Advertisement

ಕಾರ್ಪೋರೆಟ್‌ ಕ್ಷೇತ್ರವಾಗಿಸುವ ಹುನ್ನಾರ : ಎಚ್‌.ಕೆ.ಪಾಟೀಲ್‌

03:08 AM Jul 14, 2021 | Team Udayavani |

ಕೇಂದ್ರ ಸರಕಾರ ಬಹುವರ್ಷಗಳ ಬೇಡಿಕೆಗೆ ಪೂರಕ ವಾಗಿ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಕೇಂದ್ರ ಸರಕಾರದ, ಚಿಂತನೆಗಳನ್ನು ಗಮನಿಸಿದರೆ, ಸಹಕಾರ ಕ್ಷೇತ್ರವನ್ನು ಕಾರ್ಪೋರೆಟ್‌ ಕ್ಷೇತ್ರ ವಾಗಿಸುವ ಯತ್ನಗಳು ನಡೆಯುತ್ತಿವೆಯೇ ಸಹಕಾರ ಕ್ಷೇತ್ರವನ್ನು ರಾಜಕೀಯವಾಗಿ ಬಳಸಲು ವ್ಯವಸ್ಥಿತ ಯತ್ನಗಳನ್ನು ರೂಪಿಸಲಾಗುತ್ತಿದೆಯೇ ಎಂಬ ಶಂಕೆ-ಅನುಮಾನ, ಆತಂಕ ನನ್ನಂತಹ ಅನೇಕ ಸಹಕಾರಿಗಳಲ್ಲಿ ಮೂಡದೇ ಇರದು.

Advertisement

ಸಹಕಾರ ಕ್ಷೇತ್ರಕ್ಕೆ, ಸಹಕಾರಿ ತಣ್ತೀಗಳಿಗೆ ಅದರದ್ದೇ ಆದ ಮಹತ್ವವಿದೆ, ಪ್ರಭಾವ, ಪಾವಿತ್ರ್ಯ ಇದೆ. ಸಹಕಾರ ತಣ್ತೀ ಭಾರತೀಯರ ಬದುಕಿನ ಅವಿಭಾಜ್ಯ ಅಂಗ ವಾಗಿಯೇ ರೂಪಿತವಾಗಿ ಬೆಳೆದು ಬಂದಿದೆ. ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತೀಯರಿಗೆ ಸಹಕಾರ ಕ್ಷೇತ್ರ ಹೊಸತಲ್ಲ. ಸಹಕಾರ ಕ್ಷೇತ್ರ ವ್ಯಾಪಕತೆ ಹೊಂದಿದ್ದು, ಆದನ್ನು ಸೀಮಿತಗೊಳಿಸುವ ಇಲ್ಲವೆ, ಸಹಕಾರದ ಮೂಲ ಆಶಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾರ್ಪೋರೆಟ್‌ ರೂಪ ಕೊಡುವ ಯತ್ನ ಯಾರಿಂದಲೂ ಆಗಬಾರದು. ನೂತನ ಸಹಕಾರ ಖಾತೆ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಗೃಹ ಖಾತೆ ಸಚಿವ ಅಮಿತ್‌ ಶಾ ಅವರಿಗೆ ನೀಡಲಾಗಿದೆ. ಅಭಿವೃದ್ಧಿ ಇಲಾಖೆ ಹೇಗೆ ಗೃಹ ಖಾತೆಗೆ ಸಂಬಂಧ ಹೊಂದುತ್ತದೆ ಎಂಬುದು ಅನೇಕರ ಪ್ರಶ್ನೆ ಯಾಗಿದೆ. ಕೇಂದ್ರದ ನಿರ್ಣಯವನ್ನು ನಾನು ಪ್ರಶ್ನಿಸುತ್ತಿಲ್ಲ.

ನಾನು ಸೇರಿದಂತೆ ಸಹಕಾರಿ ಕ್ಷೇತ್ರದ ಆಶಯವೆಂದರೆ, ಕೇಂದ್ರ ಗೃಹ ಸಚಿವರು ಸಹಕಾರಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಗಳನ್ನು ಇರಿಸಬೇಕು. ರಾಜಕೀಯೇತರ ಮನೋಭಾವದೊಂದಿಗೆ ನಿರ್ಣಯಗಳನ್ನು ಕೈಗೊಳ್ಳಬೇಕು. ಸಹಕಾರಿ ಕ್ಷೇತ್ರದ ತಣ್ತೀ, ಮೂಲ ಆಶಯಗಳಿಗೆ ಧಕ್ಕೆ ತರದ ರೀತಿಯಲ್ಲಿ ಅಭಿವೃದ್ಧಿಗೆ ಪೂರಕ, ಕ್ಷೇತ್ರದ ಮೌಲ್ಯ ಹೆಚ್ಚುವ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂಬುದಾಗಿದೆ.

ಸಹಕಾರ ಕ್ಷೇತ್ರದ ಬಲವರ್ಧನೆ ನಿಟ್ಟಿನಲ್ಲಿ ಈ ಹಿಂದೆ ಯುಪಿಎ ಸರಕಾರದಲ್ಲಿ ಅಂದಿನ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಅಂದಿನ ಸಚಿವ, ಸಹಕಾರಿ ಧುರೀಣ ಶರದ್‌ ಪವಾರ್‌ ಅವರ ವಿಶೇಷ ಯತ್ನದೊಂದಿಗೆ ಸಂವಿಧಾನ ತಿದ್ದುಪಡಿಯೊಂದಿಗೆ ಸಹಕಾರ ಸಂಘ ರಚನೆ, ಮೂಲಭೂತ ಹಕ್ಕು ಆಗಿ ಮಾಡುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇರಿಸಲಾಗಿತ್ತು. ಸಹಕಾರ ಕ್ಷೇತ್ರದ ಪುನಶ್ಚೇತನಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಕಳೆದ 7-8 ವರ್ಷಗಳಿಂದ ಸಹಕಾರ ಕ್ಷೇತ್ರ, ಸಹಕಾರ ಬ್ಯಾಂಕಿಂಗ್‌ ವಿಷಯ ವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ಕೇಂದ್ರ ಸರಕಾರ ತೋರಿದ ಅಸಹಕಾರ, ಉದಾಸೀನತೆ ನಿಲವುಗಳಿಂದಾಗಿ ಸಹಕಾರ ಕ್ಷೇತ್ರ ಸೊರಗುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಸಹಕಾರಿ ಕ್ಷೇತ್ರ ಮತ್ತು ಅದರ ಅಭಿವೃದ್ಧಿಗೆ ಮಾರಕವೆನ್ನಬಹುದಾದ ವಾತಾವರಣ ಸೃಷ್ಟಿಸಲಾಗಿದೆ ಎಂಬುದನ್ನು ಸ್ಥಿತಿ ಸಾಕ್ಷಿ ಹೇಳುತ್ತಿದೆ. ಕಳೆದ ಏಳೆಂಟು ವರ್ಷಗಳಿಂದ ಕಾರ್ಪೋರೆಟ್‌ ವಲಯಕ್ಕೆ ಕೇಂದ್ರ ಸರಕಾರ ರತ್ನಗಂಬಳಿ ಸ್ವಾಗತಕ್ಕೆ ನಿಂತಿದೆ. ನೀತಿ ನಿಯಮ, ಹಣಕಾಸು ಬೆಂಬಲ ಸೇರಿದಂತೆ ವಿವಿಧ ರೂಪದಲ್ಲಿ ಕಾರ್ಪೋರೆಟ್‌ ವಲಯಕ್ಕೆ ಏನೆಲ್ಲ ಬೆಂಬಲ, ರಿಯಾಯಿತಿ, ಪ್ರೋತ್ಸಾಹ ದೊರೆ ಯುತ್ತಿದೆ. ಇನ್ನೊಂದು ಕಡೆ ಸಹಕಾರ ಕ್ಷೇತ್ರ ಎಲ್ಲಿಲ್ಲದ ಕಿರುಕುಳ ಅನುಭವಿಸು ವಂತಾಗಿದ್ದು, ಮಲತಾಯಿ ಧೋರಣೆಗೆ ಸಿಲುಕಿ ಮೌನರೋದನಕ್ಕೆ ಸಿಲುಕಿದೆ.

Advertisement

ಕೇಂದ್ರ ಸರಕಾರ ಸಹಕಾರ ಕ್ಷೇತ್ರದ ಕುರಿತು ಮಾಡಿದ ಕಾಯ್ದೆ-ಕಾನೂನು, ಸಹಕಾರ ಮತ್ತು ಕಾರ್ಪೋರೆಟ್‌ ವಲಯಗಳ ನಡುವೆ ವ್ಯತ್ಯಾಸ ಗುರುತಿಸದೆ ನಿಯಮ-ನಿರ್ದೇಶನ ನೀಡಿರುವುದು ನೋಡಿದರೆ, ಕಾರ್ಪೋರೆಟ್‌ ವಲಯಕ್ಕೆ ಏನು ಬೇಕು ಎಂದು ಕೇಳುವ ಮೊದಲೇ ಕೇಂದ್ರ ಸರಕಾರವೇ ಮುಂದೆ ನಿಂತು, ಇದು ನಿಮಗಾಗಿಯೇ ಇದೆ ತೆಗೆದುಕೊಳ್ಳಿ, ಬಳಸಿಕೊಳ್ಳಿ ಎಂದು ತುದಿಗಾಲ ಮೇಲೆ ನಿಂತಂತೆ ಭಾಸವಾಗುತ್ತಿದೆ.

ಆತಂಕ ಹಾಗೂ ಆಘಾತಕಾರಿ ಅಂಶವೆಂದರೆ ಸಹಕಾರ ಮೂಲ ತಣ್ತೀ-ಗುಣಲಕ್ಷಣಗಳೇ ಕಳೆದು ಹೋಗುವಂತಾಗುವ ರೀತಿಯ ನಿಯಮಗಳ ಮೂಲಕ ಸಹಕಾರ ಕ್ಷೇತ್ರದ ಅಸ್ತಿತ್ವಕ್ಕೆ ಸವಾಲಾಗುವ ರೀತಿಯಲ್ಲಿ ಕೇಂದ್ರ ವರ್ತಿಸುತ್ತಿದೆಯೇ ಎಂದೆನಿಸದೆ ಇರದು. ಸಹಕಾರ ಕ್ಷೇತ್ರ ರಾಜ್ಯ ಪಟ್ಟಿಯಲ್ಲಿ ಬರುತ್ತದೆ. ಆದರೆ ಕೇಂದ್ರ ಸರಕಾರದ ನಡೆ ಹಾಗೂ ವೇಗ, ಚಿಂತನೆಗಳನ್ನು ಗಮನಿಸಿದರೆ, ರಾಜ್ಯ ಸರಕಾರಗಳ ಅಧಿಕಾರದ ಮೇಲೂ ಗದಾಪ್ರಹಾರ ನಡೆಸಿದಂತೆ ಭಾಸವಾ ಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಅಲ್ಲದೆ ಮತ್ತೇನು? ಸಹಕಾರ ಕ್ಷೇತ್ರದ ತಣ್ತೀ-ಗುಣಲಕ್ಷಣ, ಮೂಲ ಆಶಯಗಳನ್ನು ಹಾಳು ಮಾಡದ ಯಾವುದೇ ಕ್ರಮ, ನೀತಿ-ನಿಲುವುಗಳನ್ನು ಒಪ್ಪ ಬಹುದು. ಆದರೆ ಸಹಕಾರ ತಣ್ತೀ, ಆಶಯಗಳನ್ನೇ ಹಾಳು ಮಾಡುವ ನೀತಿ-ನಿಯಮ, ಕ್ರಮಗಳನ್ನು ಸಹಕಾರ ಕ್ಷೇತ್ರದ ಕಾರ್ಯಕರ್ತರು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಈ ನಡೆಯನ್ನು ಗಮನಿಸಿದರೆ, ಸಹಕಾರ ಸಂಸ್ಥೆಗಳಿಗೆ ಬಲ ತುಂಬುವ ಕೆಲಸ ಆಗುತ್ತಿಲ್ಲ. ಬದಲಾಗಿ ಕಾರ್ಪೋರೆಟ್‌ ವಲಯಕ್ಕೆ ಇನ್ನಷ್ಟು ಬಲ ತುಂಬುವ ಯತ್ನ ನಡೆಯುತ್ತಿದೆ ಎಂದೆನಿಸುತ್ತಿದೆ. ಕಾರ್ಪೋರೆಟ್‌ ವಲಯ, ಖಾಸಗಿ ಕ್ಷೇತ್ರಕ್ಕೆ ಅನುಕೂಲಕರ ಸ್ಥಿತಿ ರೂಪಿಸುವುದಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಅನ್ಯಾಯ ಮಾಡುವ, ಅಸ್ತಿತ್ವಕ್ಕೆ ಧಕ್ಕೆ ತರುವ ಯಾವ ಕೆಲಸವನ್ನು ಕೇಂದ್ರ ಸರಕಾರ ಮಾಡಬಾರದು ಎನ್ನುವುದು ಸಹಕಾರ ಕ್ಷೇತ್ರದ ಪ್ರಬಲ ಹಕ್ಕೊತ್ತಾಯವಾಗಿದೆ.

– ಎಚ್‌.ಕೆ.ಪಾಟೀಲ್‌, ಮಾಜಿ ಸಹ ಕಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next