ರೈತರು ಕಾರಹುಣ್ಣಿಮೆ ಮತ್ತು ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡ ರಾಜ್ಯದ ಬೀದರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ “ಹೋಳಾ’ ಹಬ್ಬವನ್ನು ವಿಭಿನ್ನ ದಿನಗಳಂದು ಆಚರಿಸುವರು. ಮರಾಠಿ ಭಾಷೆಯ “ಪೋಳಿ’ ಮೂಲ ಶಬ್ದದಿಂದ “ಪೋಳಾ’ ಶಬ್ದದ ಉಗಮ ಹಾಗೂ ಮರಾಠಿಯ “ಪೋಳಾ’ ಕನ್ನಡದಲ್ಲಿ “ಹೋಳಾ’ ಎನ್ನುವ ರೂಪ ತಾಳಿರಬಹುದು. ಕನ್ನಡದ ಆಡು ಭಾಷೆಯಲ್ಲಿಯೂ
ಪೋಳ್ ಎಂದರೆ ಬೀಜದ ಹೋರಿ ಎಂಬುದು ರೂಢಿಯಲ್ಲಿದೆ. ಕಾರಹುಣ್ಣಿಮೆಯ ದಿನ ಕಳೆದುಹೋದ ಎತ್ತುಗಳು ಶ್ರಾವಣ
ಮಾಸಾಂತ್ಯದಲ್ಲಿ ಬರುವ ದರ್ಶ ಅಥವಾ ಪಿಠೊರಿ(ವದ್ಯ) ಅಮಾವಾಸ್ಯೆಯಂದು ಸಿಕ್ಕಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಆ. 21ರಂದು ಹೋಳಾ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ಹಬ್ಬದ ಹಿಂದಿನ ದಿನ ಅರಿಶಿಣ ಮತ್ತು ಎಣ್ಣೆಯಿಂದ ಎತ್ತುಗಳ ಹೆಗಲಿಗೆ ತಿಕ್ಕಿ, ಶಾಖ ನೀಡಿ ಸ್ನಾನ ಮಾಡಿಸುವರು. ಹಬ್ಬದ ದಿನದಂದು ಬೆಳಗ್ಗೆ ಎತ್ತುಗಳಿಗೆ ಪುನಃ ಸ್ನಾನ, ಅಭ್ಯಂಜನ ಮಾಡಿಸಿ ಎತ್ತುಗಳ ಕೊಂಬುಗಳಿಗೆ ವಿವಿಧ ಬಣ್ಣದ ಪೆಂಟ್ ಹಚ್ಚುತ್ತಾರೆ. ಕೊರಳಲ್ಲಿ ಕವಡೆ ಮತ್ತು ಗೆಜ್ಜೆನಾದದ ಸರಮಾಲೆ, ಕಾಲುಗಳಲ್ಲಿ ಗೆಜ್ಜೆ(ತೋಡೆ)
ಮತ್ತು ಬೆನ್ನಲ್ಲಿ ಬಣ್ಣಬಣ್ಣದ ಝೂಲ್ ಮತ್ತು ಬೆಲೆಬಾಳುವ ಶಾಲು, ಹಣೆಗೆ ರಂಗುರಂಗಿನ ಹಗ್ಗಗಳಿಂದ ತಯಾರಿಸಿದ ಬಾಸಿಂಗ್ ತೊಡಿಸುವರು. ಗುಗ್ಗರಿ ಮತ್ತಿತರ ದ್ರವ ಪದಾರ್ಥ ನೀಡುವರಲ್ಲದೇ ಎತ್ತುಗಳ ನಿಯಂತ್ರಣಕ್ಕಾಗಿ ಬಳಸಲಾಗುವ ನೊಗದ ಹಗ್ಗವನ್ನು ಬದಲಾಯಿಸುವರು. ಮಧ್ಯಾಹ್ನದವರೆಗೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮತ್ತು ಹನುಮಂತನ ದರ್ಶನ ಮಾಡಿಸುವರು. ಬಳಿಕ ಮನೆಯಲ್ಲಿ ಮುತ್ತೆ„ದೆಯರು ಪೂಜಿಸುವರಲ್ಲದೆ ಎತ್ತುಗಳಿಗೆ ಬೆಲ್ಲ ಮತ್ತು ತುಪ್ಪದೊಂದಿಗೆ ಹೂರಣ ಹೋಳಿಗೆ, ಕರ್ಚೇಕಾಯಿ ಮುಂತಾದ ಮೃಷ್ಠಾನ್ನ ಭೋಜನ ಮಾಡಿಸುವರು. ಎತ್ತುಗಳ ಪೂಜೆ ಮಾಡುವ ರೈತರು ಈ ದಿನದಂದು ಉಪವಾಸವಿದ್ದು, ಎತ್ತುಗಳಿಗೆ ಉಣಬಡಿಸಿದ ಬಳಿಕವೇ ಊಟ ಮಾಡುತ್ತಾರೆ. ಈ ಹಬ್ಬದಂದು ಸಂಜೆ ಆಯಾ ಗ್ರಾಮದ 40-50 ಜೋಡಿ ಎತ್ತುಗಳನ್ನು ಸಣ್ಣಬಂಡಿಗೆ ಜೋಡಿಸಿ ಊರಲ್ಲಿ ವಾದ್ಯಮೇಳದೊಂದಿಗೆ ಜರುಗುವ ಆಕರ್ಷಕ ಮೆರವಣಿಗೆಯಲ್ಲಿ ಹಲವರು ಹರ್ಷೋಲ್ಲಾಸದಿಂದ ಕುಣಿದು ಕುಪ್ಪಳಿಸುತ್ತಾರೆ. ಗ್ರಾಮದ ಮುಖಂಡರು ಊರಿನ ಅಗಸಿ ಬಾಗಿಲಿನಲ್ಲಿ ಕರಿ ಕಡಿದ ನಂತರ ಎತ್ತುಗಳ ಓಟ ಪ್ರಾರಂಭವಾಗುತ್ತದೆ
Advertisement