Advertisement
ಮರಾಠಿ ಸಮುದಾಯದ ಹೋಳಿ ಹಬ್ಬದ ಆಚರಣೆಯು ಈಗಾಗಲೇ ಆರಂಭ ಗೊಂಡಿದ್ದು, ಮಾ. 23ರ ಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ಕುಂದಾಪುರ ತಾಲೂಕಿನಾದ್ಯಂತ ಮಾತ್ರವಲ್ಲದೆ ಉಡುಪಿ ಸೇರಿದಂತೆ ಎಲ್ಲೆಡೆ ಫಾಲ್ಗುಣ ಮಾಸದ ಏಕಾದಶಿಯಿಂದ ಆರಂಭವಾಗಿ ಹುಣ್ಣಿಮೆ ಯವರೆಗೆ ಮರಾಠಿ, ಕುಡುಬಿ ಹಾಗೂ ಕೊಂಕಣ ಖಾರ್ವಿ ಸಮುದಾಯದವರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಲೆ ತಲಾಂತರಗಳಿಂದ ಈ ಹೋಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಮಹಾರಾಷ್ಟ್ರ, ಗೋವಾದಿಂದ ವಲಸೆ ಬಂದವರು ಮರಾಠಿ ನಾಯ್ಕ ಸಮುದಾಯದವರು. ಇವರ ಹೋಳಿ ಹಬ್ಬ ಏಕಾದಶಿಯಂದು ಆರಂಭಗೊಂಡು, ಹುಣ್ಣಿಮೆಯ ಒಂದು ದಿನ ಮೊದಲು ಮುಕ್ತಾಯಗೊಳ್ಳುತ್ತದೆ. ಈ ಬಾರಿ ಮಾ.18ರಂದು ಆರಂಭಗೊಂಡಿದ್ದು, ಮಾ. 23ರಂದು ನಡೆಯುವ ಪೂಜೆ ಯೊಂದಿಗೆ ಕೊನೆಗೊಳ್ಳುತ್ತದೆ. ಕುಂದಾಪುರ ತಾಲೂಕಿನ ಚಿತ್ತೂರು, ಕೆರಾಡಿ, ಮುದೂರು, ಜಡ್ಕಲ್, ಹಳ್ಳಿಹೊಳೆ, ಅರೆಶಿರೂರು, ಕೊಲ್ಲೂರು ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮರಾಠಿ ಸಮುದಾಯದವರು 20-30 ಜನರ ತಂಡಗಳನ್ನು ರಚಿಸಿಕೊಂಡು, ತಿರುಗಾಟ ಆರಂಭಿಸುತ್ತಾರೆ. ಮನೆ –
ಮನೆಗೆ ಹೋಳಿ ಹಬ್ಬದ ನೃತ್ಯ ಮಾಡುತ್ತಾರೆ. ಎರಡು ದಿನ ತಿರುಗಾಟ ನಡೆಸಿ, 3ನೇ ದಿನ ಸಂಜೆ ಮತ್ತೆ ಅಲ್ಲಿ ಬಂದು ಸೇರುತ್ತಾರೆ. ಇವರ ವೇಷ- ಭೂಷಣ ಕುಡುಬಿ ಸಮುದಾಯಕ್ಕಿಂತ ಭಿನ್ನವಾಗಿದೆ. ಕೊನೆಗೆ ಅವರ ಪ್ರಮುಖರಾದ ಗೌಡ್ರ ಮನೆಯಲ್ಲಿ ಹಾಕಲಾದ ಚಪ್ಪರದಲ್ಲಿ ಹೋಳಿ ಕುಣಿತದ ತಿರುಗಾಟ ಕೊನೆಗೊಳ್ಳುತ್ತದೆ. ಖಾರ್ವಿ ಹೋಳಿ
ಕುಂದಾಪುರ ಭಾಗದಲ್ಲಿ ಖಾರ್ವಿ ಸಮುದಾಯದವರು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನೆ ಮೂಲಕವಾಗಿ ಪ್ರತಿ ವರ್ಷವೂ ಹೋಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುಂದಾಪುರದ ಅಧಿದೇವತೆ ಕುಂದೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ಪ್ರತೀ ಮನೆ- ಮನೆಗಳಲ್ಲಿಯೂ ಹೋಳಿ ಹಬ್ಬದ ವಿಧಿ- ವಿಧಾನ ಆರಂಭಗೊಳ್ಳುತ್ತದೆ. ಖಾರ್ವಿ ಸಮುದಾಯದ ಪುರುಷರು ಗುಮ್ಮಟೆ ಬಾರಿಸುತ್ತಾ ಹಾಡು, ನೃತ್ಯ ಮಾಡುತ್ತಾರೆ. 3ನೇ ದಿನ ವೆಂಕಟರಮಣ ದೇವರ ದರ್ಶನ ಪಡೆಯುತ್ತಾರೆ. 4ನೇ ದಿನ ಹೋಳಿ ದಹನ ವಿಶಿಷ್ಟವಾಗಿ ನಡೆಯುತ್ತದೆ. ಕೊನೆಯ ದಿನ ಹೋಳಿ ಓಕುಳಿ ವಿಜೃಂಭಣೆಯಿಂದ ನಡೆಯುತ್ತದೆ. ಕುಂದಾಪುರ ಪೇಟೆಯಾದ್ಯಂತ ಖಾರ್ವಿ ಸಮಾಜದ ಸಹಸ್ರಾರು ಬಂಧುಗಳು ಮೆರವಣಿಗೆ ಮೂಲಕ ಸಂಚರಿಸಿ, ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಗಂಗೊಳ್ಳಿಯಲ್ಲಿಯೂ ಇದೇ ರೀತಿ ನಡೆಯುತ್ತದೆ.
Related Articles
ಉಡುಪಿ ಜಿಲ್ಲೆಯಲ್ಲಿ ಕುಡುಬಿ ಸಮುದಾಯದ ಒಟ್ಟು 46 ಕೂಡು ಕಟ್ಟುಗಳಿವೆ. ಕೂಡುಕಟ್ಟು ಅಂದರೆ 1 ಗ್ರಾಮ ಅಂತ ಅರ್ಥ. ಕೂಡು ಕಟ್ಟುಗಳು ತಮ್ಮಲ್ಲೇ ಪಂಗಡಗಳಾಗಿ ಮಾಡಿ, ಮನೆ – ಮನೆಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟ ನೃತ್ಯ ಪ್ರದರ್ಶಿಸುತ್ತಾರೆ. ಏಕಾದಶಿಯ ದಿನ ಬೆಳಗ್ಗಿನ ಜಾವಕ್ಕೂ ಮುನ್ನವೇ ಕೂಡು ಕಟ್ಟುಗಳ ಸದಸ್ಯರೆಲ್ಲ ಆಯಾಯ ಭಾಗದ ಗುರಿಕಾರರ ಮನೆಗೆ ಬಂದು ಸೇರಬೇಕು. ಅಲ್ಲಿ ದೇವರ ಪ್ರತಿಷ್ಠಾಪನೆ, ಹಾಡುಗಳ ಮೂಲಕವೇ ವಿಧಿ- ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ, ಬಳಿಕ ಗ್ರಾಮ ದೇವಸ್ಥಾನದಲ್ಲಿ ಕೋಲಾಟ, ಗುಮ್ಮಟೆ ನೃತ್ಯ ಮಾಡಲಾಗುತ್ತದೆ. ಬಳಿಕ ಮೊದಲೆರಡು ದಿನ ಹೊರ ಗ್ರಾಮಗಳ ಕುಡುಬಿ ಸಮುದಾಯದವರ ಮನೆಗೆ ಹೋಗಿ, 3ನೇ ದಿನ ಅವರದೇ ಗ್ರಾಮಕ್ಕೆ ಬಂದು ಅಲ್ಲಿನ ಎಲ್ಲರ ಮನೆಗಳಿಗೂ ಹೋಗುತ್ತಾರೆ. 5ನೇ ದಿನ ಮತ್ತೆ ಗುರಿಕಾರರ ಮನೆಯಲ್ಲಿ ಸೇರುತ್ತಾರೆ. ಹಬ್ಬದ ಮುಕ್ತಾಯ 5ನೇ ದಿನ ಎಲ್ಲರೂ ಗುರಿಕಾರರ ಮನೆಯಲ್ಲಿ ಸೇರಿ ಹಬ್ಬ ಆಚರಿಸುತ್ತಾರೆ. ಅಲ್ಲಿಗೆ ಹೋಳಿ ಆಚರಣೆ ಮುಕ್ತಾಯ. ಇವರ ವೇಷ-ಭೂಷಣ ವಿಶೇಷ ಆಕರ್ಷಣೀಯವಾಗಿರುತ್ತದೆ.
Advertisement