Advertisement
ಮನ್‌ಪ್ರೀತ್ ಸಿಂಗ್ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಭಾರತದ ಪಾಲಿಗೆ ಇದು ಮತ್ತೂಮ್ಮೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಎದುರಾಗಿರುವ ಸುವರ್ಣಾವಕಾಶ. ಜತೆಗೆ ತವರಿನಲ್ಲೇ ಎದುರಾಗುತ್ತಿರುವ ಅಗ್ನಿಪರೀಕ್ಷೆಯೂ ಹೌದು. ಶುಕ್ರವಾರದ ಮೊದಲ ಪಂದ್ಯದಲ್ಲೇ ಭಾರತ ತಂಡ ಹಾಲಿ ಚಾಂಪಿಯನ್ ಖ್ಯಾತಿಯ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.
ವಿಶ್ವದ ನಂ.2 ತಂಡವಾಗಿರುವ ಆಸ್ಟ್ರೇಲಿಯ ವಿರುದ್ಧ ಭಾರತ ಇತ್ತೀಚಿನ ವರ್ಷಗಳಲ್ಲಿ ಗೆಲುವಿನ ರುಚಿ ಸವಿದದ್ದಿಲ್ಲ. ಕಳೆದ ಚಾಂಪಿಯನ್ಸ್ ಟ್ರೋಫಿ, ಸುಲ್ತಾನ್ ಅಜ್ಲಾನ್ ಷಾ ಹಾಕಿ ಹಾಗೂ ಕಾಮನ್ವೆಲ್ತ್ ಗೇಮ್ಸ್ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಕ್ಕೆ ಶರಣಾಗಿದೆ. ಹೀಗಾಗಿ ನೂತನ ಕೋಚ್ ಶೋರ್ಡ್ ಮರಿನ್ ಮುಂದೆ ಭಾರೀ ದೊಡ್ಡ ಸವಾಲಿದೆ. ಢಾಕಾದಲ್ಲಿ ನಡೆದ ಏಶ್ಯ ಕಪ್ ಪಂದ್ಯಾವಳಿಯಲ್ಲಿ ಮೊದಲ ಸಲ ಭಾರತದ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ ಶೋರ್ಡ್ ಮರಿನ್ ಇದರಲ್ಲಿ ಧಾರಾಳ ಯಶಸ್ಸು ಕಂಡಿರಬಹುದು. ಆದರೆ ಹಾಕಿ ಕೂಟವೊಂದು ಏಶ್ಯದಿಂದ ವಿಶ್ವ ಮಟ್ಟಕ್ಕೆ ವಿಸ್ತರಿಸಿಕೊಳ್ಳುವಾಗ ಎದುರಾಗುವ ಸವಾಲು ನಿಜಕ್ಕೂ ಕಠಿನ. ಇಲ್ಲಿನ ಒಂದೊಂದು ತಂಡವೂ ಜಾಗತಿಕ ಮಟ್ಟದಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಲು ಹೆಸರುವಾಸಿ. ಅಲ್ಲದೇ ಮುಂದಿನ ವರ್ಷ ಏಶ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಹಾಕಿ ವಿಶ್ವಕಪ್ ಪಂದ್ಯಾವಳಿ ಕಾದು ಕುಳಿತಿರುವಾಗ ಭಾರತವನ್ನು ವಿಶ್ವ ಮಟ್ಟದ ಹೋರಾಟಕ್ಕೆ ಅಣಿಗೊಳಿಸಲು ಮರಿನ್ ಭುವನೇಶ್ವರದಿಂದಲೇ ಹೋರಾಟದ ಸ್ಕೆಚ್ ರೂಪಿಸಬೇಕಾಗುತ್ತದೆ.
Related Articles
Advertisement
ರೋಲ್ಯಾಂಟ್ ಓಲ್ಟಮನ್ಸ್ ಜಾಗಕ್ಕೆ ಬಂದ ಶೋರ್ಡ್ ಮರಿನ್, ಭಾರತೀಯ ಹಾಕಿ ಆಟಗಾರರಿಗೆ ಆರಂಭದಿಂದಲೇ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಕೋಚ್ ಎಂಬುದನ್ನು ಮರೆಯುವಂತಿಲ್ಲ. ಆಟಗಾರರಿಗೆ ಅವರದೇ ಶೈಲಿಯಲ್ಲಿ ಆಡಲು ಅವಕಾಶ ಕಲ್ಪಿಸಿದ್ದರ ಫಲವಾಗಿ ಭಾರತಕ್ಕೆ 10 ವರ್ಷಗಳ ಬಳಿಕ ಏಶ್ಯ ಕಪ್ ಒಲಿಯಿತು ಎಂದು ವಿಶ್ಲೇಷಿಸಲಾಗುತ್ತದೆ. ವಿಶ್ವ ಹಾಕಿ ಫೈನಲ್ಸ್‌ನಲ್ಲಿ ಮರಿನ್ ಇದೇ ತಂತ್ರವನ್ನು ಮುಂದುವರಿಸುವ ಸಾಧ್ಯತೆ ಇದೆ.
“ಡೈನಾಮಿಕ್ ಆಟಗಾರ’ನೆಂದೇ ಗುರುತಿಸಲ್ಪಡುವ ನಾಯಕ ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತೀಯ ತಂಡ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಸಮತೋಲನದಿಂದ ಕೂಡಿದೆ. ಹರ್ಮನ್‌ಪ್ರೀತ್, ಸುಮಿತ್, ದೀಪ್ಸನ್, ಗುರ್ಜಂತ್, ವರುಣ್ ಕುಮಾರ್ ಅವರೆಲ್ಲ ತಂಡದ ಪ್ರತಿಭಾನ್ವಿತ ಯುವ ಆಟಗಾರರು. ಕಳೆದ ವರ್ಷದ ಜೂನಿಯರ್ ವಿಶ್ವಕಪ್‌ನಲ್ಲಿ ಭರವಸೆಯ ಆಟವಾಡಿದ ಛಾತಿ ಇವರದು. ಅನುಭವಿಗಳಾದ ರೂಪಿಂದರ್ ಪಾಲ್, ಲಾಕ್ರಾ ಗಾಯದಿಂದ ಚೇತರಿಸಿಕೊಂಡು ಬಹಳ ಸಮಯದ ಬಳಿಕ ತಂಡಕ್ಕೆ ಮರಳಿದ್ದಾರೆ.
ಆಸೀಸ್ ಫೇವರಿಟ್ಆಸ್ಟ್ರೇಲಿಯ ಕೂಡ ನೂತನ ತರಬೇತುದಾರನ ಸೇವೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ನ್ಯೂಜಿಲ್ಯಾಂಡ್ ತಂಡದ ಪರ ಉತ್ತಮ ನಿರ್ವಹಣೆ ತೋರಿದ ಕಾಲಿನ್ ಬ್ಯಾಚ್ ಈಗ ಕಾಂಗರೂ ಕೋಚ್ ಆಗಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡ ಸಹಜವಾಗಿಯೇ ಆಸ್ಟ್ರೇಲಿಯದ ಮೇಲಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 6ನೇ ಸ್ಥಾನಕ್ಕೆ ಕುಸಿದುದನ್ನು ಬಿಟ್ಟರೆ ಕಳೆದ 4 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯ ವಿಶ್ವ ಹಾಕಿಯಲ್ಲಿ ತನ್ನ ಪ್ರಭುತ್ವ ಉಳಿಸಿಕೊಂಡು ಬಂದಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಶುಕ್ರವಾರದ ಪಂದ್ಯದಲ್ಲಿ ಆಸ್ಟ್ರೇಲಿಯವೇ ನೆಚ್ಚಿನ ತಂಡವಾಗಿ ಗುರುತಿಸಲ್ಪಡುತ್ತಿದೆ. ಭಾರತದ ಪಂದ್ಯಗಳು
ದಿನಾಂಕ ಪಂದ್ಯ ಸಮಯ
ಡಿ. 1 ಭಾರತ-ಆಸ್ಟ್ರೇಲಿಯ ಸಂಜೆ 7.30
ಡಿ. 2 ಭಾರತ-ಇಂಗ್ಲೆಂಡ್ ಸಂಜೆ 7.30
ಡಿ. 4 ಭಾರತ-ಜರ್ಮನಿ ಸಂಜೆ 7.30 “ಎ’ ವಿಭಾಗ: ಆರ್ಜೆಂಟೀನಾ, ಬೆಲ್ಜಿಯಂ, ಹಾಲೆಂಡ್, ಸ್ಪೇನ್
“ಬಿ’ ವಿಭಾಗ: ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ಜರ್ಮನಿ ಭಾರತ ತಂಡ:
ಗೋಲ್ ಕೀಪರ್: ಆಕಾಶ್ ಚಿಕ್ತೆ, ಸೂರಜ್ ಕರ್ಕೇರ.
ಡಿಫೆಂಡರ್: ದೀಪ್ಸನ್ ಟಿರ್ಕಿ, ಅಮಿತ್ ರೋಹಿದಾಸ್, ವರುಣ್ ಕುಮಾರ್, ಬೀರೇಂದ್ರ ಲಾಕ್ರಾ, ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್.
ಮಿಡ್‌ಫಿàಲ್ಡರ್: ಮನ್‌ಪ್ರೀತ್ ಸಿಂಗ್ (ನಾಯಕ), ಎಸ್.ಕೆ. ಉತ್ತಪ್ಪ, ಚಿಂಗ್ಲೆನ್ಸನಾ ಸಿಂಗ್ (ಉಪನಾಯಕ), ಸುಮಿತ್, ಕೊಥಜಿತ್ ಸಿಂಗ್.
ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಗುರ್ಜಂತ್ ಸಿಂಗ್, ಎಸ್.ವಿ. ಸುನೀಲ್, ಮನ್‌ದೀಪ್ ಸಿಂಗ್.