ಹೊಸದಿಲ್ಲಿ: ಆಸ್ಟ್ರೇಲಿಯದ ಗ್ರಹಾಂ ರೀಡ್ ಭಾರತೀಯ ಹಾಕಿ ತಂಡದ ನೂತನ ಕೋಚ್ ಆಗುವುದು ಬಹುತೇಕ ಅಂತಿಮಗೊಂಡಿದೆ. ಈ ಸ್ಥಾನ ಕಳೆದ 3 ತಿಂಗಳಿಂದ ಖಾಲಿ ಇತ್ತು.
ಮಂಗಳವಾರ ನಡೆದ ಹಾಕಿ ಇಂಡಿಯಾ ಮತ್ತು ಸಾಯ್ ಅಧಿಕಾರಿಗಳ ನಡುವಿನ ಸಭೆಯಲ್ಲಿ ಗ್ರಹಾಂ ರೀಡ್ ಆಯ್ಕೆಗೆ ಒಲವು ತೋರಲಾಯಿತು. ಆಸ್ಟ್ರೇಲಿಯದ 3 ಬಾರಿಯ ಒಲಿಂಪಿಕ್ ಮೆಡಲಿಸ್ಟ್ ಜಾಯ್ ಸ್ಟೇಸಿ ಕೂಡ ಕೋಚ್ ರೇಸ್‌ನಲ್ಲಿದ್ದರು.
130 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವಿ ಗ್ರಹಾಂ ರೀಡ್ ಹೆಸರನ್ನು ಕೇಂದ್ರ ಕ್ರೀಡಾ ಸಚಿವಾಲಯದ ಅನುಮತಿಗಾಗಿ ರವಾನಿಸಲಾಗಿದೆ. ರೀಡ್ 2022ರ ವಿಶ್ವಕಪ್ ಹಾಕಿ ಪಂದ್ಯಾವಳಿಯ ತನಕ ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
1992ರ ಬಾರ್ಸಿಲೋನಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯ ತಂಡದಲ್ಲಿದ್ದ ಗ್ರಹಾಂ ರೀಡ್ 4 ವರ್ಷಗಳ ಕಾಲ ಆಸ್ಟ್ರೇಲಿಯ ಹಾಕಿ ತಂಡದ ಸಹಾಯಕ ಕೋಚ್ ಆಗಿದ್ದರು. 2014ರಲ್ಲಿ ಪ್ರಧಾನ ಕೋಚ್ ಆಗಿ ಭಡ್ತಿ ಪಡೆದು, 2016ರ ರಿಯೋ ಒಲಿಂಪಿಕ್ಸ್ ತನಕ ಮುಂದುವರಿದಿದ್ದರು.