ರಾಜ್ಗಿರ್ (ಬಿಹಾರ): ವರ್ಷದುದ್ದಕ್ಕೂ ನೀರಸ ಪ್ರದರ್ಶನ ನೀಡುತ್ತಲೇ ಬಂದಿರುವ ಭಾರತದ ವನಿತೆಯರ ಮುಂದೀಗ “ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ’ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ದೊಡ್ಡ ಸವಾಲು ಎದುರಾಗಿದೆ. ಈ ಪಂದ್ಯಾವಳಿ ಸೋಮವಾರ ಬಿಹಾರದ ರಾಜ್ಗಿರ್ನಲ್ಲಿ ಆರಂಭವಾಗಲಿದ್ದು, ಭಾರತ ತಂಡ ಕೆಳ ರ್ಯಾಂಕ್ನ ಮಲೇಷ್ಯಾವನ್ನು ಎದುರಿಸಲಿದೆ.
ಭಾರತ ಈವರೆಗಿನ 7 ಆವೃತ್ತಿಗಳಲ್ಲಿ 2 ಸಲ ಚಾಂಪಿಯನ್ ಆಗಿದೆ. 2016 (ಸಿಂಗಾಪುರ) ಮತ್ತು 2023ರಲ್ಲಿ (ರಾಂಚಿ) ಪ್ರಶಸ್ತಿಯನ್ನೆತ್ತಿದೆ.
ಆದರೆ ಕಳೆದ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಸಂಪಾದಿ ಸಲು ವಿಫಲವಾದ ಭಾರತ, ಪ್ರಸಕ್ತ ಸೀಸನ್ನ 16 ಎಫ್ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ 13 ಸೋಲನುಭವಿಸಿದೆ. ಗೆದ್ದದ್ದು 2 ಪಂದ್ಯ ಮಾತ್ರ. ಒಂದು ಡ್ರಾಗೊಂಡಿದೆ. ಹೀಗಾಗಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಗ್ನಿಪರೀಕ್ಷೆಯನ್ನೇ ಎದುರಿಸಬೇಕಿದೆ. ಕೂಟದ ಉಳಿದ ತಂಡಗಳೆಂದರೆ ಚೀನ, ಜಪಾನ್, ಕೊರಿಯಾ ಮತ್ತು ಥಾಯ್ಲೆಂಡ್.
ಸಲೀಮಾ ಟೇಟೆ ನಾಯಕತ್ವದ ಭಾರತ ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡ ಸಮ್ಮಿಶ್ರ ತಂಡ ವಾಗಿದೆ. ತಂಡದ ರಕ್ಷಣಾ ವಿಭಾಗ ಬಲಿಷ್ಠ. ಉದಿತಾ, ಜ್ಯೋತಿ, ಇಶಿಕಾ, ಸುಶೀಲಾ ಚಾನು, ವೈಷ್ಣವಿ ಅವರೆಲ್ಲ ಇಲ್ಲಿನ ಪ್ರಮುಖರು. ಮಿಡ್ ಫೀಲ್ಡ್ನಲ್ಲಿ ನಾಯಕಿ ಸಲೀಮಾ, ನೇಹಾ, ಶರ್ಮಿಳಾ ದೇವಿ, ಮನೀಷಾ, ಸುನೇಲಿತಾ, ಲಾಲ್ರೆಮಿÕ ಯಾಮಿ ಇದ್ದಾರೆ. ಫಾರ್ವರ್ಡ್ ವಿಭಾಗ ಕೂಡ ಬಲಿಷ್ಠ. ಆದರೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವುದು ಮುಖ್ಯ.
ನೂತನ ಪಯಣದ ಆರಂಭ
ಇದು ಭಾರತೀಯ ವನಿತಾ ಹಾಕಿ ತಂಡದ ನೂತನ ಪಯಣದ ಆರಂಭ ಎಂಬುದಾಗಿ ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ. ಮಿಷನ್ 2026 ವಿಶ್ವಕಪ್ ಹಾಗೂ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಮೊದಲ ಹೆಜ್ಜೆ ಎಂದಿದ್ದಾರೆ.