ಸಮಯದಲ್ಲಿ ಹೆಸರು, ಅಲಸಂದೆ ಕಾಳು ತಾಲೂಕಿನ ರೈತರ ಕೈ ಹಿಡಿದಿದೆ. ಮಳೆಯಾಶ್ರಿತ ಪ್ರದೇಶವಾದ ಚಿಕ್ಕನಾಯನಕನಹಳ್ಳಿ ತಾಲೂಕಿನಲ್ಲಿ ಮುಂಗಾರಿನಲ್ಲಿ ಹೆಸರು, ಅಲಸಂದೆ, ಹಿಂಗಾರಿನಲ್ಲಿ ರಾಗಿ, ಹುರುಳಿ, ತೊಗರಿ ವಾಣಿಜ್ಯ ಬೆಳೆಯಾಗಿವೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಉತ್ತಮ ಮಳೆಯಾಗದೆ ಯಾವ ಬೆಳೆಯೂ ರೈತನ ಕೈ ಹಿಡಿಯಲಿಲ್ಲ. ಪರಿಣಾಮ ಹೈನುಗಾರಿಗೆ, ಕುರಿಕೋಳಿ ಸಾಕಾಣಿಗೆ, ಚಿಲ್ಲರೆ ವ್ಯಾಪಾರ, ದಿನಕೂಲಿ ಸೇರಿದಂತೆ ಇತರೆ ಕಸುಬಿನತ್ತ ರೈತರು ಮುಖ ಮಾಡಿದ್ದರು. ಆದರೆ ಕೊರೊನಾದಿಂದಾಗಿ ಈ ಕಸುಬುಗಳ ಆದಾಯಕ್ಕೂ ಸಂಚಕಾರ ಬಂದೊದಗಿತ್ತು. ಇಂತಹ ಸಂಕಷ್ಟದ ಕಾಲದಲ್ಲಿ ಹೆಸರು ಮತ್ತು ಅಲಸಂದೆ ಬಂಪರ್ ಬೆಳೆ ಬಂದಿದೆ.
Advertisement
ತಾಲೂಕಿನ ಹಂದನಕೆರೆ ಹೋಬಳಿಯಿಂದ ನಿತ್ಯ ರೈತರು ಮಾರುಕಟ್ಟೆಗೆ ಹೆಸರು, ಅಲಸಂದೆ ಜೊತೆ ಲಗ್ಗೆ ಇಡುತ್ತಿದ್ದು ಕೊರೊನಾದಿಂದ ಕಳೆಗುಂದಿದ್ದ ಮಾರುಕಟ್ಟೆಗೆ ಈಗ ಜೀವಕಳೆ ಬಂದಿದೆ. ಮಾರುಕಟ್ಟೆಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಹೆಸರು, ಅಲಸಂದೆ ರಾಶಿ ಹಾಗೂ ಚೀಲಗಳೇ ಕಾಣಸಿಗುತ್ತಿದ್ದು ನಿತ್ಯ ಲಕ್ಷಾಂತರ
ರೂ. ವಹಿವಾಟು ನಡೆಯುತ್ತಿದೆ. ಈ ಮೂಲಕ ರೈತರಿಗೂ ಹಣ ಸಿಗುವ ಜೊತೆಗೆ ಮಾರುಕಟ್ಟೆ ವ್ಯವಹಾರ ನಂಬಿದ್ದ ವರ್ತಕರು, ಹಮಾಲರು, ವಾಹನದವರಿಗೂ ಶುಕ್ರದೆಸೆ ಆರಂಭವಾಗಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿಯಾಗುವ ಹೆಸರುಕಾಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಗೂ ರವಾನೆಯಾಗುತ್ತಿದೆ. ಪ್ರತಿನಿತ್ಯ ಮೂರ್ನಾಲ್ಕು ಲಾರಿ ಲೋಡ್ ರವಾನೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿ ಸಿದರೆ ಬೆಲೆಯೂ ಸಹ ಉತ್ತಮವಾಗಿದೆ. ಕ್ವಿಂಟಲ್ ಹೆಸರಿಗೆ 5,800 ರೂ., ಮಿಂಚುಕಾಳು 7,500 ರೂ., ಅಲಸಂದೆ 4,300 ರೂ. ದರವಿದೆ. ಒಟ್ಟಾರೆ ಕೊರೊನಾ ಸಂಕಷ್ಟದಲ್ಲೂ ಗ್ರಾಮೀಣ ಪ್ರದೇಶ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.