Advertisement

ಎಚ್‌ಕೆಆರ್‌ಡಿಬಿ ಅನುದಾನ ಬಳಕೆ: ಬೀದರ್‌, ಕೊಪ್ಪಳ ಫಸ್ಟ್‌

02:07 PM Oct 25, 2017 | Team Udayavani |

ಬಳ್ಳಾರಿ: ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಬೀದರ್‌ ಮತ್ತು ಕೊಪ್ಪಳ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ ಎಂದು ಪ್ರಾದೇಶಿಕ ಆಯುಕ್ತರು ಆಗಿರುವ ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದರು.

Advertisement

ನಗರದ ಮಹಾನಗರಪಾಲಿಕೆ ಸಭಾಂಗಣದಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ಮಂಗಳವಾರ ಚುನಾವಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಮತ್ತು ಬೀದರ್‌ ಜಿಲ್ಲೆಗಳು ಅನುದಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಶೇ.60ರಷ್ಟು ಸಾಧನೆ ತೋರಿವೆ. ರಾಯಚೂರು 3ನೇ ಸ್ಥಾನ, ಬಳ್ಳಾರಿ 4, ಕಲಬುರಗಿ 5 ಮತ್ತು ಯಾದಗಿರಿ 6, ಕೊನೆಯ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಎಚ್‌ಕೆಆರ್‌ಡಿಬಿ ಕಾಮಗಾರಿಗಳಲ್ಲಿನ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. ಈ ಮುಂಚೆ ಮೈಕ್ರೊ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಆಗುತ್ತಿತ್ತು. ಈ ಮೈಕ್ರೋ ಜೊತೆಗೆ ಮ್ಯಾಕ್ರೋ ಕಾಮಗಾರಿಗಳಿಗೂ ಅವರೆ ಅನುಮೋದನೆ ನೀಡುವುದಕ್ಕೆ ಅಧಿಕಾರ ನೀಡಲಾಗಿದೆ. ಈ ಮೂಲಕ ಕಾಮಗಾರಿಗಳ ಪ್ರಕ್ರಿಯೆ ಯಲ್ಲಿನ ವಿಳಂಬ ತಪ್ಪಿಸಿ
ಸರಳೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.

ಎಚ್‌ಕೆಆರ್‌ಡಿಬಿಗೆ 4,500 ಕೋಟಿ ರೂ.ಅನುದಾನ:
2013-14ನೇ ಸಾಲಿನಿಂದ ಈವರೆಗೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 4,500 ಕೋಟಿ ರೂ. ಅನುದಾನ ಲಭ್ಯವಾಗಿದ್ದು, ಇದುವೆರೆಗೆ 2300 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 2 ಸಾವಿರ ಕೋಟಿ ರೂ. ಖರ್ಚು ಮಾಡಿದ್ದು, 2018 ಮಾರ್ಚ್‌ ಅಂತ್ಯದ ವೇಳೆಗೆ 3 ಸಾವಿರ ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಲಾಗಿದೆ ಎಂದರು. 

2013-14, 2015-16ನೇ ಸಾಲಿನಲ್ಲಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಆದರೆ ಅವುಗಳು
ಆರಂಭವಾಗಿರಲಿಲ್ಲ. ಅವುಗಳನ್ನು ಈ ವರ್ಷದಲ್ಲಿ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. ಇದುವರೆಗೆ ಎಚ್‌ಕೆಆರ್‌ಡಿಬಿ ಅಡಿ 3 ಸಾವಿರ ಕಾಮಗಾರಿಗಳು ಅನುಮೋದನೆಯಾಗಿವೆ. ಆ ವರ್ಷದ ಕಾಮಗಾರಿಗಳು ಅದೇ ಅರ್ಥಿಕ ವರ್ಷದಲ್ಲಿ ಮುಗಿಸುವ ನಿಟ್ಟಿನಲ್ಲಿ ಯೋಜನೆಗಳು ಹಾಕಿಕೊಂಡಿದ್ದೇವೆ. ನಿಗದಿಪಡಿಸಿದ ವರ್ಷದಲ್ಲಿ ಶೇ.80ರಷ್ಟು ಕಾಮಗಾರಿಗಳನ್ನಾದರೂ ಪೂರ್ಣಗೊಳಿಸಬೇಕು ಎನ್ನುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next