ಭುವನೇಶ್ವರ: ಭಾರತ ತಂಡವು ರವಿವಾರ ನಡೆಯುವ ಪುರುಷರ ಹಾಕಿ ವಿಶ್ವಕಪ್‌ನ ಕ್ರಾಸ್‌ಓವರ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿ ಸಲಿದೆ. ಗಾಯಗೊಂಡಿರುವ ಮಿಡ್‌ಫಿàಲ್ಡರ್ ಹಾರ್ದಿಕ್ ಸಿಂಗ್ ಅವರು ವಿಶ್ವಕಪ್‌ನ ಇನ್ನುಳಿದ ಪಂದ್ಯಗಳಿಂದ ಹೊರಬಿದ್ದ ಕಾರಣ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ.
24ರ ಹರೆಯದ ಹಾರ್ದಿಕ್ ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದ ವೇಳೆ ಮಂಡಿರಜ್ಜುವಿನ ಗಾಯಕ್ಕೆ ಒಳಗಾಗಿದ್ದರು. ಅವರಿನ್ನು ಪೂರ್ಣ ವಾಗಿ ಚೇತರಿಸಿಕೊಳ್ಳಲಿಲ್ಲ. ಅವರ ಅನುಪಸ್ಥಿತಿ ಯಲ್ಲಿ ಭಾರತ ನ್ಯೂಜಿಲ್ಯಾಂಡಿನ ಸವಾಲಿಗೆ ಉತ್ತರಿಸಬೇಕಾಗಿದೆ. ಭಾರತ ಒಂದು ವೇಳೆ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದರೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಅದ್ಭುತ ಗೋಲನ್ನು ಹೊಡೆದಿದ್ದರು. ರವಿವಾರದ ಪಂದ್ಯದಲ್ಲಿ ಅವರ ಬದಲಿಗೆ ರಾಜ್‌ಕುಮಾರ್ ಪಾಲ್ ಆಡಲಿದ್ದಾರೆ.
ವೇಲ್ಸ್ ವಿರುದ್ಧ ಭಾರತದ ನಿರಾಶಾದಾಯಕ ಪ್ರದರ್ಶನದಿಂದ ಭಾರತ ಇದೀಗ ಕ್ರಾಸ್‌ಓವರ್ ಪಂದ್ಯದಲ್ಲಿ ಆಡಬೇಕಾಗಿದೆ. ಒಂದು ವೇಳೆ ಭಾರತ ವೇಲ್ಸ್ ವಿರುದ್ಧ 8 ಗೋಲುಗಳ ಅಂತರದಿಂದ ಜಯಿಸಿದ್ದರೆ ನೇರವಾಗಿ ಕ್ವಾರ್ಟರ್‌ಫೈನಲಿಗೆ ಏರುವ ಅವಕಾಶವಿತ್ತು. ಆದರೆ ಭಾರತ ವೇಲ್ಸ್ ವಿರುದ್ಧ 4-2 ಗೋಲುಗಳಿಂದ ಜಯಿಸಿತ್ತು.
ಸದ್ಯ 12ನೇ ರ್‍ಯಾಂಕ್‌ನಲ್ಲಿರುವ ನ್ಯೂಜಿ ಲ್ಯಾಂಡ್ ಇಷ್ಟರವರೆಗೆ ಸೆಮಿಫೈನಲ್ ತಲುಪಿದ ಸಾಧನೆ ಮಾಡಿಲ್ಲ. ಅದು ಈ ಕೂಟದಲ್ಲಿ ಸಾಧಾರಣ ಆಟದ ಪ್ರದರ್ಶನ ನೀಡಿದೆ. ಹೀಗಾಗಿ ಭಾರತಕ್ಕೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ಭಾರತ ಸ್ಪೇನ್ ವಿರುದ್ಧ ಆಡಿದಂತೆ ಆಕ್ರಮಣಕಾರಿಯಾಗಿ ಆಡಿದರೆ ಮೇಲುಗೈ ಸಾಧಿಸಬಹುದು.
ನ್ಯೂಜಿಲ್ಯಾಂಡ್ “ಸಿ’ ಬಣದಲ್ಲಿ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದರೆ ಎರಡರಲ್ಲಿ ಸೋತು ಮೂರನೇ ಸ್ಥಾನ ಪಡೆದಿತ್ತು.