Advertisement

ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ಹೋಳಿ

12:57 PM Mar 13, 2017 | Team Udayavani |

ಮೈಸೂರು: ಬದುಕಿನ ಕಹಿ ಸಂಗತಿಗಳು, ದುಃಖಗಳನ್ನು ಬದಿಗೊತ್ತಿ ಜೀವನಕ್ಕೆ ಬಣ್ಣದ ಮೆರುಗು ನೀಡುವ ಹೋಳಿ ಹಬ್ಬವನ್ನು ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಸಡಗರ, ಸಂಭ್ರಮದೊಂದಿಗೆ ಆಚರಿಸಲಾಯಿತು.

Advertisement

ಹೋಳಿ ಹಬ್ಬವನ್ನು ಆಚರಿಸುವ ತವಕದೊಂದಿಗೆ ಭಾನುವಾರ ಬೆಳಗ್ಗಿನಿಂದಲೇ ಕೈಯಲ್ಲಿ ಬಣ್ಣಹಿಡಿದು ಅಲೆಯುತ್ತಿದ್ದ ಯುವಜನತೆ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಆತ್ಮೀಯರೊಂದಿಗೆ ಬೆರೆತು ಹೋಳಿ ಹಬ್ಬವನ್ನು ಆಚರಿಸಿ, ಹಬ್ಬದ ಶುಭಾಶಯ ಹಂಚಿಕೊಂಡರು.

ಹೀಗಾಗಿ ನಗರದ ಬಹುತೇಕ ಬಡಾವಣೆಗಳು, ಪ್ರಮುಖ ರಸ್ತೆಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಜಾತಿ, ಧರ್ಮ ಹಾಗೂ ವಯಸ್ಸಿನ ಭೇದವನ್ನು ಬದಿಗೊತ್ತಿ, ದಿನವಿಡೀ ಹೋಳಿ ಆಟದಲ್ಲಿ ತೊಡಗಿದ್ದ ಯುವಜನರು ಸಂಭ್ರಮದಲ್ಲಿ ಮಿಂದೆದ್ದರು.

ನಗರ ಪ್ರದೇಶದ ಅನೇಕ ಬಡಾವಣೆಗಳಲ್ಲಿ, ಅದರಲ್ಲೂ ಜೈನ ಸಮುದಾಯದ ಜನರು ವಾಸವಾಗಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಕುಟುಂಬ ಸದಸ್ಯರೆಲ್ಲರೂ ಒಂದಾಗಿ ಹೋಳಿ ಆಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು.

ಬೇಸಿಗೆಯ ಸುಡುಬಿಸಿಲನ್ನೂ ಲೆಕ್ಕಿಸದೇ, ಹೋಳಿ ಆಟದಲ್ಲಿ ಭಾಗಿಯಾಗಿದ್ದ ಜೈನ ಸಮುದಾಯದ ಜನರು ವಯಸ್ಸಿನ ಅಂತರವನ್ನು ಮರೆತು ಹೋಳಿಯಾಡಿದರು. ಯುವಕರು, ಯುವತಿಯರು ತಮ್ಮ ಗೆಳೆಯ ಗೆಳೆತಿಯರಿಗೆ ಬಣ್ಣದ ನೀರು, ಬಗೆಬಗೆಯ ಬಣ್ಣ ಹಚ್ಚಿ ಸಂಭ್ರಮವನ್ನು ಹಂಚಿಕೊಂಡರು.

Advertisement

ಅಲ್ಲದೆ ಕೆಲವು ಯುವಕರು ತಮ್ಮ ಸ್ನೇಹಿತರಿಗೆ ಬಣ್ಣದ ಜತೆಗೆ ಕೋಳಿ ಮೊಟ್ಟೆಗಳನ್ನು ಹೊಡೆದು ಆನಂದಿಸಿದರು.ಬಹುತೇಕ ಕಾಲೇಜುಗಳಲ್ಲಿ ಹೋಳಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಈ ಬಾರಿ ಭಾನುವಾರ ಹೋಳಿ ಹಬ್ಬ ಬಂದಿದ್ದ ಹಿನ್ನೆಲೆಯಲ್ಲಿ ಎಲ್ಲಾ ಕಾಲೇಜುಗಳು ಬಂದ್‌ ಆಗಿತ್ತು.

ಆದರೂ ನಿರ್ದಿಷ್ಟ ಸ್ಥಳಗಳಲ್ಲಿ ತಮ್ಮ ಸ್ನೇಹಿತರು, ಸಹಪಾಠಿಗಳೊಂದಿಗೆ ಜತೆಗೂಡಿದ ಕಾಲೇಜು ವಿದ್ಯಾರ್ಥಿಗಳು ಸಂಭ್ರಮದಿಂದಲೇ ಹೋಳಿ ಹಬ್ಬವನ್ನು ಆಚರಣೆ ಮಾಡಿದರು. ಹೋಳಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next