Advertisement

ರಕ್ಷಣಾ ವಿಭಾಗದಲ್ಲಿ ಸುಧಾರಣೆ ಅಗತ್ಯ: ರೀಡ್‌

01:04 AM Nov 04, 2019 | Team Udayavani |

ಭುವನೇಶ್ವರ: ಭಾರತದ ಹಾಕಿ ತಂಡಗಳೀಗ ಟೋಕಿಯೊ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಸಂಭ್ರಮದಲ್ಲಿವೆ. ಅಂದಮಾತ್ರಕ್ಕೆ ತಂಡಗಳು ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿವೆ ಎಂದರ್ಥವಲ್ಲ ಎಂಬುದಾಗಿ ಕೋಚ್‌ ಗ್ರಹಾಂ ರೀಡ್‌ ಎಚ್ಚರಿಸಿದ್ದಾರೆ. ತಂಡದ ರಕ್ಷಣಾ ವಿಭಾಗ ಹಾಗೂ ಫಿನಿಶಿಂಗ್‌ ಕೌಶಲ ನಿರೀಕ್ಷಿತ ಮಟ್ಟದಲ್ಲಿಲ್ಲ, ಇಲ್ಲಿ ಸುಧಾರಣೆ ಅಗತ್ಯ ಎಂಬುದಾಗಿ ಅವರು ಹೇಳಿದ್ದಾರೆ.

Advertisement

“ಒಲಿಂಪಿಕ್‌ ಅರ್ಹತೆ ಸಂಪಾದಿಸಿದ ಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ. ನನ್ನ ಕೆಲಸ ಇನ್ನು ಆರಂಭವಾಗಲಿದೆ. ಒಲಿಂಪಿಕ್‌ ಪೋಡಿಯಂ ಏರಬೇಕೆಂಬುದು ಎಲ್ಲ ಕ್ರೀಡಾಪಟುಗಳ ಕನಸು. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ. ಈಗ ಭಾರತವನ್ನೂ ಮರಳಿ ಈ ಎತ್ತರಕ್ಕೆ ಏರಿಸಬೇಕು. ಈ ನಿಟ್ಟಿನತ್ತ ನನ್ನ ಪ್ರಯತ್ನ ಸಾಗಲಿದೆ’ ಎಂದು ಆಸ್ಟ್ರೇಲಿಯದ ಮಾಜಿ ಆಟಗಾರನೂ ಆಗಿರುವ ಗ್ರಹಾಂ ರೀಡ್‌ ಹೇಳಿದರು.

ಭಾರತದ ದೌರ್ಬಲ್ಯಗಳು…
ಈ ಸಂದರ್ಭದಲ್ಲಿ ಭಾರತದ ಕೆಲವು ದೌರ್ಬಲ್ಯಗಳನ್ನು ಗ್ರಹಾಂ ರೀಡ್‌ ತೆರೆದಿಟ್ಟರು. “ಭಾರತದ ಡೀಪ್‌ ಡಿಫೆನ್ಸ್‌ ವಿಭಾಗ ಹೆಚ್ಚು ಬಲಶಾಲಿಯಾಗಿಲ್ಲ. ಇಲ್ಲಿ ಎದುರಾಳಿಗಳಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡುತ್ತಲೇ ಇದ್ದೇವೆ. ಹಾಗೆಯೇ ಫಿನಿಶಿಂಗ್‌ ತಂತ್ರಗಾರಿಕೆಯಲ್ಲಿ ಹಿಂದುಳಿದಿದ್ದೇವೆ. ಇಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗಬೇಕಿದೆ’ ಎಂದು ರೀಡ್‌ ಅಭಿಪ್ರಾಯಪಟ್ಟರು.

ಮುಂದಿನ ಜನವರಿಯಲ್ಲಿ ಭಾರತ ಮೊದಲ ಸಲ ಎಫ್ಐಎಚ್‌ ಪ್ರೊ ಲೀಗ್‌ ಆಡಲಿದ್ದು, ಇಲ್ಲಿ ಬಲಾಡ್ಯ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ. ಬಳಿಕ ಫೆಬ್ರವರಿಯಲ್ಲಿ ಬೆಲ್ಜಿಯಂ ಮತ್ತು ಆಸ್ಟ್ರೇಲಿಯ ವಿರುದ್ಧ ತವರಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 32 ಆಟಗಾರರು ಭಾರತ ತಂಡದಲ್ಲಿದ್ದಾರೆ. ಇವರೆಲ್ಲರಿಗೂ ಆಡುವ ಅವಕಾಶ ನೀಡಿ ಒಲಿಂಪಿಕ್ಸ್‌ಗೆ ಸಜ್ಜುಗೊಳಿಸಬೇಕಾದುದು ರೀಡ್‌ ಯೋಜನೆ.

ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತ ಅರ್ಹತಾ ಸುತ್ತಿನ ಎರಡೂ ಪಂದ್ಯಗಳಲ್ಲಿ ರಶ್ಯವನ್ನು ಮಣಿಸಿತ್ತು. ವನಿತೆಯರು ಅಮೆರಿಕ ವಿರುದ್ಧ ಹೆಚ್ಚುವರಿ ಗೋಲಿನ ಅಂತರದಿಂದ ಮೇಲುಗೈ ಸಾಧಿಸಿದ್ದರು.

Advertisement

ಆಸೀಸ್‌ ತಂಡದ ಸದಸ್ಯ
ಆಸ್ಟ್ರೇಲಿಯ 1992 ಬಾರ್ಸಿಲೋನಾ ಒಲಿಂಪಿಕ್ಸ್‌ ಹಾಕಿಯಲ್ಲಿ ಬೆಳ್ಳಿ ಪದಕ ಗೆದ್ದಾಗ ಗ್ರಹಾಂ ರೀಡ್‌ ಆ ತಂಡದ ಭಾಗವಾಗಿದ್ದರು. ಆದರೆ ಕೋಚ್‌ ಆಗಿ ರಾಷ್ಟ್ರೀಯ ತಂಡವನ್ನು ಇದೇ ಎತ್ತರಕ್ಕೆ ಏರಿಸಲು ಅವರಿಂದ ಸಾಧ್ಯವಾಗಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಸೀಸ್‌ ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿತ್ತು.

ಈಗ 8 ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಭಾರತವನ್ನು ಮತ್ತೆ ಹಳಿಗೆ ತರುವ ಮಹತ್ವದ ಜವಾಬ್ದಾರಿ 55ರ ಹರೆಯದ ಗ್ರಹಾಂ ರೀಡ್‌ ಮುಂದಿದೆ. “ಇನ್ನು ಟೋಕಿಯೊ ಒಲಿಂಪಿಕ್ಸ್‌ಗೆ ಉಳಿದಿರುವುದು 9 ತಿಂಗಳು ಮಾತ್ರ. ಹಂತ ಹಂತದಲ್ಲಿ ನಾವು ಪ್ರಗತಿ ಕಾಣುತ್ತ ಹೋಗಬೇಕು. ಆಗ ನಿರೀಕ್ಷಿತ ಫ‌ಲಿತಾಂಶ ತಾನಾಗಿ ಲಭಿಸುತ್ತದೆ. ರವಿವಾರದಿಂದಲೇ ಒಲಿಂಪಿಕ್‌ ತಯಾರಿ ಆರಂಭವಾಗುತ್ತಿದೆ…’ ಎಂದು ರೀಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next