ಲಕ್ನೋ:ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವಲಯ ನಿಧಾನಕ್ಕೆ ಗರಿಗೆದರತೊಡಗಿದೆ. ಏತನ್ಮಧ್ಯೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಯಾದ ಬೆನ್ನಲ್ಲೇ ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್ ಎಂಬ ಕಟೌಟ್ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾರಾಜಿಸತೊಡಗಿದೆ.
ಲಕ್ನೋದಲ್ಲಿರುವ ಸಮಾಜವಾದಿ ಪಕ್ಷದ ಕೇಂದ್ರ ಕಚೇರಿಯ ಸಮೀಪ ಹಾಗೂ ಇತರ ಸ್ಥಳಗಳಲ್ಲಿ ಅಖಿಲೇಶ್ ಮುಂದಿನ ಪ್ರಧಾನಿ ಎಂಬ ಕಟೌಟ್ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಬ್ಯಾನರ್, ಪೋಸ್ಟರ್, ಕಟೌಟ್ ಗಳಲ್ಲಿ ಅಖಿಲೇಶ್ ಯಾದವ್ ಅವರ ಬೃಹತ್ ಭಾವಚಿತ್ರ ಬಳಸಿದ್ದು, ಅದರಲ್ಲಿ ಈ ರೀತಿಯ ಸ್ಲೋಗನ್ ಬರೆಯಲಾಗಿದೆ: ನಾವು ಅಖಿಲೇಶ್ ಅವರನ್ನು ನಂಬುತ್ತೇವೆ, ಈ ದೇಶಕ್ಕೆ ನೂತನ ಪ್ರಧಾನಿಯ ಅವಶ್ಯಕತೆ ಇದೆ!
ಜನವರಿ 15ರಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ಹುಟ್ಟುಹಬ್ಬದ ಸಂಭ್ರಮದ ವೇಳೆಯೂ ಬಿಎಸ್ಪಿ ಕಾರ್ಯಕರ್ತರು ಮಾಯಾವತಿ ಮುಂದಿನ ಪ್ರಧಾನಿ ಎಂಬ ಪೋಸ್ಟರ್ ಅನ್ನು ಪ್ರದರ್ಶಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ತಲಾ 38 ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡಿದ್ದವು.