ಬೆಳಗಾವಿ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಎಚ್‌ಕೆಆರ್‌ಡಿಬಿ) ಅನುದಾನವನ್ನು ಪ್ರಸ್ತುತವಿರುವ 1500 ಕೋಟಿ ರೂ.ನಿಂದ 2 ಸಾವಿರ ಕೋಟಿಗಳಿಗೆ ಹೆಚ್ಚಿಸಬೇಕೆಂದು ಆ ಭಾಗದ ಶಾಸಕರು ಮಾಡಿದ ಮನವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 2 ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಹೈದ್ರಾಬಾದ್ ಕರ್ನಾಟಕ ಭಾಗದ ಶಾಸಕರೊಂದಿಗೆ ಆ ಭಾಗದ ಸಮಸ್ಯೆಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು. ಎಚ್‌ಕೆಡಿಬಿಗೆ ಪ್ರಸ್ತುತ ಬಜೆಟ…ನಲ್ಲಿ 1500 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಆದರೆ ಒಂದು ಸಾವಿರ ರೂ. ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಬೇಕು ಎಂದು ಶಾಸಕರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, 2 ಸಾವಿರ ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಿ. ಪ್ರಸ್ತುತ ಸಾಲಿನಲ್ಲಿ ಇದುವರೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ 692 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದಂತೆ ಉಳಿದ ಅನುದಾನವನ್ನು ಬಿಡುಗಡೆ ಮಾಡಲು ಸಿದ್ಧ ಎಂದು ಉತ್ತರಿಸಿದರು.
ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ನಗರ ಪ್ರದೇಶಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕೆಲವು ಶಾಸಕರು ತಿಳಿಸಿದ್ದು, ಇದನ್ನು ಸರಿಪಡಿಸಲಾಗುವುದು. ಡಾ| ನಂಜುಂಡಪ್ಪವರದಿ ಅನುಷ್ಠಾನದ ಬಳಿಕ ಆ ಭಾಗದಲ್ಲಿ ಉಂಟಾಗಿರುವ ಅಭಿವೃದ್ಧಿಗಳನ್ನು ಪರಿಶೀಲಿಸಿ, ಇನ್ನೂ ಅಭಿವೃದ್ಧಿ ಹೊಂದಬೇಕಾದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಅವರು ಆ ಭಾಗದಲ್ಲಿ ಹಲವಾರು ಹುದ್ದೆಗಳು ಖಾಲಿಯಿರುವುದಾಗಿ ಪ್ರಸ್ತಾಪಿಸಿದ್ದು, ಅಗತ್ಯ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷದ ಬಜೆಟ್‌ನಲ್ಲಿ ಈ ಭಾಗದಲ್ಲಿ ಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ 2013ರಿಂದ 2018ರ ಮಾರ್ಚ್‌ವರೆಗೆ ರಸ್ತೆ ಕಾಮಗಾರಿಗಳಿಗೆ ಉತ್ತರ ಮತ್ತು ಈಶಾನ್ಯ ವಲಯಗಳಿಗೆ ಒಟ್ಟು 14369 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ನವೆಂಬರ್ ಅಂತ್ಯದವರೆಗೆ 3039 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಬಜೆಟ್‌ನಲ್ಲಿ 1375 ಕೋಟಿ ರೂ. ಒದಗಿಸಲಾಗಿದ್ದರೂ ಈಗಾಗಲೇ 3173 ಕೋಟಿ ರೂ. ಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಎಚ್‌ಕೆಆರ್‌ಡಿಬಿ ಅಧ್ಯಕ್ಷ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಡಿ.ರೇವಣ್ಣ, ಡಿ.ಕೆ. ಶಿವಕುಮಾರ್, ಬಂಡೆಪ್ಪ ಖಾಶೆಂಪುರ, ಆರ್.ಶಂಕರ್, ವೆಂಕಟರಾವ್ ನಾಡಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಹೈಕ ಭಾಗದ ಶಾಸಕರು ಪಾಲ್ಗೊಂಡಿದ್ದರು.