Advertisement

 1990ರಲ್ಲೇ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ ಮರುಳ ಸಿದ್ದಯ್ಯ ಇನ್ನಿಲ್ಲ

12:47 PM Oct 28, 2018 | |

ಕನ್ನಡ ನಾಡು ಕಂಡ ಮೇರು ಸಾಹಿತಿ ,ಸಾರಸ್ವತ ಲೋಕದ ಕೊಂಡಿ,  ಹಿರಿಯ ಚಿಂತಕ , ನಾಡಿನ ಏಳಿಗೆಗಾಗಿ ಪೂರ್ವಾಲೋಚನೆ ಹೊಂದಿದ್ದ , ಸ್ವಚ್ಛತೆಗಾಗಿ ಶ್ರಮಿಸಿದ್ದ ಮಹಾನ್‌ ಚೇತನವೊಂದನ್ನು ಕಳೆದುಕೊಂಡಿದೆ. ಸಮಾಜದ ಏಳಿಗೆಗಾಗಿ ಶ್ರಮಿಸಿ ವಿದೇಶಿ ವಿದ್ಯಾರ್ಥಿಗಳ ಗಮನ ಸೆಳೆದಿದ್ದ  ಡಾ. ಎಚ್‌.ಎಂ. ಮರುಳು ಸಿದ್ದಯ್ಯ ಅವರು 87 ರ ಹರೆಯದಲ್ಲಿ  ನಮ್ಮನ್ನಗಲಿದ್ದಾರೆ. 

Advertisement

ವಾರ್ಧಕ್ಯದಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ 1990 ರಲ್ಲೇ ಈಗಿನ ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ್ದ ಅವರು ‘ನಿರ್ಮಲ ಕರ್ನಾಟಕ’ ಯೋಜನೆಯನ್ನು ಪರಿಚಯಿಸಿದ್ದರು. ವ್ಯಾಪಕವಾಗಿ ಬಯಲು ಶೌಚವಿದ್ದ ಕಾಲದಲ್ಲಿ  ಬಯಲು ಶೌಚ ಮುಕ್ತ ಕರ್ನಾಟಕ ನಿರ್ಮಾಣದ ಮಹದಾಸೆ ಹೊಂದಿದ್ದ ಮರುಳ ಸಿದ್ದಯ್ಯ ಅವರು ನಿರ್ಮಲ ಕರ್ನಾಟಕ ಯೋಜನೆಯ ರೂವಾರಿಯಾಗಿದ್ದರು. ಹಲವು ಪ್ರದೇಶಗಳಲ್ಲಿ ಗುಂಪು ಶೌಚಾಲಯಗಳ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದರು. ನಿರ್ಮಲ ಕರ್ನಾಟಕ ಮಾತ್ರವಲ್ಲದೆ ಪಂಚಮುಖೀ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆಯಗಳನ್ನು ಪರಿಚಯಿಸಿದ್ದರು. 

ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳ ಕುಂಟೆಯಲ್ಲಿ 1931 ರಲ್ಲಿ ಜನಿಸಿದ್ದ  ಮರುಳ ಸಿದ್ದಯ್ಯ  ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. ಬಳಿಕ ದೆಹಲಿ ವಿವಿಯಲ್ಲೂ ಸಮಾಜ ಕಾರ್ಯದಲ್ಲಿ ಎಂ.ಎ ಪದವಿ ಪಡೆದಿದ್ದರು. ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದರು. 

 ಕರ್ನಾಟಕ ವಿವಿಯಲ್ಲಿ  ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಸಮಾಜ ಕಾರ್ಯ ವಿಭಾಗ ಆರಂಭಿಸಿದ್ದರು. 

Advertisement

ಅನುಭವದ ಆಗರ ವಾಗಿದ್ದ  ಮರುಳ ಸಿದ್ದಯ್ಯ ಅವರ ಬಳಿ ಜ್ಞಾನಾರ್ಜನೆಗಾಗಿ ವಿದೇಶದಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಅಮೆರಿಕಾ, ಇಸ್ರೇಲ್‌,ಇಂಗ್ಲೆಂಡ್‌, ಸ್ವೀಡನ್‌ ಮೊದಲಾದ ದೇಶಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿ ಮಾರ್ಗದರ್ಶನವನ್ನು ಪಡೆದಿದ್ದರು. 

ಹೃದಯ ಶ್ರೀಮಂತ 
ಮರುಳ ಸಿದ್ದಯ್ಯ ಅವರ ಆದರ್ಶಪ್ರಾಯ ಜೀವನವನ್ನು ನಡೆಸಿದವರು. ಹಿರೇಕುಂಬಳ ಕುಂಟೆಯಲ್ಲಿದ್ದ ತನ್ನ ಮನೆಯನ್ನು ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿ, ಅಲ್ಲಿ ಪುಸ್ತಕ ಮನೆಯನ್ನು ಸ್ಥಾಪಿಸಿದ್ದಾರೆ. 

60 ಕ್ಕೂ ಹೆಚ್ಚು ಕೃತಿಗಳು
ಮರುಳ ಸಿದ್ದಯ್ಯ ಅವರು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ 60 ಕ್ಕೂ ಹೆಚ್ಚು  ಅರ್ಥಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ತಜ್ಞ ಸಮುದಾಯದಲ್ಲಿ, ವಿದ್ಯಾರ್ಥಿ ಸಮುದಾಯದಲ್ಲಿ  ಅಪಾರ ಜನಪ್ರಿಯತೆ ಪಡೆದಿವೆ. ಉಳಿದಂತೆ ಭಕ್ತಿ ಪಂಥದಲ್ಲಿ ಸಮಾಜ ಕಾರ್ಯದ ಬೇರುಗಳು, ಗಾಂಧೀಜಿ ಅರ್ಥ ಶಾಸ್ತ್ರ , ಹುಲ್ಲು ಬೇರುಗಳ ನಡುವೆ, ಅರಿವು ಆಚರಣೆ, ಗ್ರಾಮೋನ್ನತಿ, ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ದಿ  ಮೊದಲಾದ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಯಾಗಿ ನೀಡಿದ್ದಾರೆ. 

ಸಮಾಜಕ್ಕೆ ತನ್ನ ಚಿಂತನೆಗಳು, ಯೋಜನೆಗಳು ಮತ್ತು  ಕೃತಿಗಳ ಮೂಲಕ ಮಾರ್ಗದರ್ಶನ ನೀಡಿದ ಮರುಳ ಸಿದ್ದಯ್ಯ ಅವರು ಕನ್ನಡ ನಾಡಿನಲ್ಲಿ  ಮತ್ತೆ ಹುಟ್ಟಿ ಬರಲಿ.

Advertisement

Udayavani is now on Telegram. Click here to join our channel and stay updated with the latest news.

Next