Advertisement

ಧ್ಯಾನಚಂದ್‌ ವಿಶ್ವಕಪ್‌ ಹೊತ್ತಿನಲ್ಲಿ ಹಾಕಿ ದೇವರ ನೆನಪು

10:42 AM Nov 27, 2018 | Harsha Rao |

ಭಾರತೀಯ ಹಾಕಿ ಆಟಗಾರ ಮೇಜರ್‌ ಧ್ಯಾನ್‌ಚಂದ್‌, ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವ ಹಾಕಿ ಕ್ಷೇತ್ರಕ್ಕೇ ಚಂದ್ರನೆಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ಆಟದಲ್ಲಿ ಅವರಿಗಿದ್ದ ತಂತ್ರಗಾರಿಕೆ, ಪಾದರಸದಂತಹ ಚುರುಕುತನ ಅಪೂರ್ವವಾದದ್ದು. ಹತ್ತು ಆಟಗಾರರು ಎದುರಿಗೆ ಬಂದರೂ, ಕ್ಷಣಾರ್ಧದಲ್ಲಿ ಅವರ ಕಣ್ತಪ್ಪಿಸಿ ಚೆಂಡನ್ನು ಗೋಲು ಪೆಟ್ಟಿಗೆಯೊಳಕ್ಕೆ ಸೇರಿಸುವ ಅವರ ಚಾಕಚಕ್ಯತೆ ಅನನ್ಯ. ಇದನ್ನು ತೋರ್ಪಡಿಸಿದ ಮತ್ತೂಬ್ಬ ಆಟಗಾರ ವಿಶ್ವ ಹಾಕಿಯಲ್ಲಿ ಇನ್ನೂ ಹುಟ್ಟಿಬಂದಿಲ್ಲ ಎಂಬುದು ಉತ್ಪ್ರೇಕ್ಷೆಯಲ್ಲ. ಜೀವಮಾನದಲ್ಲಿ ಅವರು ಗಳಿಸಿದ 400 ಗೋಲುಗಳ ದಾಖಲೆಯನ್ನು ಈಗಲೂ ಮುರಿಯಲು ಸಾಧ್ಯವಾಗಿಲ್ಲ.

Advertisement

ಆರಂಭಿಕ ವೃತ್ತಿಜೀವನ
ಭಾರತೀಯ ಸೇನೆಗೆ 16ನೇ ವಯಸ್ಸಿಗೆ ಸೇರ್ಪಡೆಗೊಂಡ ಧ್ಯಾನ್‌ಚಂದ್‌, 1922ರಿಂದ 1926ರವರೆಗೆ ಮಿಲಿಟರಿಯೊಳಗೇ ವಿಭಾಗೀಯ ಮಟ್ಟದಲ್ಲಿ ಹಾಕಿ ಆಡಿದರು. ಆಗಲೇ ಅವರ ಹಾಕಿ ಪ್ರತಿಭೆ ಜಗಜ್ಜಾಹೀರಾಗಿದ್ದರಿಂದ, ಅವರಿಗೆ ಭಾರತೀಯ ಸೇನೆಯ ಹಾಕಿ ತಂಡದಲ್ಲಿ ಸುಲಭವಾಗಿ ಸ್ಥಾನ ಸಿಕ್ಕಿತು. 1928ರಲ್ಲಿ
ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಹೊರಟ ಭಾರತೀಯ ಹಾಕಿ ತಂಡದಲ್ಲಿದ್ದ ಧ್ಯಾನ್‌ಚಂದ್‌ ಅಲ್ಲಿ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರ ಆಟವನ್ನು ಗಮನಿಸಿದ ವಿದೇಶಿ ಮಾಧ್ಯಮಗಳು ಇವರನ್ನು ಹಾಡಿ ಹೊಗಳಿದವು. ಅದು ಅವರ ಅಂತಾರಾಷ್ಟ್ರೀಯ ಖ್ಯಾತಿಗೆ ನಾಂದಿ ಹಾಡಿತು. 

ಅನನ್ಯ ಪ್ರತಿಭೆ
ಧ್ಯಾನ್‌ಚಂದ್‌ ಅವರು ಭಾಗವಹಿಸಿದ್ದು ಮೂರು ಒಲಿಂಪಿಕ್ಸ್‌ನಲ್ಲಿ. 1928, 1932 ಹಾಗೂ 1936ರ ಒಲಿಂಪಿಕ್ಸ್‌ಗಳಲ್ಲಿ ಅವರು ತೋರಿದ ಪ್ರದರ್ಶನ ನೋಡಿ ವಿದೇಶಗಳ ಹಾಕಿ ಪಂಡಿತರೇ ದಂಗಾದರು. 1932ರಲ್ಲಿ ಅಮೆರಿಕವನ್ನು 24-1
ಗೋಲುಗಳ ಅಂತರದಿಂದ ಬಗ್ಗು ಬಡಿದ ಭಾರತ ತಂಡ, ಹೊಸ ವಿಶ್ವದಾಖಲೆ (ಈ ದಾಖಲೆ 2003ರಲ್ಲಿ ಮುರಿಯಲ್ಪಟ್ಟಿದೆ) ಬರೆಯಿತು. ಆ ಪಂದ್ಯದಲ್ಲಿ ಧ್ಯಾನ್‌ ಚಂದ್‌, 8 ಗೋಲು ದಾಖಲಿಸಿದ್ದರು.

 

Advertisement

ಚಾಂದ್‌ ಹೆಸರು ಹೇಗೆ ಬಂತು?
ವಾಸ್ತವವಾಗಿ ಧ್ಯಾನ್‌ ಚಂದ್‌ ಅವರ ನಿಜವಾದ ಹೆಸರು ಧ್ಯಾನ್‌ ಸಿಂಗ್‌. ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರಿಂದ ಹಾಕಿ ಅಭ್ಯಾಸವನ್ನು ಹಗಲಿನ ಪಾಳಿಯ ಕರ್ತವ್ಯ ಮುಗಿಸಿ ರಾತ್ರಿಯೇ ಕೈಗೊಳ್ಳಬೇಕಿರುತ್ತಿತ್ತು. ಆಗೆಲ್ಲಾ ಫ್ಲಡ್‌ಲೈಟ್‌ ವ್ಯವಸ್ಥೆ ಇಲ್ಲದ ಕಾಲ. ಹಾಗಾಗಿ, ಪ್ರತಿದಿನ ರಾತ್ರಿ ಮೂಡಿ ಬರುವ ಚಂದ್ರನನ್ನೇ ಕಾದು
ಕುಳಿತು ಚಂದ್ರನ ಬೆಳಕು ಮೈದಾನದ ಮೇಲೆ ಹರಡಿದಾಗಲೇ ಅವರು ಅಭ್ಯಾಸಕ್ಕಿಳಿಯುತ್ತಿದ್ದರು. ಇದನ್ನು ಗಮನಿಸಿದ ಅವರ ಸಹ ಆಟಗಾರರು ಅವರಿಗೆ ಧ್ಯಾನ್‌ ಚಾಂದ್‌ (ಹಿಂದಿಯಲ್ಲಿ ಚಾಂದ್‌ ಎಂದರೆ ಚಂದ್ರ) ಎಂದು
ಕರೆಯಲಾರಂಭಿಸಿದರು. ಕ್ರಮೇಣ ಅದು ಧ್ಯಾನ್‌ ಚಂದ್‌ ಆಯಿತು. 

ಜೈತ್ರಯಾತ್ರೆ
ಹಲವಾರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಧ್ಯಾನ್‌ ಚಂದ್‌ ಅವರ ಅನನ್ಯತೆ ಅನಾವರಣಗೊಳ್ಳುತ್ತಿರುವಾಗಲೇ 1935ರಲ್ಲಿ ಧ್ಯಾನ್‌ಚಂದ್‌ ಅವರಲ್ಲಿ ಅಡಗಿದ್ದ ದೈತ್ಯ ಶಕ್ತಿಯೊಂದು ಅನಾವರಣಗೊಂಡಿತು. ಆ ವರ್ಷ ಭಾರತ ಸೇರಿದಂತೆ, ನ್ಯೂಜಿಲೆಂಡ್‌, ಶ್ರೀಲಂಕಾ, ಆಸ್ಟ್ರೇಲಿಯಗಳಲ್ಲಿ ನಡೆದಿದ್ದ 48 ಪಂದ್ಯಗಳಲ್ಲಿ ಭಾರತ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿತ್ತು. ಆ 48 ಪಂದ್ಯಗಳಲ್ಲಿ ಭಾರತ ದಾಖಲಿಸಿದ್ದ ಒಟ್ಟು ಗೋಲುಗಳ ಸಂಖ್ಯೆ 584. ಇಷ್ಟು ಪಂದ್ಯಗಳಲ್ಲಿ ಧ್ಯಾನ್‌ಚಂದ್‌ ಆಡಿದ್ದು ಕೇವಲ 23 ಪಂದ್ಯಗಳಲ್ಲಾದರೂ, ಇಷ್ಟರಲ್ಲೇ ಅವರು ಗಳಿಸಿದ್ದು 201 ಗೋಲು! 

ನಾಯಕನಾಗಿಯೂ ಯಶಸ್ವಿ
1934ರಲ್ಲಿ ಆವರೆಗೆ ಭಾರತೀಯ ಹಾಕಿ ತಂಡದ ನಾಯಕರಾಗಿದ್ದ ಮನಾವದಾರ್‌ನ ನವಾಬ್‌ ಅವರು ತಂಡದ ನಾಯಕರಾಗಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಧ್ಯಾನ್‌ಚಂದ್‌ ಅವರಿಗೆ ತಂಡದ ನಾಯಕತ್ವ ವಹಿಸಲಾಯಿತು. ಅದರ ಮರುವರ್ಷವೇ ನಡೆದಿದ್ದ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಚಿನ್ನದ ಗುರಿಯೆಡೆಗೆ ಯಶಸ್ವಿಯಾಗಿ ಕೊಂಡೊಯ್ದಿದ್ದರು ಧ್ಯಾನ್‌ಚಂದ್‌. ಒಲಿಂಪಿಕ್ಸ್‌ ಮಾತ್ರವಲ್ಲದೆ, ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ತಮ್ಮ ಸಾಹಸಮಯ ಪ್ರದರ್ಶನದೊಂದಿಗೆ ತಂಡವನ್ನೂ ಉನ್ನತಿಗೆ ಕೊಂಡೊಯ್ದರು. 

ಪ್ರಮುಖ ಗೌರವಗಳು
– ಭಾರತ ಸರ್ಕಾರದಿಂದ 1956ರಲ್ಲಿ ಪದ್ಮ ಭೂಷಣ ಪ್ರದಾನ
– ಧ್ಯಾನ್‌ಚಂದ್‌ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಣೆ
– ದೆಹಲಿಯ ನ್ಯಾಷನಲ್‌ ಸ್ಟೇಡಿಯಂಗೆ ಧ್ಯಾನ್‌ಚಂದ್‌ ಹೆಸರು
– 2012ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರದಿಂದ “ಜೆಮ್‌ ಆಫ್ ಇಂಡಿಯಾ’ ಪ್ರಶಸ್ತಿ
– ಕ್ರೀಡಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿಗೆ ಧ್ಯಾನ್‌ ಚಂದ್‌ ಹೆಸರು
– ಲಂಡನ್‌ನಲ್ಲಿನ ಇಂಡಿಯನ್‌ ಜಿಮ್‌ ಖಾನಾಕ್ಕೆ ಧ್ಯಾನ್‌ಚಂದ್‌ ಹೆಸರು
– ಭಾರತ ಸರ್ಕಾರದಿಂದ ಅಂಚೆ ಚೀಟಿ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next