು, ಕೋರ್ಲಹಳ್ಳಿ, ಬೆಣ್ಣಿಹಳ್ಳಿ, ಮಕ್ತುಂಪುರ, ಬರದೂರು , ಮೇವುಂಡಿ, ಹೈತಾಪೂರ, ಎಕ್ಲಾಸಪೂರ ಗ್ರಾಮಗಳಲ್ಲಿ ಹೋಳಿಯ ಆಚರಣೆ ನಡೆಯುವದಿಲ್ಲ. ಏಕೆಂದರೇ ಶ್ರಾವಣ ಮಾಸದಲ್ಲಿ ಲಕ್ಷ್ಮೀ  ಕನಕನರಸಿಂಹಸ್ವಾಮಿಯ ತುಂಗಭದ್ರಾ ನದಿದಂಡೆಯ ಗ್ರಾಮಗಳಿಗೆ ದಯಮಾಡಿಸಿ ತುಂಗಭದ್ರಾ ನದಿಗೆ ಹೋಗಿ ಸ್ನಾನ ಮಾಡುವುದರಿಂದ ಹೋಳಿ ಹುಣ್ಣಿಮೆ ಆಚರಣೆ ಇಲ್ಲ. ಅಲ್ಲದೇ ಬರದೂರು, ಮೇವುಂಡಿ, ಹೈತಾಪೂರ, ಎಕ್ಲಾಸಪೂರ ಗ್ರಾಮಗಳಲ್ಲೂ ಕೂಡಾ ಹೋಳಿಯ ಆಚರಣೆ ಇಲ್ಲ.

Advertisement

ಆದರೆ, ಯುಗಾದಿ ಹಬ್ಬ, ಶ್ರೀ ಹನುಮಂತ ದೇವರ ಜಾತ್ರೆ, ಚುನಾವಣೆ ಸಂಭ್ರಮಾಚರಣೆ, ಮೊಹರಂ ಹಬ್ಬಗಳು ಆಚರಿಸುವಾಗ ಬಣ್ಣಗಳನ್ನು ಎರಚಿ ಸಂಭ್ರಮಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೋಳಿ ಹುಣ್ಣಿಮೆ ಸಂದರ್ಭದಲ್ಲಿಯೇ ಗುಡ್ಡದ ಮೇಲಿರುವ ಶ್ರೀಲಕ್ಷ್ಮೀ ಕನಕನರಸಿಂಹಸ್ವಾಮಿ ಕಲ್ಯಾಣೋತ್ಸವ, ಜಾತ್ರೆ ಸಡಗರ, ಮಹಾರಥೋತ್ಸವ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಶ್ರೀ ಲಕ್ಷ್ಮೀ ಕನಕನರಸಿಂಹಸ್ವಾಮಿ ಜಾತ್ರಾ ಕಾರ್ಯಕ್ರಮಗಳು ಮಾ.6 ರಿಂದ ಪ್ರಾರಂಭವಾಗಿ ಮಾ. 13ರ ವರೆಗೆ ಜರುಗಲಿವೆ. ಶ್ರೀ ಲಕ್ಷ್ಮೀ ಕನಕರಸಿಂಹಸ್ವಾಮಿ ಮಂಗಲ ಸ್ನಾನ, ನಾಂದಿ ದೇವತಾ ಸ್ಥಾಪನೆ, ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮಾ.11ರಂದು ಸಂಜೆ 6 ಕ್ಕೆ ಮಹಾರಥೋತ್ಸವ ಜರುಗಲಿದೆ.

ಪಟ್ಟಣದಲ್ಲಿ ಲಕ್ಷ್ಮೀ ಕನಕನರಸಿಂಹಸ್ವಾಮಿ ಜಾತ್ರೆ ನಡೆಯುವುದರಿಂದ ಮೊದಲಿನಿಂದಲೂ ನಮ್ಮಲ್ಲಿ ಹೋಳಿ ಹುಣ್ಣಿಮೆ ಆಚರಣೆ ಇಲ್ಲ. ಲಕ್ಷ್ಮೀ ಕನಕನರಸಿಂಹಸ್ವಾಮಿ ರಥೋತ್ಸವದ ಮರುದಿನ ದೇವಸ್ಥಾನದ ಮುಂದೆ ದೇವರು ಹೊಳೆಗೆ ಹೋಗಿ ಬಂದ ನಂತರ ಬಣ್ಣದ ಓಕುಳಿ ಆಡಲಾಗುತ್ತದೆ. ಅಲ್ಲದೆ, ಯುಗಾದಿ ಹಬ್ಬದಲ್ಲಿ ನಡೆಯುವ ಹನುಮಂತ ದೇವರ ಜಾತ್ರೆಯ ಮರುದಿನ ಓಕುಳಿ ಆಡಲಾಗುತ್ತದೆ.
ನಾಗೇಶ ಹುಬ್ಬಳ್ಳಿ, ಪುರಸಭೆ ಸದಸ್ಯ

ಬೆಣ್ಣಿಹಳ್ಳಿ ಗ್ರಾಮಕ್ಕೆ ಮುಂಡರಗಿ ಶ್ರೀ ಲಕ್ಷ್ಮೀ ಕನಕರಾಯಸ್ವಾಮಿ ದೇವರು ದಯಮಾಡಿಸಿ, ತುಂಗಭದ್ರಾ ನದಿ ಆಚೆಯ ದಡಲ್ಲಿರುವ ಮದಲಗಟ್ಟಿ ಶ್ರೀ ಹನುಮಂತ ದೇವರ ದರ್ಶನ ಪಡೆದು ಹೋಗುವುದರಿಂದ ಗ್ರಾಮದಲ್ಲಿ ಹೋಳಿ ಅಚರಣೆ ಇಲ್ಲ.
ಜಗದೀಶ, ಯುವಕ, ಬೆಣ್ಣಿಹಳ್ಳಿ ಗ್ರಾಮ

~ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next