ಕನಕಪುರ: ಆಟೋ ಚಾಲನೆ ಮಾಡುತ್ತಿರುವ ಕಾಮಣ್ಣ ಗ್ರಾಹಕರಂತೆ ಹಿಂಬದಿ ಆಸನದಲ್ಲಿ ರತಿದೇವಿ ಹಾಗೂ ಮಗ ಕುಳಿತಿರುವ ಹಾಗೆ ಕಾಮಣ್ಣ ರತಿದೇವಿ ಪ್ರತಿಷ್ಠಾಪನೆ ಮಾಡಿರುವುದು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ಕಾಮನ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾಮಣ್ಣ ರತಿದೇವಿ ಸಾರ್ವಜನಿಕರ ಆಕರ್ಷಿಣಿಯ ಕೇಂದ್ರವಾಗಿದೆ. ಕಾಮನ ಹಬ್ಬದ ಅಂಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿರುವ ಕಾಮನ ಗುಡಿಯಲ್ಲಿ ಕಾಮಣ್ಣ ಮತ್ತು ರತಿದೇವಿಯನ್ನು ಪ್ರತಿಷ್ಠಾಪನೆ ಮಾಡಿ ಚಾಲನೆ ನೀಡಲಾಗಿದೆ.
ವೈಭವದ ಕಾಮನ ಹಬ್ಬ: ಪುರಾತನ ಕಾಲದಿಂದಲೂ ಅತ್ಯಂತ ವೈಭವಯುತವಾಗಿ ಮತ್ತು ವಿಜೃಂಭಣೆಯಿಂದ ಕಾಮನ ಹಬ್ಬ ಆಚರಣೆ ಮಾಡುವುದು ವಿಶೇಷ. ಹಾಗಾಗಿಯೇ ಪೂರ್ವಿಕರ ಕಾಲದಿಂದಲೂ ಕಾಮನ ಹಬ್ಬ ಆಚರಣೆಗೆಂದು ಎಂಜಿ ರಸ್ತೆಗೆ ಹೊಂದಿಕೊಂಡಂತೆ ಕೊಠಡಿಯನ್ನು ಮೀಸಲಿರಿಸಲಾಗಿದೆ. ಪ್ರತಿವರ್ಷವು ಅದೇ ಸ್ಥಳದಲ್ಲೇ ರತಿಮನ್ಮಥರನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 8 ದಿನಗಳ ಕಾಲ ನಡೆಯುತ್ತಿದ್ದ ಕಾಮನ ಹಬ್ಬವನ್ನು ಇತ್ತೀಚಿಗೆ 6 ದಿನಕ್ಕೆ ಸೀಮಿತಗೊಳಿಸಲಾಗಿದೆ.
ದಿನಕ್ಕೊಂದು ರೀತಿ ಪ್ರತಿಷ್ಠಾಪನೆ: ಒಂದು ವಾರ ರತಿಮನ್ಮಥರನ್ನು ವಿಶೇಷ ಉಡುಗೆ ತೊಡುಗೆಯನ್ನು ತೊಡಿಸಿ, ಅಲಂಕಾರ ಮಾಡಲಾಗುತ್ತದೆ. ಸಾರ್ವಜನಿಕರ ಗಮನ ಸೆಳೆಯುವಂತೆ ಏಳು ದಿನಗಳಲ್ಲಿ ಒಂದೊಂದು ದಿನ ಒಂದೊಂದು ರೀತಿಯಲ್ಲಿ ವೇಷ ತೋಡಿಸಿ, ಪ್ರತಿಷ್ಠಾಪನೆ ಮಾಡುಲಾಗುತ್ತದೆ. ಗುರುವಾರ ಕಾಮಣ್ಣ ಮತ್ತು ರತಿದೇವಿಯನ್ನು ಪ್ರತಿಷ್ಠಾಪನೆ ಮಾಡಿ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮೊದಲ ದಿನ ಶುಕ್ರವಾರ ವಿವಾಹದ ರೀಷೆಪ್ಸನ್ ರೀತಿಯಲ್ಲಿ ರತಿಮನ್ಮಥರನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಎರಡನೇ ದಿನ ಶನಿವಾರ ದಿನ ಕಾಮಣ್ಣ ಆಟೋ ಚಾಲಕನಂತೆ ರತಿದೇವಿ ಹಾಗೂ ಮಗ ಗ್ರಾಹಕರಂತೆ ಆಟೋ ಹಿಂಬಂದಿಯ ಆಸನದಲ್ಲಿ ಕುಳಿತಿರುವ ರೀತಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರತಿಮನ್ಮಥರನ್ನು ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಾರ್ಚ್ 7ರಂದು ಮಂಗಳವಾರ ಹೋಳಿ ಹುಣ್ಣುಮೆಯೆಂದು ಕಾಮಣ್ಣನ ದಹನ ಮಾಡಿ ಮಾರನೆ ದಿನ ಬಣ್ಣದ ಹೋಳಿ (ಗುಲಾಲ್)ಯನ್ನು ಆಚರಣೆ ಮಾಡಲಾಗುತ್ತದೆ. ಸಂತಾನ ಭಾಗ್ಯ ಇಲ್ಲದಿರುವು ದಂಪತಿಗಳು ರತಿದೇವಿ ಮತ್ತು ಮನ್ಮಥನಿಗೆ ಪೂಜೆ ಸಲ್ಲಿಸಿ ಬೇಡಿಕೊಂಡರೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ, ನೂರಾರು ಜನರು ಪ್ರತಿ ನಿತ್ಯ ರತಿಮನ್ಮಥರಿಗೆ ಪೂಜೆ ಸಲ್ಲಿಸಿ, ಕಲ್ಯಾಣ ಸೇವೆ ಸಮರ್ಪಣೆ ಮಾಡಿ ದರ್ಶನ ಪಡೆಯುತ್ತಿದ್ದಾರೆ.