ಹೊಸದಿಲ್ಲಿ: ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಮತ್ತು ಗೋಲ್‌ಕೀಪರ್ ಸವಿತಾ ಪುನಿಯಾ 2022ನೇ ಸಾಲಿನ “ವರ್ಷದ ಹಾಕಿ ಆಟಗಾರ” ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
24 ವರ್ಷದ ಹಾರ್ದಿಕ್ ಸಿಂಗ್ ಪ್ರಶಸ್ತಿ ರೇಸ್‌ನಲ್ಲಿದ್ದ ಸೀನಿಯರ್ ಆಟಗಾರರಾದ ಮನ್‌ಪ್ರೀತ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಹಿಂದಿಕ್ಕಿದರು. ಒಡಿಶಾದಲ್ಲಿ ನಡೆದ ಎಫ್ಐಎಚ್ ವರ್ಲ್ಡ್ಕಪ್‌ನಲ್ಲಿ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು.
ಸವಿತಾ ಪುನಿಯಾ ಎಫ್ಐಎಚ್ ವನಿತಾ ನೇಶನ್ಸ್ ಕಪ್ ವಿಜೇತ ಭಾರತ ತಂಡದ ನಾಯಕಿ ಆಗಿದ್ದರು. ಇಬ್ಬರೂ ತಲಾ 25 ಲಕ್ಷ ರೂ. ಹಾಗೂ ಟ್ರೋಫಿಯೊಂದನ್ನು ಬಹುಮಾನವಾಗಿ ಪಡೆದರು.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಗೆ ಪಾತ್ರರಾದರು. ಕೃಷ್ಣ ಬಿ. ಪಾಠಕ್ ಅತ್ಯುತ್ತಮ ಗೋಲ್‌ಕೀಪರ್, ಸುಶೀಲಾ ಚಾನು ಅತ್ಯುತ್ತಮ ಮಿಡ್‌ಫೀಲ್ಡರ್, ವಂದನಾ ಕಟಾರಿಯಾ ಅತ್ಯುತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು 5 ಲಕ್ಷ ರೂ. ಹಾಗೂ ಟ್ರೋಫಿಯನ್ನು ಒಳಗೊಂಡಿತ್ತು.
ಹಾಕಿ ಇಂಡಿಯಾ ಮೇಜರ್ ಧ್ಯಾನ್‌ಚಂದ್ ಜೀವಮಾನದ ಸಾಧನೆ ಪ್ರಶಸ್ತಿ 1964ರ ಒಲಿಂಪಿಕ್ಸ್ ಬಂಗಾರ ಪದಕ ವಿಜೇತ ತಂಡದ ಸದಸ್ಯ ಗುರುಬಕ್Ò ಸಿಂಗ್ ಅವರಿಗೆ ಒಲಿಯಿತು. ಇದು 30 ಲಕ್ಷ ರೂ. ಹಾಗೂ ಟ್ರೋಫಿಯನ್ನು ಒಳಗೊಂಡಿತ್ತು.