ಹೊಸದಿಲ್ಲಿ: ಭುವನೇಶ್ವರದಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ ವರದಿಗಾಗಿ ಭಾರತದ ವೀಸಾಕ್ಕೆ ಅರ್ಜಿ ಸಲ್ಲಿಸಿದ ಪಾಕಿಸ್ಥಾನ ಪತ್ರಕರ್ತರಿಗೆ ನಿರಾಸೆಯಾಗಿದೆ. ಇವರ ಅರ್ಜಿಗಳು ತಿರಸ್ಕೃತಗೊಂಡಿವೆ.
“ಏಳು ಪತ್ರಕರ್ತರು ಅರ್ಜಿ ಸಲ್ಲಿಸಿದ್ದರು. ಆದರೆ ಒಬ್ಬರಿಗೂ ವೀಸಾ ದೊರಕಿಲ್ಲ’ ಎಂದು ಪಾಕಿಸ್ಥಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ಕಾರ್ಯದರ್ಶಿ ಶಹಬಾಜ್ ಅಹ್ಮದ್ ತಿಳಿಸಿದ್ದಾರೆ.
“ಪತ್ರಕರ್ತರಿಗೆ ವೀಸಾ ತಿರಸ್ಕರಿಸಿದ್ದೇಕೆ? ಪತ್ರಕರ್ತರು ಪಾಕಿಸ್ಥಾನ-ಭಾರತದ ನಡುವಿನ ಅಂತರವನ್ನು ಕಡಿಮೆಗೊಳಿಸುವವರು. ಹಾಕಿ ವಿಶ್ವಕಪ್ ಕೂಟವನ್ನು ವರದಿ ಮಾಡಲು ಅವರು ಇಚ್ಛಿಸಿದ್ದರು’ ಎಂದು ಮತ್ತೋರ್ವ ಪಿಎಚ್‌ಎಫ್ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ “ಯಂಗ್ ನ್ಪೋರ್ಟ್ಸ್ ಜರ್ನಲಿಸ್ಟ್ ತರಬೇತಿ ಕಾರ್ಯಕ್ರಮ’ಕ್ಕಾಗಿ ಭಾರತಕ್ಕೆ ಬರಲು ಸಿದ್ಧರಾಗಿದ್ದ ಕರಾಚಿ ಹಾಗೂ ಪೇಶಾವರದ ಇಬ್ಬರು ಯುವ ಕ್ರೀಡಾ ಪತ್ರಕರ್ತರ ವೀಸಾ ಕೂಡ ತಿರಸ್ಕೃತಗೊಂಡಿವೆ.
ಅಂತಾರಾಷ್ಟ್ರೀಯ ನ್ಪೋರ್ಟ್ಸ್ ಪ್ರಸ್ ಅಸೋಸಿಯೇಶನ್‌ನ ಅನುಮತಿಯೊಂದಿಗೆ ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಶನ್ (ಎಸ್‌ಜಿಎಫ್ಐ) ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅಫ್ಘಾನಿಸ್ಥಾನ, ಪಾಕಿಸ್ಥಾನ, ನೇಪಾಲ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಮಲೇಶ್ಯದ ಯುವ ಪತ್ರಕರ್ತರನ್ನು ಆಹ್ವಾನಿಸಿತ್ತು.
“ಪಾಕಿಸ್ಥಾನದ ಅರ್ಜಿಗಳನ್ನು ಮಾತ್ರ ತಿರಸ್ಕರಿಸಲಾಗಿದೆ. ಏಕೆ ವೀಸಾ ನೀಡಲಿಲ್ಲ ಎಂಬುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಎಸ್‌ಜಿಎಫ್ಐನ ಅಂತಾರಾಷ್ಟ್ರೀಯ ವ್ಯವಹಾರಗಳ ಅಧ್ಯಕ್ಷ ಹಾಗೂ ಎಐಪಿಎಸ್ ಉಪಾಧ್ಯಕ್ಷ ಎಸ್. ಸಬಾ ನಾಯಕನ್ ಹೇಳಿದ್ದಾರೆ.