Advertisement
ಜೇವರ್ಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಚಿಣ್ಣರು, ಯುವತಿಯರು, ಯುವಕರು ಶುಕ್ರವಾರ ಬಣ್ಣದೋಕುಳಿಯಾಡಿದರು. ಪಟ್ಟಣದ ಅಖಂಡೇಶ್ವರ ವೃತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತ, ವಿದ್ಯಾನಗರ, ಬಸವೇಶ್ವರ ಚೌಕ್, ಚಿಕ್ಕಜೇವರ್ಗಿ, ಲಕ್ಷ್ಮೀ ಚೌಕ್, ಶಿಕ್ಷಕರ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜನರು ಬಣ್ಣದಲ್ಲಿ ಮಿಂದೆದ್ದರು. ಚಿಕ್ಕ ಚಿಕ್ಕ ಮಕ್ಕಳು ಪಿಚಕಾರಿ ಹಿಡಿದು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಹಚ್ಚುವುದು ಹಾಗೂ ಮಹಿಳೆಯರು ಮನೆ ಮನೆಗೆ ತೆರಳಿ ತಮ್ಮ ಗೆಳತಿಯರ ಜೊತೆ ರಂಗಿನಾಟ ಗಮನ ಸೆಳೆಯಿತು.
ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಪಟ್ಟಣದ ಅನೇಕ ಬಡಾವಣೆಗಳಲ್ಲಿ ಬೆಳಗಿನಿಂದ ಮಕ್ಕಳು,ಯುವಕರು ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಬಣ್ಣದಾಟ ಆಡಿದರು. ಪಟ್ಟಣದ ಹನುಮಾನ ಬಡಾವಣೆ
ಯುವಕರು ಅಣುಕು ಶವದ ಮೆರವಣಿಗೆ ನಡೆಸಿ ಗಮನ ಸೆಳೆದರು. ಹತ್ತಾನಗಲ್ಲಿ, ಬಾಳನಕೇರಿ, ಸುಲ್ತಾನಪುರ ಬಡಾವಣೆ, ಶರಣನಗರ, ಭೀಮನಗರ, ಧನಗರ ಗಲಿ, ರೇವಣಸಿದ್ಧೇಶ್ವರ ಬಡಾವಣೆ, ನಾಯಕನಗರ ಹೀಗೆ ಇನ್ನಿತರ ಬಡಾವಣೆಯಲ್ಲಿ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಬಣ್ಣದಾಟದಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದವು. ಸಂಜೆ ಹಳೆ ಪೊಲೀಸ್ ಚೌಕ್‌ನಲ್ಲಿ ಬಣ್ಣದ ಗಡಿಗೆ ಒಡೆಯಲಾಯಿತು.
Related Articles
Advertisement
ಹಲಗೆ ಸಂಗೀತದ ಮಧ್ಯೆ ಸಮೂಹಕವಾಗಿ ಬಣ್ಣದಾಭಿಷೇಕ ಮಾಡಿಕೊಂಡು ಪರಸ್ಪರ ಹರ್ಷ ವ್ಯಕ್ತಪಡಿಸಿದರು. ರಾವೂರಿನಲ್ಲಿ ಹೋಳಿ ಹಬ್ಬದ ಸಡಗರವಿತ್ತು. ಬೆಳಗ್ಗೆಯಿಂದ ಯುವಕರು ರಸ್ತೆ ಹಾಗೂ ಬಡಾವಣೆ ಗಲ್ಲಿಗಳಲ್ಲಿ ಜಮಾಯಿಸಿ ಸಾರ್ವಜನಿಕರಿಗೆ ಬಣ್ಣ ಎರಚಿದರು. ಪರಸ್ಪರ ಮುಖಗಳಿಗೆ ಬಣ್ಣ ಹಚ್ಚಿ ಆನಂದ ಪಟ್ಟರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ಜ್ಯೋತಿ ಯುವಕರೊಂದಿಗೆ ಬಣ್ಣದಾಟದಲ್ಲಿ ಬೆರೆತು ಹಬ್ಬದ ಸಂಭ್ರಮ ಹೆಚ್ಚಿಸಿದರು.
ಲಾಡ್ಲಾಪುರದಲ್ಲಿ ಚುನಾಯಿತ ಜನಪ್ರತಿನಿಧಿಗಳು ಯುವಕರೊಂದಿಗೆ ಸೇರಿ ಬಣ್ಣದಾಟವಾಡಿದರು. ಮುಖ್ಯ ರಸ್ತೆಗಳಲ್ಲಿ ಜಮಾಯಿಸಿ ವಾಹನ ಸಂಚಾರಿಗಳ ಮೇಲೆ ಬಣ್ಣ ಎರಚಿ ಬೊಬ್ಬೆ ಹಾಕಿದರು. ಸಕ್ಕರೆ ಸರವನ್ನು ಕೊರಳಿಗೆ ಹಾಕಿಕೊಂಡು ಬರುತ್ತಿದ್ದ ಪುಟಾಣಿ ಮಕ್ಕಳು ಗಮನ ಸೆಳೆದರು.
ಶಹಾಬಾದ: ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಗರ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿಕಾಮಣ್ಣರ ಮೂರ್ತಿಗೆ ಪೂಜೆ ಸಲ್ಲಿಸಿ ಗುರುವಾರರಾತ್ರಿಯೇ ದಹನ ಮಾಡಲಾಯಿತು. ಶುಕ್ರವಾರ ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಹಲಿಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಬಣ್ಣದ ನೀರು ತುಂಬಿದ ಮಡಿಕೆ ಒಡೆದು ಹಾಕುವ ಆಟ ಗಮನ ಸೆಳೆಯಿತು. ರಸ್ತೆ ಮೇಲೆ ಓಡಾಡುವ ವಾಹನಗಳನ್ನು
ಅಡ್ಡಗಟ್ಟಿ ಬಣ್ಣ ಎರಚಿದ ದೃಶ್ಯ ಕಂಡ ಬಂತು. ಹೋಳಿ ಹಬ್ಬದ ನಿಮಿತ್ತ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಚರಿಸಿದರು. ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ ಗೆಳೆಯರ ಬಳಗದವರು ವಿಶೇಷವಾಗಿ ಹೋಳಿ ಹಬ್ಬ ಆಚರಿಸಿದರು. ಭಂಕೂರಿನ ಅರಣ್ಯ ಇಲಾಖೆ ಸ್ಥಳದಲ್ಲಿ ಔತಣ ಕೂಟ ಏರ್ಪಡಿಸಿ ಮಿತ್ರರು ಹಾಗೂ ನಗರದ ಗಣ್ಯರನ್ನು ಆಹ್ವಾನಿಸಿದ್ದರು. ಒಂದೇ ಕಡೆ ಎಲ್ಲರೂ ಸೇರಿ ನಂತರ ಎಲ್ಲರೂ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಚಿತ್ತಾಪುರ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬ ನಿಮಿತ್ತ ಗುರುವಾರ ರಾತ್ರಿ ಕಾಮದಹನ ಮಾಡಿ ಶುಕ್ರವಾರ ಜನರು ಬಣ್ಣ ಎರಚಿ ರಂಗಿನಾಟ ಆಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರು, ಮಕ್ಕಳು, ಕುಳ್ಳು ಕಟ್ಟಿಗೆ ಸಂಗ್ರಹಿಸಿ ರಾತ್ರಿ ಕಾಮಣ್ಣ ಮೂರ್ತಿಗೆ ಪೂಜೆ ಸಲ್ಲಿಸಿ ದಹನ ಮಾಡಿದರು. ಜನಮನ ಸೆಳೆಯುವ ಹೋಳಿ ಹಾಡು ಆಡಿದರು. ಸಂಪ್ರದಾಯದಂತೆ ಕಾಮಣ್ಣನಿಗೆ ಹಚ್ಚಿದ ಬೆಂಕಿ ತಂದ ಮಹಿಳೆಯರು ಅದರಿಂದಲೇ ಮನೆ ದೀಪ ಬೆಳಗಿಸಿದರು. ಅಲ್ಲದೆ ಕಾಮದಹನ ಮಾಡಿದ ಬೆಂಕಿಯಲ್ಲಿ ಕಡಲೆ, ಉಳ್ಳಾಗಡ್ಡಿ, ಗೆಣಸು ಸುಟ್ಟು ಪ್ರಸಾದ ಎಂದು ಸ್ವೀಕರಿಸಿದರು. ಶುಕ್ರವಾರ ದುಲಂಡಿ ದಿನದಂದು ಬೆಳಗ್ಗೆಯಿಂದಲೇ ಮಕ್ಕಳು ಯುವಕರು, ರಾಜಕಾರಣಿಗಳು, ವಕೀಲರು, ವ್ಯಾಪಾರಸ್ಥರು, ಶಿಕ್ಷಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ರಂಗಿನಾಟದಲ್ಲಿ ತೊಡಗಿದರು.