Advertisement
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಸಮಿತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಹೈದ್ರಾಬಾದ ಕರ್ನಾಟಕ ವಿಮೋಚನಾದಿನಾಚರಣೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಗಮನ ಸೆಳೆದ ಪರೇಡ್: ಹೈ.ಕ.ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಪರೇಡ್ ಕಮಾಂಡರ್ ಕಲಬುರಗಿ ಎ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಲೋಕೇಶ ಬಿ. ಹಾಗೂ ಸಹಾಯಕ ಪರೇಡ್ ಕಮಾಂಡರ್ ಡಿಎಆರ್ ಆರ್‌ಪಿಐ ಚನ್ನಬಸವ ಅವರ ನೇತೃತ್ವದಲ್ಲಿ ನಡೆದ ಪರೇಡ್‌ನಲ್ಲಿ ಡಿಎಆರ್, ಸಿವಿಲ್ ಪೊಲೀಸ್, ಗೃಹರಕ್ಷಕದಳ, ಅಗ್ನಿಶಾಮಕ ದಳ, ಅರಣ್ಯ ಮತ್ತು ಅಬಕಾರಿ ಇಲಾಖೆ, ಎನ್‌ಸಿಸಿ, ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಅಂಧ ಬಾಲಕರ ವಸತಿ ಶಾಲೆ, ಕೆಸಿಇಡಿಟಿ ಬಾಲಕಿಯರ ಪ್ರೌಢಶಾಲೆ ಮಕ್ಕಳು, ಪೊಲೀಸ್ ವಾದ್ಯ ವೃಂದ ಸೇರಿದಂತೆ ಒಟ್ಟು 13 ತುಕಡಿಗಳಿಂದ ಮುಖ್ಯಮಂತ್ರಿಗಳು ಪರೇಡ್ ವಂದನೆ ಸ್ವೀಕರಿಸಿದರು. ಸಮಾರಂಭದ ಅಂಗವಾಗಿ ಸ್ವಾತಂತ್ರ್ಯಾಹೋರಾಟಗಾರರಾದ ಶಿವಲಿಂಗಪ್ಪ ಬಸಲಿಂಗಪ್ಪ ಪಾಟೀಲ ಹಾಗೂ ಧರ್ಮವೀರ ಮಾಣಿಕರಾವ ಗಾಂಪಾ ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದಕ್ಕೂ ಮುನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಲಬುರಗಿ ನಗರದ ಎಸ್‌ವಿಪಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಮಾಜ ಕಲ್ಯಾಣ ಖಾತೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಜಲಸಂಪನ್ಮೂಲ ಹಾಗೂ ವೈದ್ಯಕೀಯ ಖಾತೆ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ, ತೋಟಗಾರಿಕಾ ಖಾತೆ ಸಚಿವ ಎಂ.ಸಿ. ಮನಗೂಳಿ, ಮಾಜಿ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ರೇವುನಾಯಕ ಬೆಳಮಗಿ, ಶಾಸಕರಾದ ಡಾ| ಉಮೇಶ ಜಾಧವ, ಡಾ| ಅಜಯಸಿಂಗ್, ದತ್ತಾತ್ರೇಯ ಸಿ. ಪಾಟೀಲ ರೇವೂರ, ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ಖನೀಜ್ ಫಾತೀಮಾ, ಸುಭಾಷ ಆರ್. ಗುತ್ತೇದಾರ, ವಿಧಾನ ಪರಿಷತ್ ಸದಸ್ಯರಾದ ಇಕ್ಬಾಲ್ ಅಹ್ಮದ್ ಸರಡಗಿ, ಬಿ.ಜಿ. ಪಾಟೀಲ, ಡಾ| ಚಂದ್ರಶೇಖರ ಪಾಟೀಲ, ಕಲಬುರಗಿ ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾಪೌರ ಶರಣಕುಮಾರ ಮೋದಿ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಎನ್. ಶಶಿಕುಮಾರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸವರಾಜ ತಡಕಲ್, ಪಕ್ಷದ ಪ್ರಮುಖರಾದ ಬಸವರಾಜ ಡಿಗ್ಗಾವಿ, ಹೈ.ಕ.ಹೋರಾಟ ಸಮಿತಿ ಲಕ್ಷ್ಮಣ ದಸ್ತಿ ಸೇರಿದಂತೆ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಜನಪ್ರತಿನಿ ಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದೇಶ ವಾಪಸ್: ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರ ಬೆಳೆ ಸಾಲ ಮನ್ನಾ ಇಲ್ಲ ಎಂಬ ಆದೇಶವನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ರೀತಿ ಕುಟುಂಬಕೊಬ್ಬರ ಸಾಲ ಮನ್ನಾ ಆದೇಶ ವಾಪಸು ಕುರಿತಾಗಿಯೂ ಚರ್ಚೆ ನಡೆದಿದೆ. ಬಹು ಮುಖ್ಯವಾಗಿ 30 ಸಾವಿರ ಕೋಟಿ ರೂ. ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸಾಲ ಮನ್ನಾದ ಹಣವನ್ನು ಮುಂದಿನ ವರ್ಷದ ಜುಲೈ ಅಂತ್ಯದೊಳಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು. ಬೆಳೆ ಸಾಲ ಪಾವತಿಗಾಗಿ ರೈತರಿಗೆ ನೋಟಿಸ್ ನೀಡದಿರುವಂತೆ ಎಲ್ಲ ಬ್ಯಾಂಕ್‌ಗಳಿಗೆ ಸರ್ಕಾರಿ ಆದೇಶ ಕಳುಹಿಸಲಾಗಿದೆ. ಆದಾಗ್ಯೂ ಬ್ಯಾಂಕ್ ಮ್ಯಾನೇಜರ್ ರೈತರಿಗೆ ಸಾಲದ ಸಂಬಂಧ ನೋಟಿಸ್ ನೀಡಿದ್ದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು. ಈಗಾಗಲೇ ವಿಜಯಪುರದಲ್ಲಿ ಬ್ಯಾಂಕ್ ಮ್ಯಾನೇಜರ್ ರೊಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು. 8ರ ಮೀಸಲಾತಿ: 371ನೇ(ಜೆ) ವಿಧಿ ಅಡಿ ಹೈ.ಕ ಗದವರಿಗೆ ಹೈ.ಕ ಹೊರತುಪಡಿಸಿ ರಾಜ್ಯದ ಇತರ ಭಾಗದಲ್ಲಿ ಶೇ. 8ರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಮಹಾನಗರದಲ್ಲಿ ಮಾತ್ರ ಇದು ಪಾಲನೆಯಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಆದರೆ ಶೇ.8ರಷ್ಟು ಮೀಸಲಾತಿ ರಾಜ್ಯದ ಇತರ
ಭಾಗದಲ್ಲಿ ಸಿಗಬೇಕು ಎಂಬುದಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು. ಹೈದ್ರಾಬಾದ್ ಕರ್ನಾಟಕ ಭಾಗದ ಜನರ ದೃಷ್ಟಿಯಿಂದ ಏನೇನು ಕ್ರಮ ಕೈಗೊಳ್ಳಲು ಸಾಧ್ಯವೋ ಅದೆಲ್ಲವನ್ನೂ ಸರ್ಕಾರ ಕೈಗೊಳ್ಳಲಿದೆ. ಬಹು ಮುಖ್ಯವಾಗಿ 371ನೇ(ಜೆ) ವಿಧಿ ಜಾರಿಯಲ್ಲಿನ ತೊಡಕು ನಿವಾರಿಸಿ ಪರಿಣಾಮಕಾರಿ ಕಾರ್ಯಾನುಷ್ಠಾನಕ್ಕೆ ದೃಢ ಹೆಜ್ಜೆ ಇಡಲಿದೆ ಎಂದು ಹೇಳಿದರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ರಾಜ್ಯದ 1500 ತಾಂಡಾಗಳಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸೇವಾಲಾಲ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಯೋಜನೆಗೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯದಲ್ಲಿ ಪ್ರಸಕ್ತ
ವರ್ಷ 400 ಸೇವಾಲಾಲ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣಕ್ಕೆ 20 ಕೋಟಿ ರೂ. ತೆಗೆದಿರಿಸಲಾಗಿದೆ. ಮುಂದಿನ ವರ್ಷ 112 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು. ಮುಖ್ಯಮಂತ್ರಿಗೆ ಮಳೆಯ ಸಿಂಚನ
ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದು ಹೊಸ ದಾಖಲೆ ನಿರ್ಮಿಸಿದರು. ಕಳೆದ ತಿಂಗಳಷ್ಟೇ ಲಘು ವಿಮಾನ ಹಾರಾಟದ ಪ್ರಾಯೋಗಿಕ ಪರೀಕ್ಷೆ ನಡೆದು ಈಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಮುಖ್ಯಮಂತ್ರಿ ಹಾಗೂ ಮೊದಲ ಪ್ರಯಾಣಿಕ ಎಂಬ ಖ್ಯಾತಿಗೆ ಅವರು ಪಾತ್ರರಾದರು. ಕುಮಾರಸ್ವಾಮಿ ಬರುವ 10 ನಿಮಿಷ ಮೊದಲು ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ತುಂತುರು ಜತೆಗೆ ಸ್ವಲ್ಪ ಜೋರಾದ ಮಳೆ ಸುರಿಯಿತು. ಸಿಎಂ ಬಂದ ವಿಮಾನ ಇಳಿಯುವ ಸಂದರ್ಭದಲ್ಲಂತೂ ಮಳೆ
ಜೋರಾಯಿತು. ಹೀಗಾಗಿ ಗೌರವ ವಂದನೆ ರದ್ದುಪಡಿಸಲಾಯಿತು. ಅಲ್ಲದೇ ಸಿಎಂ ಅವರನ್ನು ಸ್ವಾಗತಿಸಲು ಬಂದಿದ್ದ ಸಚಿವರು ಹಾಗೂ ಶಾಸಕರಿಗೆ ಕೊಡೆ ಆಶ್ರಯ ನೀಡಲಾಯಿತು. ಪೊಲೀಸರು, ಅಧಿಕಾರಿಗಳು, ಮುಖಂಡರು ಮಳೆಯಲ್ಲಿ ನೆನೆದು ಹೋದರು. ಆದರೆ ಸಿಎಂ ನಗರಕ್ಕೆ ಆಗಮಿಸುತ್ತಿದ್ದಂತೆ ಮಳೆ ಸಂಪೂರ್ಣ ನಿಂತಿತು. ಅಚ್ಚರಿಯ ಸಂಗತಿ ಎಂದರೆ ಕಲಬುರಗಿ ಮಹಾನಗರದಲ್ಲಿ ಒಂದು ಹನಿ ಮಳೆ ಸುರಿಯಲಿಲ್ಲ. ಹೀಗಾಗಿ ವಿಮೋಚನಾ ದಿನಾಚರಣೆ ಹಾಗೂ ಬರ ವೀಕ್ಷಣೆ ಸುಗಮ ಹಾಗೂ ಸರಳವಾಗಿ ನಡೆಯಿತು. 2006ರಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ್ದ ಕುಮಾರಸ್ವಾಮಿ ಬರೋಬ್ಬರಿ 12 ವರ್ಷಗಳ ಬಳಿಕ ಎರಡನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಇದಕ್ಕೂ ಮುನ್ನ ಕುಮಾರಸ್ವಾಮಿ ಅವರನ್ನು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಎಂ.ವೈ. ಪಾಟೀಲ, ಡಾ|ಅಜಯಸಿಂಗ್, ಡಾ| ಉಮೇಶ ಜಾಧವ, ಖನೀಜಾ ಫಾತೀಮಾ, ಮೇಯರ್ ಶರಣು ಮೋದಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸವರಾಜ ತಡಕಲ್, ಮುಖಂಡರಾದ ಕೇದಾರಲಿಂಗಯ್ಯ ಹಿರೇಮಠ, ದೇವೇಗೌಡ ತೆಲ್ಲೂರ, ಬಸವರಾಜ ಡಿಗ್ಗಾವಿ, ರಾಜೇಂದ್ರ ಪಾಟೀಲ ರೇವೂರ ಹಿರಿಯ ಅಧಿಕಾರಿಗಳು, ಸೇರಿದಂತೆ ಮುಂತಾದವರು ಬರಮಾಡಿಕೊಂಡರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೊದಲ ವಿಮಾನವಾಗಿ ನಾನು ಪ್ರಯಾಣಿಸುತ್ತಿದ್ದ ವಿಮಾನ ಭೂಸ್ಪರ್ಶ
ಮಾಡಿದಾಗ ರೋಮಾಂಚನವಾಯಿತು. ಕಾರ್ಯಾಚರಣೆಗೆ ಸಿದ್ಧವಾಗಿರುವ, ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿರುವ ಈ ವಿಮಾನ ನಿಲ್ದಾಣ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಹೆಬ್ಟಾಗಿಲು ಆಗುವುದು ಎಂಬ ಆಶಾಭಾವ ಮನದಲ್ಲಿ ಮಿಂಚಿತು. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮ, ರಫ್ತು ಉದ್ಯಮಗಳ ಬೆಳವಣಿಗೆಗೆ ಇದು ಪೂರಕವಾಗಲಿದೆ ಎಂಬ ವಿಶ್ವಾಸ ನನ್ನದು.
ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತಿ ಬರ ವೀಕ್ಷಿಸಿದ ಮುಖ್ಯಮಂತ್ರಿ
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕು ಚೌಡಾಪುರ ಹಾಗೂ ಗೊಬ್ಬೂರ (ಬಿ) ಗ್ರಾಮಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿದರು. ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದರ್ಶನ ಪಡೆದ ನಂತರ ಹೆದ್ದಾರಿ ಬದಿ ಚೌಡಾಪುರ ಗ್ರಾಮದ ಸಂತೋಷ ಕುಲಕರ್ಣಿ ಎಂಬುವರ ಹೊಲಕ್ಕೆ ತೆರಳಿ ತೊಗರಿ ಬೆಳೆ ವೀಕ್ಷಿಸಿದರು. ಮಳೆ ಅಭಾವದಿಂದ ತೊಗರಿ ಬೆಳೆ ಕುಂಠಿತವಾಗಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರು
ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ
ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು. ಜಿಲ್ಲೆಯ ಸೇಡಂದಲ್ಲಿ ಎದೆಯಾಳ ಎತ್ತರದಲ್ಲಿ ಬೆಳೆಯಬೇಕಿದ್ದ ತೊಗರಿ ಇಲ್ಲಿ ಮೊಣಕಾಲು ಕೆಳಗೆ ಬೆಳೆದಿದೆ ಎಂದು
ಸಿಎಂ ಅವರ ಗಮನಕ್ಕೆ ತಂದರು. ಬರ ವೀಕ್ಷಣೆ ವೇಳೆ ರೈತರೊಬ್ಬರು ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿ ಬ್ಯಾಂಕ್
ನವರು ನೋಟಿಸ್ ನೀಡಿದ್ದಾರೆ ಎಂದು ಮುಖ್ಯಮಂತ್ರಿಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಸಾಲ ಮನ್ನಾ ಮಾಡಿದೆ. ರೈತರು ಧೈರ್ಯವಾಗಿರಬೇಕು. ವಿಜಯಪುರ
ಜಿಲ್ಲೆಯಲ್ಲಿ ಬೆಳೆ ಸಾಲದ ವಿಷಯವಾಗಿ ರೈತರಿಗೆ ನೋಟಿಸ್ ನೀಡಿದ ಬ್ಯಾಂಕ್ ನವರನ್ನು ಜೈಲಿಗೆ ಹಾಕಲಾಗಿದೆ. ಮುಂದೆ ಕೂಡ ಯಾವುದೇ ಬ್ಯಾಂಕ್‌ನವರು ರೈತರಿಗೆ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡಿದ್ದಲ್ಲಿ ಜೈಲಿಗೆ ಹಾಕಲಾಗುವುದು ಎಂದು ಪುನರುಚ್ಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಡಾ| ಅಜಯ್‌ಸಿಂಗ್, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಇದ್ದರು. ಬಡತನ ಹೋಗಿ ಸಮೃದ್ಧಿ ನೆಲೆಸಲಿ
ಅಫಜಲಪುರ : ಒಂದು ಕಡೆ ನೆರೆ. ಮತ್ತೂಂದು ಕಡೆ ಬರ ಪರಿಸ್ಥಿತಿ. ಜನ ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ.
ರಾಜ್ಯದಲ್ಲಿ ಎಲ್ಲರ ಬಡತನ ನಿರ್ಮೂಲನೆಯಾಗಿ ಸಮೃದ್ಧಿ ನೆಲೆಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾರೈಸಿದರು. ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದತ್ತ ಮಹಾರಾಜರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಬಡತನ ದೂರವಾಗಲಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿ. ಉತ್ತಮ ಮಳೆ ಬೆಳೆಯಾಗಿ ಎಲ್ಲರಿಗೂ ಅನುಕೂಲವಾಗಲಿ. ಸಮಸ್ತ ನಾಡಿನ ಜನರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ದತ್ತಾತ್ರೇಯ ಮಹಾರಾಜರ ಪೂಜೆಗೆ ಬಂದಿದ್ದೇನೆ. ದತ್ತನ ನೆನೆದರೆ ಕಷ್ಟ ದೂರವಾಗಲಿದೆ. ದತ್ತ ಮಹಾರಾಜರ ಮಹಿಮೆ ಅಪಾರವಾದದ್ದು ಎಂದು ತಿಳಿಸಿದರು. ರಾಜ್ಯದಲ್ಲಿ ನಡೆದಿರುವ ರಾಜಕೀಯ ಬದಲಾವಣೆಗಳೆಲ್ಲ ಬಿಜೆಪಿ ಪ್ರೇರಿತವಾಗಿವೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು, ಐದು ವರ್ಷ ಪೂರ್ಣಗೊಳಿಸಲಿದೆ. ನಮಗೆ ಜನರ ಕಷ್ಟ ದೂರವಾಗಿಸುವ ಚಿಂತೆ ಇದ್ದರೆ ಬಿಜೆಪಿ ನಾಯಕರು ಕೇವಲ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ. ಅದು ಅವರಿಗೆ ಬಿಟ್ಟಿದ್ದು. ನಮ್ಮ ಮುಂದಿನ ಗುರಿಗಳನ್ನು ಮುಟ್ಟಲು ಜನರ ಬಳಿಗೆ ಬಂದಿದ್ದೇನೆ. ಜನರ ಕಷ್ಟ ಅವರ ಬಳಿ ಹೋಗಿ ತಿಳಿದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.