Advertisement

ವಿಶ್ವಕಪ್‌ ಹಾಕಿ: ವೇಲ್ಸ್‌  ವಿರುದ್ಧ ಬೇಕಿದೆ ದೊಡ್ಡ ವಿಜಯ

12:03 AM Jan 19, 2023 | Team Udayavani |

ಭುವನೇಶ್ವರ: ವಿಶ್ವಕಪ್‌ ಹಾಕಿ ಪಂದ್ಯಾವಳಿಯ “ಡಿ’ ವಿಭಾಗದ ಅಂತಿಮ ಲೀಗ್‌ ಪಂದ್ಯದಲ್ಲಿ ಆತಿ ಥೇಯ ಭಾರತ ಗುರುವಾರ ವೇಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ನೇರ ಕ್ವಾರ್ಟರ್‌ ಫೈನಲ್‌ ಪ್ರವೇಶ ಪಡೆಯಲು ಭಾರತದ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ.

Advertisement

“ಡಿ’ ವಿಭಾಗದ ಇನ್ನೊಂದು ಪಂದ್ಯ ಇಂಗ್ಲೆಂಡ್‌ ಮತ್ತು ಸ್ಪೇನ್‌ ನಡುವೆ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್‌ ಈ ವಿಭಾಗದ ಅಜೇಯ ತಂಡಗಳಾಗಿವೆ. ಹರ್ಮನ್‌ಪ್ರೀತ್‌ ಪಡೆ ಸ್ಪೇನ್‌ ವಿರುದ್ಧ 2-0 ಗೆಲುವಿನ ಆರಂಭ ಕಂಡ ಬಳಿಕ ಇಂಗ್ಲೆಂಡ್‌ ವಿರುದ್ಧ ಗೋಲ್‌ಲೆಸ್‌ ಡ್ರಾ ಸಾಧಿಸಿತ್ತು. ಇನ್ನೊಂದೆಡೆ ಇಂಗ್ಲೆಂಡ್‌ ತಂಡ 5-0 ಅಂತರದಿಂದ ವೇಲ್ಸ್‌ಗೆ ಆಘಾತವಿಕ್ಕಿತ್ತು. ಹೀಗಾಗಿ ಗೋಲ್‌ ವ್ಯತ್ಯಾಸದಲ್ಲಿ ಮುಂದಿರುವ ಇಂಗ್ಲೆಂಡ್‌ ಸದ್ಯ ಅಂಕಪಟ್ಟಿಯ ಅಗ್ರಸ್ಥಾನಿಯಾಗಿದೆ.

ಇಂಗ್ಲೆಂಡ್‌ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಬೇಕಾದರೆ ವೇಲ್ಸ್‌ ವಿರುದ್ಧ ಭಾರತ ಭಾರೀ ಅಂತರದ ಜಯವನ್ನು ಕಾಣಬೇಕಿದೆ. ಇಲ್ಲವೇ ಇಂಗ್ಲೆಂಡ್‌-ಸ್ಪೇನ್‌ ನಡುವಿನ ಪಂದ್ಯ ಡ್ರಾಗೊಳ್ಳಬೇಕು, ಅಥವಾ ಇಂಗ್ಲೆಂಡ್‌ ಸೋಲಬೇಕು.

ಗುರುವಾರ ಇಂಗ್ಲೆಂಡ್‌-ಸ್ಪೇನ್‌ ಪಂದ್ಯ ಮೊದಲು ನಡೆಯುವುದರಿಂದ ಕೊನೆಯಲ್ಲಿ ಕಣಕ್ಕಿಳಿಯುವ ಭಾರತಕ್ಕೆ ಲೆಕ್ಕಾಚಾರದ ಆಟವಾಡುವ ಅವಕಾಶ ಲಭಿಸುತ್ತದೆ. ಇಂಗ್ಲೆಂಡ್‌ನ‌ ಗೆಲುವಿನ ಅಂತರವನ್ನು ಅವಲಂಬಿಸಿ ಭಾರತ ಗೋಲು ಸಿಡಿಸಬೇಕಾಗುತ್ತದೆ.

ಕ್ರಾಸ್‌ ಓವರ್‌ ಸುತ್ತು
ಲೀಗ್‌ ಹಂತದಲ್ಲಿ ಮೊದಲ ಸ್ಥಾನಿಯಾದ ತಂಡ ನೇರವಾಗಿ ಕ್ವಾ ರ್ಟರ್‌ ಫೈನಲ್‌ ಪ್ರವೇಶಿಸಲಿದೆ. ಒಂದು ವೇಳೆ ಭಾರತ ದ್ವಿತೀಯ ಸ್ಥಾನದಲ್ಲೇ ಮುಂದುವರಿದರೆ ಆಗ “ಕ್ರಾಸ್‌ ಓವರ್‌’ ಸುತ್ತಿನಲ್ಲಿ ಆಡಬೇಕಾಗುತ್ತದೆ. ಅಲ್ಲಿ “ಸಿ’ ವಿಭಾಗದ 3ನೇ ಸ್ಥಾನಿಯನ್ನು ಎದುರಿಸಿ ಗೆಲುವು ಸಾಧಿಸಬೇಕಾಗುತ್ತದೆ. ಈ ಸುತ್ತಿನಲ್ಲಿ ನ್ಯೂಜಿಲ್ಯಾಂಡ್‌ ಅಥವಾ ಮಲೇಷ್ಯಾ ಎದುರಾಗಬಹುದು ಎಂಬುದು ಸದ್ಯದ ಲೆಕ್ಕಾಚಾರ.

Advertisement

ಭಾರತ ತನ್ನೆರಡೂ ಪಂದ್ಯಗಳನ್ನು ರೂರ್ಕೆಲದಲ್ಲಿ ಆಡಿತ್ತು. ಗುರುವಾರ ಮೊದಲ ಸಲ ಭುವನೇಶ್ವರದ “ಕಳಿಂಗ ಸ್ಟೇಡಿಯಂ’ನಲ್ಲಿ ಕಣಕ್ಕಿಳಿಯಲಿದೆ.

ವ್ಯರ್ಥವಾಗುತ್ತಿದೆ ಪಿ.ಸಿ.
ಭಾರತ ದೊಡ್ಡ ಅಂತರದ ಗೆಲುವು ಸಾಧಿಸಬೇಕಾದರೆ ಪೆನಾಲ್ಟಿ ಕಾರ್ನರ್‌ಗಳನ್ನು (ಪಿ.ಸಿ.) ಸದುಪಯೋಗಪಡಿಸಿ ಕೊಳ್ಳುವುದು ಅತ್ಯಗತ್ಯ. ಮೊದಲೆರಡು ಪಂದ್ಯಗಳಲ್ಲಿ ಇಂಥ 9 ಅವಕಾಶ ಪಡೆದರೂ ಒಂದನ್ನು ಕೂಡ ನೇರ ಗೋಲಾಗಿ ಪರಿವರ್ತಿಸಲಿಲ್ಲ. ಸ್ಪೇನ್‌ ವಿರುದ್ಧ ನಾಯಕ ಹರ್ಮನ್‌ಪ್ರೀತ್‌ ಹೊಡೆದ ಚೆಂಡು ಎದುರಾಳಿ ಆಟಗಾರನ ಸ್ಟಿಕ್‌ಗೆ ಬಡಿದು ರೀಬೌಂಡ್‌ ಆದ ಬಳಿಕ ಅಮಿತ್‌ ರೋಹಿದಾಸ್‌ ಇದನ್ನು ಗೋಲು ಪೆಟ್ಟಿಗೆಗೆ ತಳ್ಳಿದ್ದರು.

ಹಾಗೆಯೇ ನಾಯಕ, ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಫಾರ್ಮ್ ಕೂಡ ನಿರ್ಣಾಯಕ ವೆನಿಸಲಿದೆ. ಸಾಮಾನ್ಯವಾಗಿ ಪ್ರತಿ ಯೊಂದು ಕೂಟದಲ್ಲೂ ಟಾಪ್‌ ಸ್ಕೋರರ್‌ ಆಗಿ ಮೂಡಿಬರುವ ಹರ್ಮನ್‌ಪ್ರೀತ್‌ ವಿಶ್ವಕಪ್‌ನಲ್ಲಿನ್ನೂ ಸಿಡಿಯಲಾರಂಭಿಸಿಲ್ಲ.

ಅಂದಹಾಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ವೇಲ್ಸ್‌ ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ವೇಲ್ಸ್‌ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯ. ಅದು ಈಗಾಗಲೇ ಇಂಗ್ಲೆಂಡ್‌ ವಿರುದ್ಧ 5-0, ಸ್ಪೇನ್‌ ವಿರುದ್ಧ 5-1 ಅಂತರದ ಸೋಲನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next