ರಾಂಚಿ: ಏಷ್ಯಾಡ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತದ ವನಿತಾ ಹಾಕಿಪಟುಗಳಿಗೆ ಈಗ ತವರಲ್ಲೇ ನಡೆಯುವ ಎಫ್ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯಾವಳಿಯ ಸವಾಲು ಎದುರಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗಾಗಿ ಇದೊಂದು ಮಹತ್ವದ ಮುಖಾಮುಖೀ. 8 ತಂಡಗಳಲ್ಲಿ ಅಗ್ರ 3 ಸ್ಥಾನ ಪಡೆದ ತಂಡಗಳು ಪ್ಯಾರಿಸ್ ವಿಮಾನ ಏರಲಿವೆ.
ಆತಿಥೇಯ ಭಾರತ, ಜರ್ಮನಿ, ಜೆಕ್ ಗಣರಾಜ್ಯ, ಇಟಲಿ, ಜಪಾನ್, ಅಮೆರಿಕ, ಚಿಲಿ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಲ್ಲಿ ಸೆಣಸಲಿವೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಜರ್ಮನಿ ಈ ಕೂಟದ ಅಗ್ರ ತಂಡ. ಭಾರತ 6ನೇ ರ್‍ಯಾಂಕಿಂಗ್ ಹೊಂದಿದೆ.
ಭಾರತ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಅಮೆರಿಕದ ಬಳಿಕ ನ್ಯೂಜಿಲ್ಯಾಂಡ್ (ಜ. 14) ಮತ್ತು ಇಟಲಿ ತಂಡವನ್ನು ಎದುರಿಸಲಿದೆ (ಜ. 16). ಜ. 18ರಂದು ಸೆಮಿಫೈನಲ್, ಜ. 19ರಂದು ಫೈನಲ್ ಏರ್ಪಡಲಿದೆ.
ಅಮೆರಿಕ ಬಲಿಷ್ಠ ತಂಡ
ಭಾರತದ ಮೊದಲ ಎದುರಾಳಿಯಾಗಿರುವ ಅಮೆರಿಕ ಅತ್ಯಂತ ಬಲಿಷ್ಠ ತಂಡ. 1983ರಿಂದ ಇತ್ತಂಡಗಳು 15 ಸಲ ಎದುರಾಗಿದ್ದು, ಅಮೆರಿಕ 9 ಪಂದ್ಯಗಳನ್ನು ಗೆದ್ದಿದೆ. ಭಾರತ ಜಯಿಸಿದ್ದು ಎರಡರಲ್ಲಿ ಮಾತ್ರ. ಆದರೆ ಅಂಕಿಅಂಶವನ್ನು ಬದಿಗೆ ಸರಿಸಿ ವಿಶ್ಲೇಷಿಸುವುದಾರೆ ಭಾರತವಿಲ್ಲಿ ಎ ದರ್ಜೆಯ ಆಟವನ್ನು ಪ್ರದರ್ಶಿಸಬೇಕಿದೆ.