ವಿಧಾನಸಭೆ: ಮುಂಬೈಗೆ ತೆರಳಿರುವ ಶಾಸಕರನ್ನು ಕಲಾಪಕ್ಕೆ ವಾಪಸ್ ಕರೆಸುವಂತೆ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ. ಪಾಟೀಲ್ ಸದನದಲ್ಲಿ ಸ್ಪೀಕರ್‌ಗೆ ಮನವಿ ಮಾಡಿದ್ದು, ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರ ಪರ-ವಿರೋಧದ ಚರ್ಚೆಗೆ ಗ್ರಾಸವಾಯಿತು.
ರಾಜ್ಯದ 15 ಶಾಸಕರು ಮುಂಬೈಗೆ ತೆರಳಿ ತಮಗೆ ರಕ್ಷಣೆ ಇಲ್ಲ ಎಂದು ಹೇಳುತ್ತಿರುವುದು ಮಾಧ್ಯಮಗಳಲ್ಲಿ ಬರುತ್ತಿದೆ. ಅಲ್ಲದೇ ಬೇರೆ ರಾಜ್ಯದಲ್ಲಿ ನಮ್ಮ ಶಾಸಕರು ಹೋಗಿ ಹೋಟೆಲ್‌ನಲ್ಲಿ ಕೂರುವುದು ನಮ್ಮ ಸದನದ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ. ಹೀಗಾಗಿ, ರಾಜ್ಯದ ಪೊಲೀಸ್ ಅಧಿಕಾರಿಗಳನ್ನೋ ಅಥವಾ ವಿಧಾನಸಭೆಯ ಹಿರಿಯ ಅಧಿಕಾರಿಗಳನ್ನೋ ಕಳುಹಿಸಿ, ಅವರಿಗೆ ರಾಜ್ಯದಲ್ಲಿ ಎಲ್ಲ ರೀತಿಯ ರಕ್ಷಣೆ ನೀಡುವ ಭರವಸೆ ನೀಡಿ ಕರೆದುಕೊಂಡು ಬರುವಂತೆ ಸೂಚಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಅವರ ಮನವಿಗೆ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಎಚ್.ಕೆ. ಪಾಟೀಲರು ಮಾಡುತ್ತಿರುವ ಮನವಿಗೂ, ವಿಶ್ವಾಸಮತ ಯಾಚನೆಗೂ ಯಾವುದೇ ಸಂಬಂಧವಿಲ್ಲ. ಅವರು ತಮಗೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸುಪ್ರೀಂಕೊರ್ಟ್‌ಗೆ ತೆರಳಿದ್ದಾರೆ. ಸುಪ್ರೀಂಕೋರ್ಟ್ ಕೂಡ ಅವರಿಗೆ ಒತ್ತಡ ಹೇರದಂತೆ ಆದೇಶ ನೀಡಿದೆ. ಹೀಗಾಗಿ ಅವರು ಸ್ವ ಇಚ್ಛೆಯಿಂದ ಬರದಿದ್ದರೆ, ಅವರನ್ನು ಒತ್ತಾಯದಿಂದ ಕರೆಸುವ ಪ್ರಯತ್ನ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ಡಿ.ಕೆ.ಶಿವಕುಮಾರ್, 15 ಶಾಸಕರು ನಮ್ಮ ಪಕ್ಷದವರು. ಅವರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಡಲಾಗಿದೆ. ಕಳೆದ 40 ವರ್ಷದಿಂದ ಅವರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮೊಂದಿಗೆ ರಾಜಕಾರಣ ಮಾಡಿದ್ದಾರೆ. ಹೀಗಾಗಿ, ಅವರನ್ನು ವಾಪಸ್ ಕರೆಸುವಂತೆ ಮನವಿ ಮಾಡಿದರು.
ಎರಡೂ ಕಡೆಯ ವಾದ ಆಲಿಸಿದ ಸ್ಪೀಕರ್, ಮುಂಬೈಗೆ ತೆರಳಿರುವ ಶಾಸಕರು ಯಾರೂ ತಮಗೆ ರಕ್ಷಣೆ ನೀಡುವಂತೆ ಪತ್ರ ಬರೆದಿಲ್ಲ ಹಾಗೂ ಶಾಸಕರ ಸಂಬಂಧಿಕರಿಂದಲೂ ದೂರು ಬಂದಿಲ್ಲ. ಹೀಗಾಗಿ, ಆ ಶಾಸಕರಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದಲ್ಲ. ಒಂದು ವೇಳೆ ಸರ್ಕಾರಕ್ಕೆ ಯಾರಾದರೂ ದೂರು ನೀಡಿದ್ದರೆ, ಸರ್ಕಾರ ಅವರನ್ನು ವಾಪಸ್ ಕರೆ ತರುವ ಕೆಲಸ ಮಾಡಬಹುದು. ಯಾವುದೇ ದೂರು ಬಾರದೇ ಶಾಸಕರಿಗೆ ರಕ್ಷಣೆ ನೀಡುವ ಜವಾಬ್ದಾರಿ ನನ್ನದಲ್ಲ ಎಂದು ರೂಲಿಂಗ್ ನೀಡಿದರು.
ಸ್ಪೀಕರ್ ರೂಲಿಂಗ್ ನೀಡಿದ ನಂತರ ಸಚಿವ ಡಿ.ಕೆ.ಶಿವಕುಮಾರ್, ಮುಂಬೈಗೆ ತೆರಳಿರುವ ಶಾಸಕರು ನಮ್ಮ ಪಕ್ಷದವರು. ಅವರು ನಮ್ಮ ಸ್ನೇಹಿತರು. ನಾವು ಮನವಿ ಮಾಡುತ್ತಿದ್ದೇವೆ. ಅವರನ್ನು ವಾಪಸ್ ಕರೆಸಿ ಎಂದು ಮಾಡಿದ ಮನವಿಯನ್ನು ಸ್ಪೀಕರ್ ಪುರಸ್ಕರಿಸಲಿಲ್ಲ.