ಕಲಬುರಗಿ: ಹೈಕ ಭಾಗದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶೀಘ್ರವೇ ಆರು ಜಿಲ್ಲೆಗಳ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಬಿ. ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಎಚ್‌ಕೆಆರ್‌ಡಿಬಿ ಕಚೇರಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018-19ನೇ ಸಾಲಿನ ಕ್ರಿಯಾ ಯೋಜನೆ ರೂಪಿಸಲು ಎಲ್ಲ ಜಿಲ್ಲೆಗಳಿಗೆ ಮಂಡಳಿಯಿಂದ ತಿಳಿಸಲಾಗಿದೆ ಎಂದು ಹೇಳಿದರು.
ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕ್ರಿಯಾ ಯೋಜನೆಗಳು ಸಲ್ಲಿಕೆಗೆ ಬಾಕಿಯಿದ್ದು, ಶೀಘ್ರವೇ ಕ್ರಿಯಾ ಯೋಜನೆಗಳನ್ನು ಪಡೆದು ಅನುಮೋದನೆ ನೀಡಲಾಗುವುದು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ.
ಮಂಡಳಿ ಕಾರ್ಯದರ್ಶಿಗಳೊಂದಿಗೆ ಸಂಪೂರ್ಣ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮಂಡಳಿಯಲ್ಲಿ ಒಟ್ಟು 83 ಮಂಜೂರಾದ ಹುದ್ದೆಗಳಿದ್ದು, ಕೇವಲ 46 ಹುದ್ದೆಗಳು ಭರ್ತಿಯಾಗಿವೆ. ಇನ್ನುಳಿದ 37 ಹುದ್ದೆಗಳ ಕೊರತೆಯಿಂದಾಗಿ ಮಂಡಳಿಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳು ನಿಧಾನವಾಗಿ ಸಾಗುತ್ತಿವೆ. ಮಂಡಳಿಯಲ್ಲಿ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2013-14 ರಿಂದ ಇಲ್ಲಿಯವರೆಗೆ ಒಟ್ಟು 2928.97 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಈ ಅವಧಿ ಯಲ್ಲಿ 13623 ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಪೈಕಿ 8462 ಕಾಮಗಾರಿಗಳು ಪೂರ್ಣಗೊಂಡು 3409 ಕಾಮಗಾರಿಗಳು ಪ್ರಗತಿಯಲ್ಲಿವೆ. 1752 ಕಾಮಗಾರಿಗಳನ್ನು ಪ್ರಾರಂಭಿಸಬೇಕಾಗಿದೆ.
371(ಜೆ) ಕಲಂ ಅಡಿಯಲ್ಲಿ ನೂತನವಾಗಿ ಎಚ್ ಕೆಆರ್‌ಡಿಬಿ ರಚಿತವಾದ ನಂತರ ಹೈಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಂಜುಂಡಪ್ಪ ವರದಿಗೆ ಅನುಸಾರವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು
ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ನಿಗದಿತ ಅವಯೊಳಗಾಗಿ ಪೂರ್ಣಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋದ ಯಾದವ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದ ಅರಳಿ, ಬೀದರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಶೇರಿಕಾರ ಹಾಗೂ ಮತ್ತಿತರರು ಇದ್ದರು. ಬೀದರ,ಯಾದಗಿರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖಂಡರು ನೂತನವಾಗಿ ಎಚ್‌ಕೆಆರ್ ಡಿಬಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ರಾಜಶೇಖರ ಬಿ. ಪಾಟೀಲ ಅವರಿಗೆ ಶುಭ ಕೋರಿದರು.