ಮೈಸೂರು: ಎಲ್ಲಿಯವರೆಗೂ ಸಾರ್ವಜನಿಕರು ಹೊಣೆಗಾರಿಕೆ ಅರಿಯುವುದಿಲ್ಲವೋ, ಅಲ್ಲಿಯವರೆಗೂ ಪೊಲೀಸರಿಂದ ಕಾನೂನಾತ್ಮಕ ಕ್ರಮ ಅನಿವಾರ್ಯ ಎಂದು ಟೋಯಿಂಗ್ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಯಾವರಿಂದ ಟೋಯಿಂಗ್ ವಿಚಾರದಲ್ಲಿ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಚ್ಚಿನ ಕಮಿಷನ್ ಗಾಗಿ ಜನರಿಗೆ ತೊಂದರೆ ಕೊಟ್ಟಿರುವುದು ಸತ್ಯ. ಸದ್ಯಕ್ಕೆ ಟೋಯಿಂಗ್ ನಿಲ್ಲಿಸಲಾಗಿದೆ. ಇಂದು ಸಂಜೆ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.
ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರ ವಿರುದ್ದ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಬೇಕಾದರೂ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿದೆ. ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ. ಅದು ಶಿಕ್ಷೆ ಅಥವಾ ಬೇರೆನೋ ಅಲ್ಲ ಎಂದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಟೋಯಿಂಗ್ ಮಾಫಿಯಾಕ್ಕೆ ಕಡಿವಾಣ ಬೀಳುವುದು ಡೌಟು?
ಮುಂಬಡ್ತಿ ನೇಮಕಾತಿ ಅನುಪಾತ ಬದಲಾವಣೆ ವಿಚಾರದ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಬೇರೆ ಇಲಾಖೆಗಿಂತ ಭಿನ್ನ. ಪೊಲೀಸ್ ಇಲಾಖೆಗೆ ಹೊಸ ಬ್ಲಡ್ ಬರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.