Advertisement
ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ತಂಡ ಕಂಚು ಗೆದ್ದಿದ್ದರಿಂದ ತಂಡದ ಮೇಲಿನ ನಿರೀಕ್ಷೆ ವಿಪರೀತವಾಗಿತ್ತು. ಆತಿಥೇಯ ತಂಡವೇ ಆಗಿರುವುದರಿಂದ ಕಪ್ ಗೆದ್ದರೂ ಅಚ್ಚರಿಯಿಲ್ಲ ಎಂದು ವರ್ಣಿಸಲಾಗಿತ್ತು. ನಡೆದಿದ್ದು ಮಾತ್ರ ತೀರಾ ವ್ಯತಿರಿಕ್ತ ಘಟನೆ. ಭಾರತ ಲೀಗ್‌ನಲ್ಲಿ 2ನೇ ಸ್ಥಾನಿಯಾಗಿ ಕ್ರಾಸ್ ಓವರ್ ಪಂದ್ಯಕ್ಕೆ ಹೋಯಿತು. ಇಲ್ಲಿಂದಲೇ ನಾಕೌಟ್ ಶುರು. ಇಲ್ಲಿ ಗೆದ್ದರೆ ಮುಂದಿನಹಂತಕ್ಕೆ, ಸೋತರೆ ಹಾಗೆಯೇ ಮನೆಗೆ. ಭಾರತದ ಪರಿಸ್ಥಿತಿ ಹಾಗೆಯೇ ಆಯಿತು. ಸರಾಸರಿ ತಂಡ ಎಂದು ಕರೆಸಿಕೊಂಡಿದ್ದ ನ್ಯೂಜಿಲೆಂಡ್ ಎದುರು ಸೋತು ಮಣಿದಿದೆ. ಇದಕ್ಕೇನು ಕಾರಣವೆಂದು ಗೊತ್ತಾಗುವುದಕ್ಕೆ ಬಹಳ ಸಮಯಬೇಕು.
ನಿಗದಿತ ಅವಧಿಯಲ್ಲಿ ಪಂದ್ಯ 3-3ರಿಂದ ಸಮಗೊಂಡಿತು. ವಸ್ತುಸ್ಥಿತಿಯಲ್ಲಿ ಭಾರತವೇ ಮುನ್ನಡೆಯಲ್ಲಿತ್ತು. ಕೊನೆಯಹಂತದಲ್ಲಿ ಒತ್ತಡಕ್ಕೆ ಮಣಿಯುವ ಗುಣ ಇಲ್ಲಿ ಎಡವಟ್ಟಿಗೆ ಕಾರಣವಾಯಿತು. ಪಂದ್ಯದ 17ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಫೀಲ್ಡ್ ಗೋಲು ಬಾರಿಸಿದರು. 24ನೇ ನಿಮಿಷದಲ್ಲಿ ಸುಖಜೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ಭಾರತ 2-0 ಮುನ್ನಡೆ ಸಾಧಿಸಿತ್ತು. ಈ ಹಂತದಲ್ಲಿ ತಂಡಕ್ಕೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದಷ್ಟೇ ಸಂಭ್ರಮವಿತ್ತು. 28ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಪರ ಲೇನ್ ಸ್ಯಾಮ್ ಫೀಲ್ಡ್ ಗೋಲು ಬಾರಿಸಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದರು. 40ನೇ ನಿಮಿಷದಲ್ಲಿ ಭಾರತದ ವರುಣ್ ಕುಮಾರ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಸಿಡಿಸಿದರು. ಭಾರತದ ಮುನ್ನಡೆ 3-1ಕ್ಕೇರಿತು. ಮತ್ತೆ ಮೂರೇ ನಿಮಿಷದಲ್ಲಿ ಕಿವೀಸ್ ತಿರುಗಿಬಿತ್ತು. ಆ ತಂಡದ ರಸೆಲ್ ಕೇನ್ (43), ಫಿಂಡ್ಲೆ ಶಾನ್ (49) ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್ ಗೋಲು ಬಾರಿಸಿದರು. ಪಂದ್ಯ ಅಚ್ಚರಿಯ ರೀತಿಯಲ್ಲಿ ಸಮಗೊಂಡಿತು. ಇದರೊಂದಿಗೆ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ದೋಷ ಮತ್ತೂಮ್ಮೆ ಸಾಬೀತಾಯಿತು.
Related Articles
ಶೂಟೌಟ್ ಎರಡೂ ತಂಡಗಳಿಗೆ ದೊಡ್ಡ ತಲೆನೋವಾಯಿತು. ಗೋಲ್‌ಕೀಪರ್‌ಗಳು ಅದ್ಭುತ ಪ್ರದರ್ಶನ ತೋರಿದ್ದರಿಂದ ಇತ್ತಂಡಗಳು ಪರದಾಡಿದವು. ಭಾರತದ ಕೃಷ್ಣ ಬಹಾದ್ದೂರ್ ಪಾಠಕ್, ಕಿವೀಸ್‌ನ ಹೇವಾರ್ಡ್ ಲಿಯೋನ್ ಮುನ್ಪಡೆ ಆಟಗಾರರನ್ನು ಬೆಚ್ಚಿಬೀಳಿಸಿದರು. ನಿಗದಿತ ಐದು ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಇತ್ತಂಡಗಳು ತಲಾ 3 ಗೋಲು ಹೊಡೆದವು. ಆಗ ಹೆಚ್ಚುವರಿ ತಲಾ 4 ಶೂಟೌಟ್‌ಗಳು ನಡೆದವು. ಅಲ್ಲಿ ಕಿವೀಸ್ 2, ಭಾರತ ಒಮ್ಮೆ ಯಶಸ್ಸು ಸಾಧಿಸಿತು.
Advertisement